ಕೊಚ್ಚಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿರುವ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ ಅವರು ತ್ರಿಭಾಷಾ ಚಿತ್ರವೊಂದರಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ.
ತೆಲುಗು, ತಮಿಳು ಹಾಗೂ ಮಲಯಾಳಂ ಮೂರು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿರುವ ದಕ್ಷಿಣ ಭಾರತ ಬಿಗ್ ಬಜೆಟ್ ಶ್ರೀಶಾಂತ್ ಅಭಿನಯಿಸುತ್ತಿದ್ದು, ಈ ಚಿತ್ರವನ್ನು ಸನಾ ಯಾದಿರೆಡ್ಡಿ ಈ ಚಿತ್ರದ ನಿರ್ಮಿಸುತ್ತಿದ್ದಾರೆ.
ಶ್ರೀಶಾಂತ್ ಹಾಗೂ ಐಪಿಎಲ್‌ಗೆ ಸಂಬಂಧಿಸಿದ ಮಸಾಲೆಭರಿತ ಕಥೆ ಈ ಸಿನಿಮಾದಲ್ಲಿದ್ದು, ಇದು ಕ್ರಿಕೆಟ್ ಹಿನ್ನೆಲೆಯನ್ನು ಒಳಗೊಂಡಿರುವ ಪ್ರೇಮಕಥೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಆರು ತಿಂಗಳಿನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಈ ಸಿನಿಮಾವನ್ನು 14 ಭಾಷೆಗೆ ಡಬ್ ಮಾಡಲಿದ್ದೇವೆ ಎಂದು ಯಾದಿರೆಡ್ಡಿ ತಿಳಿಸಿದ್ದಾರೆ.
ಶ್ರೀಶಾಂತ್ ಉತ್ತಮ ಕ್ರಿಕೆಟಿಗ ಮಾತ್ರ ಅಲ್ಲ. ಅವರು ನೃತ್ಯ ಮತ್ತು ನಟನೆಯಲ್ಲೂ ಪಳಗಿದ್ದಾರೆ ಎಂದು ಯಾದಿರೆಡ್ಡಿ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಶಾಂತ್, ಈಗಾಗಲೇ ಪೂಜಾ ಭಟ್ ನಿರ್ಮಾಣದ ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಿದ ಅನುಭವ ಇದೆ. ಯಾದಿರೆಡ್ಡಿ ಅತ್ಯುತ್ತಮ ನಿರ್ಮಾಪಕರು. ಅವರೊಂದಿಗೆ ಕೆಲಸ ಮಾಡುವ ಅದೃಷ್ಟ ನನಗೆ ಸಿಕ್ಕಿದೆ. ಇದರಿಂದ ನಟನೆಯಲ್ಲಿ ದಕ್ಷಿಣ ಭಾರತದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.