– ಸಂದರ್ಶನ: ಸುಮಲತಾ ಎನ್.
ಸಿನಿಮಾದಲ್ಲಿನ ಪಾತ್ರಗಳನ್ನು ತಿದ್ದಿ ತೀಡುವ, ಅಭಿನಯವನ್ನು ಪಕ್ವ ಮಾಡಿಕೊಳ್ಳಲು ತರಬೇತಿ ಕೊಡುವ ಅತುಲ್ ಮೊಂಗಿಯಾ ಕಾರ್ಯಾಗಾರ ನಡೆಸಿಕೊಡಲು ನಗರಕ್ಕೆ ಬಂದಿದ್ದರು. ಇದೇ ಸಂದರ್ಭದಲ್ಲಿ, ಪಾತ್ರ ನಿರ್ದೇಶಕರ ಪ್ರಾಮುಖ್ಯ, ಪಾತ್ರದ ಆಯ್ಕೆ, ನಟನೆ, ಸಿನಿಮಾದಲ್ಲಿನ ಪಾತ್ರಗಳಿಗೆ ಕಸುವು ತುಂಬಲು ಇರಬೇಕಾದ ಕೌಶಲಗಳ ಕುರಿತು ಮಾತನಾಡಿದರು.
‘ಲುಟೇರಾ’, ‘ಕ್ವೀನ್’, ‘ಲವ್ ಸೆಕ್ಸ್ ಔರ್ ದೋಖಾ’, ‘ಶಾಂಘೈ’ನಂಥ ಸಿನಿಮಾಗಳಿಗೆ ಪಾತ್ರ ನಿರ್ದೇಶಕರಾಗಿದ್ದ, ನೂರಾರು ಅಭಿನಯ ಕಾರ್ಯಾಗಾರಗಳನ್ನೂ ನಡೆಸಿಕೊಟ್ಟಿರುವ ಅತುಲ್ ಮೊಂಗಿಯಾ ನಿರ್ದೇಶನದತ್ತ ಮನಸ್ಸು ಮಾಡಿದ್ದಾರೆ.
ನಿರ್ದೇಶನ, ನಟನೆ, ಅಭಿನಯ ತರಬೇತಿ… ಇವುಗಳಲ್ಲಿ ಹೆಚ್ಚು ಸವಾಲಿನದ್ದು ಯಾವುದು?
ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಸವಾಲುಗಳಿರುತ್ತವೆ. ಪ್ರತಿ ಸ್ಥಾನಕ್ಕೂ ಅದರದ್ದೇ ಆದ ಜವಾಬ್ದಾರಿಯೂ ಇರುತ್ತದೆ. ನಾನು ನಿರ್ದೇಶನದಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ಸದ್ಯಕ್ಕೆ ಸವಾಲೆನಿಸಿರುವುದು ನಿರ್ದೇಶನ.
ನಟನೆ ಪರಿಪಕ್ವಗೊಳ್ಳಲು ಅಗತ್ಯವಾದ ಬಹು ಮುಖ್ಯ ಅಂಶ ಯಾವುದು?
ನಟನೆಯನ್ನು ಒಂದು ಚೌಕಟ್ಟಿನಲ್ಲಿ ನೋಡುತ್ತಾರೆ. ಅದು ಹಾಗಾಗಬಾರದು. ನಟನೆಗೆ ಬಹು ಮುಖ್ಯವಾಗಿ ಬೇಕಿರುವುದು ಪ್ರಾಮಾಣಿಕತೆ. ತನ್ನ ಕೆಲಸಕ್ಕೆ ಬದ್ಧರಾಗಿರಬೇಕು. ಪಾತ್ರನಿಷ್ಠೆಯಿಂದ ಕೆಲಸ ಮಾಡುವುದರಲ್ಲೇ ನಟನೆಯ ಜೀವಾಳ ಇರುವುದು.
ನಟನಾ ತರಬೇತಿ, ಪಾತ್ರ ನಿರ್ದೇಶನದಲ್ಲಿ ಎದುರಾಗುವ ಸವಾಲು ಯಾವುದು?
