ಮುಂಬೈ: ಸದಾ ಒಂದಲ್ಲಾ ಒಂದು ವಿವಾದದಿಂದ ಸುದ್ದಿಯಾಗುತ್ತಲೇ ಇರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಈಗ ತನ್ನ ಸಹೋದರಿ ಅರ್ಪಿತಾ ಖಾನ್ ಮಾಡಿಕೊಂಡ ಅವಾಂತರದಿಂದ ಸುದ್ದಿಯಾಗಿದ್ದಾರೆ.
ಪಾರ್ಟಿ ಹೆಸರಲ್ಲಿ ಎಲ್ಲೆಮೀರುವಂತೆ ಮ್ಯೂಸಿಕ್ ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ನೆರೆಹೊರೆಯವರ ದೂರು ಆಧರಿಸಿ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ನಡೆದಿದೆ. ಪಾರ್ಟಿಯಲ್ಲಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಪಾರ್ಟಿ ಅರ್ಪಿತಾ ಖಾನ್ ಹೆಸರಲ್ಲಿ ಸಂತೋಷ್ ಮಾನೆ ಎನ್ನುವವರು ಆಯೋಜಿಸಿದ್ದರು ಎನ್ನಲಾಗಿದೆ.
ಅಷ್ಟಕ್ಕೂ ಈ ಘಟನೆ ನಡೆದಿರುವುದು ತಡರಾತ್ರಿ 2.30ರ ಸುಮಾರಿಗೆ. ಪಾಲಿ ಹಿಲ್ನಲ್ಲಿರುವ ಈ ಮನೆಯಲ್ಲಿ ರಾತ್ರಿಯೆಲ್ಲಾ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಕುಣಿದು ಸದ್ದು ಮಾಡುತ್ತಿರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದ ನೆರೆಹೊರೆಯವರು ತಕ್ಷಣ ಸಮೀಪದ ಖಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಅರ್ಪಿತಾ ಖಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರನ್ನು ಕಾಣುತ್ತಿದ್ದಂತೆ ಮ್ಯೂಸಿಕ್ ನಿಲ್ಲಿಸಿದ ಆಯೋಜಕ ಮಾನೆಗೆ ನಿಯಮದಂತೆ 12,500 ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೇ ಮಾನೆ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಸೆಕ್ಷನ್ 33 (ಆರ್) (3) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.