ಹೈದರಾಬಾದ್, ಜು.14: ವಿಶ್ವದೆಲ್ಲೆಡೆ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಕೇವಲ ಮೂರು ದಿನಗಳಲ್ಲಿ 187 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ನಾಲ್ಕನೆ ದಿನಕ್ಕೆ ಅದು 200 ಕೋಟಿ ದಾಟುವ ಸಾಧ್ಯತೆಗಳಿದ್ದು, ಈ ಚಿತ್ರ ಬಾಲಿವುಡ್ ಚಿತ್ರಗಳ ಗಳಿಕೆಯ ದಾಖಲೆಯನ್ನು ಮುರಿಯುವ ಸಾಧ್ಯತೆಗಳು ನಿಚ್ಚಳವಾಗಿದೆ.
ಐದು ಭಾಷೆಗಳಲ್ಲಿ ಬಾಹುಬಲಿ ಬಿಡುಗಡೆಯಾಗಿದ್ದು, ಹಿಂದಿ ಮತ್ತು ಫ್ರೆಂಚ್ ಭಾಷೆಗಳು ಸೇರಿದಂತೆ ಎಲ್ಲ ಆವೃತ್ತಿಗಳಲ್ಲಿ ಪ್ರಥಮ ವಾರದಲ್ಲೇ ಅತಿ ಹೆಚ್ಚು ಹಣ ಗಳಿಸಿದ ದಾಖಲೆಗೆ ಪಾತ್ರವಾಗಿದೆ. ಈ ಹಿಂದೆ ಬಾಲಿವುಡ್‌ನ ಪಿಕೆ ಚಿತ್ರ ಗಳಿಸಿದ್ದ ಅತಿ ಹೆಚ್ಚು ಗಳಿಕೆಯನ್ನು ಈ ಚಿತ್ರ ಹಿಂದಿಕ್ಕಿ ಮುನ್ನಡೆದಿದೆ. ಪಿಕೆ ಚಿತ್ರ ಮೊದಲ ವಾರದಲ್ಲೇ ವಿಶ್ವದಾದ್ಯಂತ ಬಿಡುಗಡೆ ಕಂಡು 200 ಕೋಟಿ ಗಳಿಕೆ ದಾಟಿತ್ತು. ಆದರೆ, ಬಾಹುಬಲಿ ಕೇವಲ ನಾಲ್ಕು ದಿನಗಳಲ್ಲೇ ಆ ದಾಖಲೆಯನ್ನು ಮುರಿದಿದೆ.
ಪಿಕೆ ಚಿತ್ರ 200 ಕೋಟಿ ಗಳಿಸಲು ಆರು ದಿನಗಳನ್ನು ಪಡೆದಿತ್ತು. ಆದರೆ, ಬಾಹುಬಲಿ ಕೇವಲ ನಾಲ್ಕು ದಿನಗಳಲ್ಲಿ ಆ ದಾಖಲೆ ಮುರಿದಿದೆ. ಹಿಂದಿ ಭಾಷೆಯ ಬಾಹುಬಲಿ ಬಿಡುಗಡೆಯಾದ ಮೊದಲ ವಾರದ ಕೊನೆಯ ವೇಳೆಗೆ 22.35 ಕೋಟಿ ಹಣ ಗಳಿಸುವ ನಿರೀಕ್ಷೆಯಿದೆ. ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ.
ಕಳೆದ ಭಾನುವಾರ ಚಿತ್ರ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲಿ ಟಿಕೆಟ್‌ಗಳು ಮುಂಗಡವಾಗಿಯೇ ಮಾರಾಟವಾಗಿದ್ದವು. ಅಂದಿನ ಗಳಿಕೆ ಮತ್ತು ಚಿತ್ರಕ್ಕೆ ಲಭಿಸಿದ ಪ್ರಚಾರ ದಿನದಿಂದ ದಿನಕ್ಕೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಜು.10ರಂದು ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರದ ಪ್ರಧಾನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರೆ, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಕೃಷ್ಣ, ಸತ್ಯರಾಜ್, ನಾಸರ್, ಅಡಿವಿಶೇಷ್ ಮುಂತಾದವರ ಅದ್ಧೂರಿ ತಾರಾಗಣ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆದೊಯ್ಯುತ್ತಿದೆ.