ಬದಲಾವಣೆಗೆ ಒಗ್ಗಿಕೊಳ್ಳದ ಮನಸ್ಸುಗಳೊಂದಿಗೆ ಕೆಲಸ ಮಾಡುವುದು ಸವಾಲು. ಅವರ ಮನಃಸ್ಥಿತಿ, ಆಲೋಚನೆಗಳು ಭಿನ್ನವಾಗಿದ್ದಾಗ ಕಲಿಸುವುದು ಅತಿ ದೊಡ್ಡ ತೊಡಕು. ಇವೆಲ್ಲವನ್ನೂ ಮೀರಿ ಕಲಿಸಲೇಬೇಕಾಗುತ್ತದೆ. ಇನ್ನು, ಸಿನಿಮಾಗಳಿಗೆ ತಕ್ಕಂತೆ ಪಾತ್ರಧಾರಿಗಳನ್ನು ರೂಪಿಸುವುದು ಪಾತ್ರ ನಿರ್ದೇಶಕನಿಗಿರುವ ಸವಾಲು.
ನಟನಾ ಕಾರ್ಯಾಗಾರಗಳಿಗೆ ಬೇಡಿಕೆ ಹಾಗೂ ಯುವಜನರ ಪಾಲ್ಗೊಳ್ಳುವಿಕೆ ಹೇಗಿದೆ?
ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ನಟನೆಯನ್ನು ಗಂಭೀರವಾಗಿ ಪರಿಗಣಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ನನಗೆ ತಿಳಿದಿರುವಂತೆ ಮುಂಬೈನಲ್ಲಿ ಕಳೆದ ಐದು ವರ್ಷಗಳಿಂದ ಈ ರೀತಿ ತರಬೇತಿ ಪಡೆದುಕೊಳ್ಳುವವರ ಸಂಖ್ಯೆ ಗಣನೀಯವಾಗಿ ಏರಿದೆ. ಯುವಜನರೊಂದಿಗೆ ಕೆಲಸ ಮಾಡುವುದು ತುಂಬಾ ಖುಷಿ. ಏಕೆಂದರೆ ಅವರು ಬದಲಾವಣೆಯನ್ನು ಬೇಗ ಒಪ್ಪಿಕೊಳ್ಳುತ್ತಾರೆ, ತೆರೆದುಕೊಳ್ಳುತ್ತಾರೆ. ಪ್ರಯೋಗಗಳನ್ನು ಹೆಚ್ಚು ಇಷ್ಟ ಪಡುತ್ತಾರೆ.
ನಿರ್ದೇಶನದ ಜಾಡಿನಲ್ಲಿನ ನಿಮ್ಮ ನಡೆ ಹೇಗಿದೆ?
‘ಲುಟೇರಾ’, ‘ಟಿಟ್ಲಿ’ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿದ್ದ ಅನುಭವಗಳು ನನ್ನೊಂದಿಗಿವೆ. ಕಿರುಚಿತ್ರಗಳನ್ನೂ ಮಾಡಿದ್ದೇನೆ. ಆದ್ದರಿಂದ ನಿರ್ದೇಶನಕ್ಕೆ ಅಷ್ಟು ತೊಡಕಾಗುವುದಿಲ್ಲ ಎಂಬ ಭರವಸೆ ಇದೆ. ಸದ್ಯಕ್ಕೆ ಸ್ಕ್ರಿಪ್ಟ್‌ಗಳನ್ನು ಬರೆಯುತ್ತಿದ್ದೇನೆ.
ನಿಮ್ಮ ಸಿನಿಮಾಗಳಿಂದ ಜನರಿಗೆ ಏನು ನೀಡಲು ಬಯಸುತ್ತೀರಾ?
ಇದಕ್ಕೆ ಉತ್ತರಿಸುವುದು ಕಷ್ಟ. ಆದರೆ ಹೊಸತನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ನಿಮಗೆ ಯಾವ ರೀತಿಯ ಸಿನಿಮಾಗಳೆಂದರೆ ಇಷ್ಟ?
