ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅಭಿನಯದ ‘ಶ್ರೀಮಂತುಡು’ ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಮುಂದೆ ಹೋಗುವ ಸಾಧ್ಯತೆಯಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ.
‘ಶ್ರೀಮಂತುಡು’ ಈಗಾಗಲೇ ಬಿಡುಗಡೆ ಸಿದ್ದವಾಗಿದ್ದರೂ ಎಸ್.ಎಸ್. ರಾಜಮೌಳಿಯವರ ನಿರ್ದೇಶನದ ‘ಬಾಹುಬಲಿ’ ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಕನ್ನಡದ ಖ್ಯಾತ ನಟ ಉಪೇಂದ್ರ ಅವರ ಕಾರಣಕ್ಕಾಗಿ ‘ಶ್ರೀಮಂತುಡು’ ಚಿತ್ರದ ಬಿಡುಗಡೆ ಮತ್ತೆ ಮುಂದೆ ಹೋಗಬಹುದೆಂದು ಹೇಳಲಾಗುತ್ತಿದೆ.
ಉಪೇಂದ್ರರವರ ‘ಉಪ್ಪಿ 2’ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹೇಶ್ ಬಾಬು ಅಭಿನಯದ ‘ಶ್ರೀಮಂತುಡು’ ನಿರ್ಮಾಪಕರು ಈ ತೀರ್ಮಾನಕ್ಕೆ ಬಂದಿದ್ದಾರೆಂದು ಹೇಳಲಾಗುತ್ತಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲೂ ಉಪೇಂದ್ರ ಜನಪ್ರಿಯರಾಗಿರುವುದು ಹಾಗೂ ತೆಲುಗು ಚಿತ್ರಗಳಿಗೆ ಕರ್ನಾಟಕ ಎರಡನೇ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಪ್ರದೇಶವಾಗಿರುವುದರಿಂದ ‘ಉಪ್ಪಿ 2’ ಹಾಗೂ ‘ಶ್ರೀಮಂತುಡು’ ಚಿತ್ರಗಳು ಪರಸ್ಪರ ಸ್ಪರ್ಧೆಗೆ ಬೀಳಬಾರದೆಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.