ಕರಾಚಿ: ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂ ಅವರ ಕಾರಿನ ಮೇಲೆ ಬಂದೂಕುಧಾರಿಯಿಂದ ಗುಂಡಿನ ದಾಳಿಯಾಗಿದ್ದು, ಸ್ವಲ್ಪದರದಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದ ಬಳಿ ಬುಧವಾರ ನಡೆದಿದೆ.
ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದ ಬಳಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಬೈಕಿನಿಂದ ಬಂದ ಅನಾಮಿಕ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ವಾಸೀಂ ಅಕ್ರಂ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆ ವೇಳೆ ವಾಸೀಂ ಅಕ್ರಂ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತಂತೆ ವಾಸೀಂ ಅಕ್ರಂ ಅವರು ಈಗಾಗಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನಾ ಸ್ಥಳದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಈ ಕುರಿತಂತೆ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿರುವ ವಾಸೀಂ ಅಕ್ರಂ ಅವರು, ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ವೇಗೀಯ ಬೌಲರ್ಸ್ ಗಳಿಗೆ ತರಬೇತಿ ನೀಡಲು ಶಿಬಿರವೊಂದನ್ನು ಏರ್ಪಡಿಸಲಾಗಿತ್ತು. ಹೀಗಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡಲಾಗಿತ್ತು. ಈ ವೇಳೆ ಬೈಕಿನಲ್ಲಿ ಬಂದ ಅನಾಮಿಕ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ನನ್ನ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದ, ನನಗೆ ಯಾರೂ ಈ ವರೆಗೂ ಯಾವುದೇ ರೀತಿಯ ಜೀವ ಬೆದರಿಕೆ ನೀಡಿಲ್ಲ. ಘಟನೆಯಲ್ಲಿ ಬೈಕಿನಲ್ಲಿ ಬಂದ ವ್ಯಕ್ತಿಯ ದ್ವಿಚಕ್ರ ವಾಹನದ ಸಂಖ್ಯೆಯನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ.