ನಿರ್ದೇಶಕ ರಾಜಮೌಳಿ ಕಚೇರಿ ಮೂಲಗಳ ಮಾಹಿತಿ ಪ್ರಕಾರ ‘ಬಾಹುಬಲಿ -2’ ಚಿತ್ರದ ಶೀರ್ಷಿಕೆ ‘ಮಹಾಬಲಿ’ ಎಂದಾಗಲಿದೆ. ಸರಣಿ ಚಿತ್ರ ಈ ಶೀರ್ಷಿಕೆಯಡಿ ತಯಾರಾಗಲಿದ್ದು ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ‘ಬಾಹುಬಲಿ’ ಶೂಟಿಂಗ್ ಸಂದರ್ಭದಲ್ಲೇ ಸರಣಿ ಚಿತ್ರಕ್ಕೂ ಕೆಲವು ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗಿತ್ತಂತೆ.
‘ಬಾಹುಬಲಿ’ ಭರ್ಜರಿ ಯಶಸ್ಸಿನೊಂದಿಗೆ ಚಿತ್ರತಂಡದ ಎಲ್ಲರೂ ಮತ್ತಷ್ಟು ಹುರುಪಿನಿಂದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ರಾಜಮೌಳಿಗೆ ಬಾಲಿವುಡ್‌ನಿಂದ ಭರ್ಜರಿ ಆಹ್ವಾನಗಳು ಸಿಗುತ್ತಿವೆ. ಅಲ್ಲಿನ ದೊಡ್ಡ ಬ್ಯಾನರ್‌ಗಳಾದ ಕರಣ್ ಜೋಹರ್, ಸಾಜಿದ್ ನಾಡಿಯಾವಾಲಾ, ಮಧು ಮಂಥೇನಾ ಹಾಗೂ ಇನ್ನಿತರರು ತಮಗೆ ಸಿನಿಮಾ ಮಾಡಿಕೊಡುವಂತೆ ರಾಜಮೌಳಿಗೆ ಕರೆ ಕೊಟ್ಟಿದ್ದಾರೆ.
ಹಾಗೆ ನೋಡಿದರೆ ಈ ಹಿಂದೆಯೇ ರಾಜಮೌಳಿ ‘ರೌಡಿ ರಾಥೋಡ್’ ಹಿಂದಿ ಚಿತ್ರ ನಿರ್ದೇಶಿಸಬೇಕಿತ್ತು. ಆದರೆ ‘ಬಾಹುಬಲಿ’ಗೆ ಯೋಜನೆ ರೂಪಿಸುತ್ತಿದ್ದ ಅವರು ಒಲ್ಲೆ ಎಂದಿದ್ದರು. ಇದೀಗ ಗೆಲುವು ಅವರಿಗೆ ಮಹತ್ವದ ಅವಕಾಶಗಳ ಬಾಗಿಲು ತೆರೆದಿದೆ.