ಪದೇ ಪದೇ ಒಂದೇ ವಿಷಯವನ್ನೇ ಬೇರೆ ಬೇರೆ ರೀತಿ ಹೇಳುವ ಸಿನಿಮಾಗಳೆಂದರೆ ಬೋರು. ಆದ್ದರಿಂದ ಒಂದಕ್ಕಿಂತ ಒಂದು ವಿಭಿನ್ನ ಎನ್ನಿಸುವ ಸಿನಿಮಾಗಳೆಂದರೆ ಇಷ್ಟ. ತಾಜಾ ವಿಷಯ, ನಿರೂಪಣೆಯೊಂದಿಗೆ ಸಿನಿಮಾ ಇರಬೇಕು.
ಕಾಸ್ಟಿಂಗ್ ಡೈರೆಕ್ಟರ್‌ಗೆ ಇರಬೇಕಾದ ಅತಿ ಮುಖ್ಯ ಅರ್ಹತೆ ಏನು?
ಆ ಜಾಗದಲ್ಲಿದ್ದ ಮೇಲೆ ಮನೋವಿಜ್ಞಾನಿಯಂತಿರಬೇಕು. ಅಭ್ಯರ್ಥಿಗಳ ಸಾಮರ್ಥ್ಯ, ದೌರ್ಬಲ್ಯವನ್ನು ಅರಿತು ಕೆಲಸ ಮಾಡಬೇಕು. ಅವರಲ್ಲಿನ ನಟನಾ ಕೌಶಲಕ್ಕೆ ರೂಪ ನೀಡಬೇಕು.
ಇತ್ತೀಚಿನ ಸಿನಿಮಾಗಳಿಗೆ ಅಭಿನಯ ಕೌಶಲಕ್ಕಿಂತ ಗ್ಲಾಮರ್ ಮುಖ್ಯ ಎನ್ನುವ ಆರೋಪವಿದೆ. ನಿಮ್ಮ ಅನಿಸಿಕೆ ಏನು?
ಈ ಅಭಿಪ್ರಾಯ ಯಾವ ರೀತಿಯ ಸಿನಿಮಾ ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ. ಕೆಲವು ಪಾತ್ರಗಳು ಸುಂದರವಾಗಿರುವುದನ್ನೇ ಕೇಳುತ್ತವೆ. ಇನ್ನು ಕೆಲವು ಪಾತ್ರಗಳು ಹೆಚ್ಚಿನ ಅಭಿನಯ ಕೌಶಲ ಬೇಡುತ್ತವೆ. ಅದಕ್ಕೆ ತಕ್ಕಂತೆ ಪಾತ್ರಗಳ ಆಯ್ಕೆ ಇರುತ್ತದೆ. ಇದನ್ನು ಸಾಮಾನ್ಯೀಕರಿಸುವುದು ಬೇಡ.
ಬೆಂಗಳೂರಿನ ಕಾರ್ಯಾಗಾರದ ಬಗ್ಗೆ ಹೇಳಿ…
ತುಂಬಾ ಒಳ್ಳೆಯ ಅನುಭವ. ಹೊಸ ಜನ, ಹೊಸ ವಾತಾವರಣ. ಎಲ್ಲರ ಆಸಕ್ತಿ ನೋಡಿ ಖುಷಿಯಾಯಿತು.
ಬೆಂಗಳೂರಿನ ಬಗ್ಗೆ…
ಇದು ಬೆಂಗಳೂರಿಗೆ ನನ್ನ ಮೊದಲ ಭೇಟಿ. ಹಸಿರು ತುಂಬಿದ ನಗರ ಇದು. ಜೊತೆಗೆ ಈ ಕಾರ್ಯಾಗಾರವೂ ಒಳ್ಳೆಯ ಅನುಭವಗಳನ್ನು ನೀಡಿದೆ.