ಬೆಂಗಳೂರು (ಪಿಟಿಐ): ‘ಭಾರತ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿಯಾಗಿಯೇ ಇದೆ. ಮಹೇಂದ್ರ ಸಿಂಗ್ ದೋನಿ ಮತ್ತು ವಿರಾಟ್ ಕೊಹ್ಲಿ ನಡುವೆ ಯಾವುದೇ ಒಡಕು ಇಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಟಿ. ಮಾಧ್ಯಮಗಳು ಸುಳ್ಳು ಸುದ್ದಿಗಳಿಗೆ ಮಹತ್ವ ಕೊಡಬಾರದು…’ –ಭಾರತ ತಂಡದ ವೇಗದ ಬೌಲರ್ ಮಹಮ್ಮದ್ ಶಮಿ ಮಾಡಿಕೊಂಡ ಮನವಿ ಇದು.
ಬಾಂಗ್ಲಾದೇಶ ಎದುರಿನ ಏಕದಿನ ಸರಣಿಯನ್ನು ಸೋತ ಬಳಿಕ ಭಾರತ ತಂಡದಲ್ಲಿ ಒಡಕು ಉಂಟಾಗಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಒಡಕಿತ್ತು ಎಂದು ಮಾಧ್ಯಮಗಳಲ್ಲಿ ಇತ್ತೀಚಿಗೆ ವರದಿ ಯಾಗಿತ್ತು. ಈ ಬಗ್ಗೆ ಕೆಲ ಮಾಜಿ ಆಟ ಗಾರರೂ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ, ಈ ಎಲ್ಲಾ ವಿವಾದವನ್ನು ಬಲಗೈ ವೇಗಿ ಶಮಿ ಅಲ್ಲಗೆಳೆದಿದ್ದಾರೆ.
‘ದೋನಿ ಹಾಗೂ ಕೊಹ್ಲಿ ಇಬ್ಬರ ಜೊತೆಗೂ ನಾನು ಡ್ರೆಸ್ಸಿಂಗ್ ಕೊಠಡಿ ಹಂಚಿಕೊಂಡಿದ್ದೇನೆ. ಅವರ ಸ್ವಭಾವ ಏನೆಂಬುದು ಚೆನ್ನಾಗಿ ಗೊತ್ತು. ಇವರ ನಡುವೆ ಏನೂ ಒಡಕಿಲ್ಲ. ಈ ವಿವಾದವೆಲ್ಲವೂ ಮಾಧ್ಯಮಗಳ ಸೃಷ್ಟಿ. ಆಧಾರ ರಹಿತವಾದ ಸುದ್ದಿಗಳಿಗೆ ಮಹತ್ವ ಕೊಡಬೇಡಿ’ ಎಂದು ಶಮಿ ನುಡಿದರು.
ಗಾಯದಿಂದ ಚೇತರಿಸಿ ಕೊಳ್ಳುತ್ತಿರುವ ಶಮಿ ಫಿಟ್‌ನೆಸ್‌ಗಾಗಿ ಇಲ್ಲಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬಂಗಾಳದ ಈ ಬೌಲರ್ ಎಡಗಾಲಿನ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. 25 ವರ್ಷದ ಶಮಿ 2013ರ ಜನವರಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 12 ಟೆಸ್ಟ್‌ಗಳಿಂದ 47 ವಿಕೆಟ್ ಪಡೆದಿದ್ದಾರೆ. 47 ಏಕದಿನ ಪಂದ್ಯಗಳಿಂದ 87 ವಿಕೆಟ್ ಕಬಳಿಸಿದ್ದಾರೆ.
‘ದೋನಿಯವರ ನಾಯಕತ್ವದ ಬಗ್ಗೆ ಅಪಾರ ಹೆಮ್ಮೆಯಿದೆ. ಏಕದಿನ ಮತ್ತು ಟ್ವೆಂಟಿ–20 ವಿಶ್ವಕಪ್‌ಗಳನ್ನು ತಂದುಕೊಟ್ಟ ನಾಯಕ ಅವರು. ಒಂದು ಸರಣಿಯಲ್ಲಿ ಸೋಲು ಕಂಡಾಕ್ಷಣ ನಾಯಕತ್ವದಿಂದ ತೆಗೆದು ಹಾಕಬೇಕು ಎನ್ನುವುದು ಒಪ್ಪುವಂಥದ್ದಲ್ಲ. ನಾಯಕರಾಗಿ ಸಾಧನೆ ಏನು ಎಂಬುದಕ್ಕೆ ಅವರು ಮಾಡಿರುವ ದಾಖಲೆಗಳೇ ಸಾಕ್ಷಿ. ಅವರೇ ನಾಯಕರಾಗಿ ಮುಂದುವರಿಯಬೇಕು’ ಎಂದು ಶಮಿ ನುಡಿದರು.
‘ಗಾಯದ ಸಮಸ್ಯೆಯಿಂದ ಈಗ ತಾನೆ ಚೇತರಿಸಿಕೊಳ್ಳುತ್ತಿದ್ದೇನೆ. ಕಳೆದ ಐದಾರು ದಿನಗಳಿಂದ ಫಿಟ್‌ನೆಸ್ ತರಬೇತಿ ಪಡೆಯುತ್ತಿದ್ದೇನೆ. ದೇಹ ನಿಧಾನವಾಗಿ ಸ್ಪಂದಿಸುತ್ತಿದೆ. ಬೌಲಿಂಗ್ ಅಭ್ಯಾಸ ಯಾವಾಗ ಆರಂಭಿಸುತ್ತೇನೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಬೇಗನೆ ಚೇತರಿಸಿಕೊಂಡರೆ ಮುಂದಿನ ತಿಂಗಳು ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತೇನೆ’ ಎಂದು ಶಮಿ ತಿಳಿಸಿದರು.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಆತಿಥ್ಯದಲ್ಲಿ ಇದೇ ವರ್ಷ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಏಳು ಪಂದ್ಯಗಳಿಂದ 17 ವಿಕೆಟ್ ಉರುಳಿಸಿದ್ದರು.
ಒಟ್ಟು ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಇವರಾ ಗಿದ್ದರು. ಬಾಂಗ್ಲಾ ಎದುರಿನ ಏಕದಿನ ಸರಣಿಯಲ್ಲಿ ಭಾರತದ ಬೌಲಿಂಗ್ ಬಗ್ಗೆ ಮಾತನಾಡಿದ ಶಮಿ ‘ಬಾಂಗ್ಲಾ ಎದುರು ನಮ್ಮ ತಂಡದ ಬೌಲಿಂಗ್ ಹೇಳಿಕೊಳ್ಳು ವಂತೇನೂ ಇರಲಿಲ್ಲ. ಹೊಸ ಚೆಂಡಿನೊಂದಿಗೆ ಇನಿಂಗ್ಸ್ ಆರಂಭಿಸಿದ ಮೊದಲ ಹತ್ತು ಓವರ್‌ಗಳಲ್ಲಿ ವಿಕೆಟ್ ಪಡೆಯಲು ಗಮನ ಹರಿಸಬೇಕಿತ್ತು. ನಮಗೆ ಬೇಗನೆ ವಿಕೆಟ್ ಪಡೆಯಲು ಸಾಧ್ಯವಾಗದ ಕಾರಣ ಬಾಂಗ್ಲಾ ಉತ್ತಮವಾಗಿ ರನ್ ಕಲೆ ಹಾಕಿತು’ ಎಂದೂ ಅವರು ಹೇಳಿದರು.