ಟೊರೆಂಟೊ, ಜೂ.29: ಭಾರತದ ಅಗ್ರ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಕೆನಡಾ ಓಪನ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ನ ಸೆಲೇನಾ ಮತ್ತು ಇಫ್ಕೀ ಮುಸ್ಕೀನ್ಸ್ ಜೋಡಿಯನ್ನು 21-19, 21-16ರ ನೇರ ಸೆಟ್‌ಗಳಲ್ಲಿ ಮಣಿಸಿದ ಭಾರತದ ಜೋಡಿ ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಮೊದಲ ಸೆಟ್ ಭಾರೀ ಹಣಾಹಣಿಯಿಂದ ಕೂಡಿ ನೆದರ್‌ಲ್ಯಾಂಡ್‌ನ ಆಕ್ರಮಣಕಾರಿ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಜ್ವಾಲಾ ಮತ್ತು ಅಶ್ವಿನಿ ಕೂದಲೆಳೆ ಅಂತರದಲ್ಲಿ ಪಾಯಿಂಟ್ಸ್ ಪಡೆದು ಜಯ ಸಾಧಿಸಿತು.
ನಂತರ ನಡೆದ ಎರಡನೇ ಸೆಟ್‌ನಲ್ಲಿ ಸಮಬಲದ ಹೋರಾಟ ಕಂಡುಬಂದರೂ ಗೆಲುವಿನ ಛಲದಲ್ಲಿದ್ದಂತೆ ಕಂಡುಬಂದ ಜ್ವಾಲಾ ಅದ್ಭುತ ರಿಟನ್ಸ್ ಶಾರ್ಟ್ಸ್ ನಲ್ಲಿ ಪಾಯಿಂಟ್ ಗಿಟ್ಟಿಸಿ ತಂಡದ ಗೆಲುವನ್ನು ಖಾತರಿಪಡಿಸಿದರು. ಇದಕ್ಕೆ ಅಶ್ವಿನಿ ಪೊನ್ನಪ್ಪ ಕೂಡ ಕೈಜೋಡಿಸಿ ಯಾವುದೇ ತಪ್ಪಾಗದಂತೆ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಅಂತಿಮವಾಗಿ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಲಂಡನ್ ಒಲಂಪಿಕ್ಸ್ ನಂತರ ಭಾರತದ ಬ್ಯಾಡ್ಮಿಂಟನ್ ಜೋಡಿ ದೊಡ್ಡ ಸಾಧನೆ ಮಾಡಿದೆ.