ಅಮೃತವರ್ಷಿಣಿ, ಸುಪ್ರಭಾತ ಸೇರಿದಂತೆ ಹಲವಾರು ಉತ್ತಮ ಸದಭಿರುಚಿಯ ಹಾಗೂ ಸಂಗೀತ ಪ್ರಧಾನ ಚಿತ್ರಗಳನ್ನು ನಿರ್ದೇಶಿಸಿದ್ದ ದಿಗ್ದರ್ಶಕ ದಿನೇಶ್‌ಬಾಬು ಅವರು ಈಗ ಮತ್ತೊಂದು ಸಂಗೀತಮಯ ಕಲಾಕೃತಿಯನ್ನು ಕನ್ನಡ ಜನತೆಗೆ ನೀಡಲು ಸಿದ್ಧರಾಗಿದ್ದಾರೆ. ಕೆಲವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಅವರು ನಿರ್ಮಾಪಕ ಮೋಹನ್ ಜೊತೆಗೂಡಿ ಸದ್ದಿಲ್ಲದೆ ತಯಾರಿಸಿರುವ ಈ ಚಿತ್ರದ ಹೆಸರು ಪ್ರಿಯಾಂಕ. ಈ ಚಿತ್ರದ ಮತ್ತೊಂದು ವಿಶೇಷ ಏನೆಂದರೆ ಶ್ರೀಮತಿ ಪ್ರಿಯಾಂಕ ಉಪೇಂದ್ರ ಅವರು ತಮ್ಮ ಹೆಸರಿನ ಚಿತ್ರದಲ್ಲಿ ಅದೇ ಹೆಸರಿನ ಪಾತ್ರದಲ್ಲಿ ನಟಿಸಿರುವುದು.
ಈಗಾಗಲೇ ಶೂಟಿಂಗ್, ಎಡಿಟಿಂಗ್, ಡಬ್ಬಿಂಗ್, ರೀರೆಕಾರ್ಡಿಂಗ್ ಮುಗಿಸಿರುವ ಈ ಚಿತ್ರದ ಮೊದಲ ಪ್ರತಿ ಸದ್ಯದಲ್ಲೇ ಹೊರಬರಲಿದೆ.
ಕಳೆದ ವಾರ ಈ ಚಿತ್ರದ ಟೀಸರ್ ಲಾಂಚ್ ಹಾಗೂ ೩ ಹಾಡುಗಳ ಪ್ರದರ್ಶನ ರೇಣುಕಾಂಬ ಥಿಯೇಟರಿನಲ್ಲಿ ನಡೆಯಿತು. ಕೃಪಾಕರ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಹಾಡುಗಳಿಗೆ ಕೇಶವಚಂದ್ರ ಅತ್ಯುತ್ತಮವಾದ ಸಾಹಿತ್ಯ ರಚಿಸಿದ್ದಾರೆ. ಶಿವಧ್ವಜ್, ತೇಜಸ್ ಹಾಗೂ ಪ್ರಕಾಶ್‌ರೈ, ವೀಣಾ ಸುಂದರ್, ಅವಿನಾಶ್, ಸುಮಿತ್ರ ಉಳಿದ ತಾರಾಗಣದಲ್ಲಿದ್ದಾರೆ. ನೈಜ ಘಟನೆ ಆಧಾರಿತ ಕ್ರೈಂ ಕಥೆಯುಳ್ಳ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಿದು. ಈ ಸಂದರ್ಭದಲ್ಲಿ ಮಾತನಾಡಿದ ನಟಿ ಪ್ರಿಯಾಂಕ, ದಿನೇಶ್‌ಬಾಬು ಅವರ ಮೇಕಿಂಗ್ ಸ್ಟೈಲ್ ನನಗೆ ತುಂಬಾ ಇಷ್ಟ. ನಾನು ಅಭಿನಯಿಸಿದ ೩೫ ಚಿತ್ರಗಳಲ್ಲಿ ಮನಸ್ಸಿಗೆ ಹತ್ತಿರವಾದ ಕೆಲವೇ ಪಾತ್ರಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಿದರು. ನಟ ಪ್ರಕಾಶ್ ರೈ ಮಾತನಾಡಿ, ನಾನು ಈ ಚಿತ್ರದಲ್ಲಿ ಇನ್ಸ್‌ಪೆಕ್ಟರ್ ಪಾತ್ರ ಮಾಡಿದ್ದು ಹಾಸ್ಯಮಿಶ್ರಿತ ಡೈಲಾಗ್‌ಗಳಿವೆ. ಒಬ್ಬ ನಟನನ್ನು ಹೇಗೆ ಬಳಸಿಕೊಳ್ಳಬೇಕೆಂಬುದು ದಿನೇಶ್‌ಬಾಬು ಅವರಿಗೆ ಗೊತ್ತು. ನನ್ನ ಒಗ್ಗರಣೆ ಚಿತ್ರದಲ್ಲಿ ಅಭಿನಯಿಸಿದ್ದ ತೇಜಸ್‌ನನ್ನು ಕೇಳಿ ಕಾಲ್ ಮಾಡಿದ್ದರು. ನಂತರ ನನಗೂ ಅವಕಾಶಕೊಟ್ಟರು. ನಾನು ಸುಮಾರು ೩೦೦ ಚಿತ್ರಗಳಲ್ಲಿ ೨೦೦ಕ್ಕೂ ಹೆಚ್ಚು ನಿರ್ದೇಶಕರ ಜೊತೆ ಕೆಲಸ ಮಾಡಿದ್ದರೂ ಇವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಿಲ್ಲ. ಸೂಕ್ಷ್ಮವಾದ ಎಳೆಯೊಂದನ್ನಿಟ್ಟುಕೊಂಡು ಪ್ರಯತ್ನ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ನಾನು ನಿರ್ವಹಿಸಿದ ಉತ್ತಮ ಪಾತ್ರಗಳಲ್ಲಿ ಇದೂ ಒಂದು ಎಂದು ಖುಷಿಯಿಂದ ಹೇಳಿಕೊಂಡರು.
ನಿರ್ದೇಶಕ ದಿನೇಶ್‌ಬಾಬು ಮಾತನಾಡಿ, ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಕ್ರೈಂ ಘಟನೆಯೊಂದನ್ನಾಧರಿಸಿ ಈ ಸಿನಿಮಾ ಮಾಡಿದ್ದೇನೆ. ಮೈಸೂರು, ಸಕಲೇಶಪುರ, ಹೊರನಾಡು, ಬಾಳೂರಿನ ಟೀ ಎಸ್ಟೇಟ್ ಮೊದಲಾದ ಸ್ಥಳಗಳಲ್ಲಿ ೩೨ ದಿನಗಳ ಕಾಲ ಚಿತ್ರೀಕರಿಸಿದ್ದೇವೆ ಎಂದು ಹೇಳಿದರು.ಎಸ್.ವಿ.ರಾಜೇಂದ್ರಸಿಂಗ್ ಮಾತನಾಡಿ, ದಿನೇಶ್‌ಬಾಬು ಅತ್ಯುತ್ತಮ ನಿರ್ದೇಶಕ. ಅಲ್ಲದೆ ನಟ ಪ್ರಕಾಶ್ ರೈ, ಅಲೆಗ್ಸಾಂಡರ್ ಇದ್ದ ಹಾಗೆ. ಎಲ್ಲಾ ಕಡೆ ಗೆದ್ದುಕೊಂಡು ಬರ್ತಾಿರೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಕೃಪಾಕರ್ ಚಿತ್ರದ ಹಾಡುಗಳು ಹಾಗೂ ಸಾಹಿತ್ಯದ ಬಗ್ಗೆ ಮಾತನಾಡಿದರು.