ಉಪ್ಪಿ ಮೇನಿಯಾ ಶುರುವಾಗಿದೆ. ಅಭಿಮಾನಿಗಳು ಉಪ್ಪಿಯ ವಿಭಿನ್ನ ಅವತಾರಗಳನ್ನು ತೆರೆಮೇಲೆ ನೋಡಲು ಕಾತುರರಾಗಿದ್ದಾರೆ. ಈಗಾಗಲೇ ತಮಗೆ ತೋಚಿದಂತೆ ಸಿನಿಮಾದ ಪೋಸ್ಟರ್‌ಗಳನ್ನು ಮಾಡುವ ಮೂಲಕ ಕ್ರೇಜ್ ಹೇಗಿದೆ ಎಂಬುದನ್ನು ತೋರಿಸುತ್ತಿದ್ದಾರೆ. ಅದಕ್ಕೆ ಸರಿಯಾಗಿ ಉಪೇಂದ್ರ ಕೂಡಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅದರಲ್ಲೊಂದು ಉಲ್ಟಾ ಕಟೌಟ್.
ಏನಿದು ಉಲ್ಟಾ ಕಟೌಟ್ ಎಂದು ಅಚ್ಚರಿಪಡಬೇಡಿ. ಉಪ್ಪಿ ಒಂದಲ್ಲ, ಒಂದು ಹೊಸತನ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಇದು ಈ ಉಲ್ಟಾ ಕಟೌಟ್ ಕೂಡಾ ಒಂದು. “ಉಪ್ಪಿ-2′ ಚಿತ್ರ ಬಿಡುಗಡೆಯಾಗುವ ಚಿತ್ರಮಂದಿರಗಳ ಮುಂದೆ ಉಪೇಂದ್ರ ಅವರ ಸೀದಾ ಕಟೌಟ್ ಬದಲು ಉಲ್ಟಾ ಕಟೌಟ್ ನಿಲ್ಲಿಸಲಾಗುತ್ತದಂತೆ. ಈ ಮೂಲಕ ಹೊಸದೊಂದು ದಾಖಲೆಗೆ ಉಪೇಂದ್ರ ಸೇರಿಕೊಳ್ಳುತ್ತಾರೆ. ಚಿತ್ರಮಂದಿರದ ಮುಂದೆ ಉಪೇಂದ್ರ ಅವರ ತಲೆಕೆಳಗಾದ ಕಟೌಟ್ ನೋಡಿ ಪ್ರೇಕ್ಷಕರಿಗೆ ಆಶ್ವರ್ಯ ಆಗಬಹುದು. ಆದರೆ, ಉಪ್ಪಿ ಈ ರೀತಿ ಮಾಡಲು ಅವರ ಕಾನ್ಸೆಪ್ಟ್; ಅದೇನೆಂದರೆ “ನೀವು ಜಗತ್ತನ್ನು ನೋಡುವ ದೃಷ್ಟಿಯನ್ನು ಬದಲಿಸಿಕೊಳ್ಳಿ’ ಎಂಬ ಕಾನ್ಸೆಪ್ಟ್ನೊಂದಿಗೆ ಈ ಉಲ್ಟಾಕಟೌಟ್ ನಿಲ್ಲಿಸಲಾಗುತ್ತಿದೆಯಂತೆ.
ಮತ್ತೂಂದು ವಿಷಯವೆಂದರೆ “ಉಪ್ಪಿ-2′ ಚಿತ್ರ ಕರ್ನಾಟಕ, ಮುಂಬೈ, ಪುಣೆ, ಆಂಧ್ರ ಸೇರಿದಂತೆ ವಿವಿಧ ಕಡೆ ಸುಮಾರು 600ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗಿಗೂ ಚಿತ್ರ ಡಬ್ ಆಗಿದ್ದು, ಕರ್ನಾಟಕದಲ್ಲಿ ಚಿತ್ರ ರಿಲೀಸ್ ಆಗುವ ದಿನವೇ (ಆ.14) ಆಂಧ್ರ, ತೆಲಂಗಾಣದಲ್ಲೂ ಚಿತ್ರ ಬಿಡುಗಡೆಯಾಗಲಿದೆ. “ಉಪ್ಪಿ-2′ ಚಿತ್ರದ ವಿತರಣೆಯ ಹಕ್ಕು ಕೂಡಾ ಒಳ್ಳೆಯ ಬೆಲೆಗೆ ಮಾರಾಟವಾಗಿದೆ. ಇನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ಚಿತ್ರದ ವಿತರಣೆಯ ಹಕ್ಕನ್ನು ಅಲ್ಲಿನ ನಿರ್ಮಾಪಕರೊಬ್ಬರು ಪಡೆದುಕೊಂಡಿದ್ದಾರೆ. ಅನೇಕ ತೆಲುಗು ಚಿತ್ರಗಳಲ್ಲಿ ಉಪೇಂದ್ರ ನಟಿಸಿರುವುದರಿಂದ ಅಲ್ಲೂ ಉಪ್ಪಿಗೆ ಬೇಡಿಕೆ ಇದೆ ಮತ್ತು ಅಲ್ಲಿನ ಪ್ರೇಕ್ಷಕರಿಗೆ ಉಪ್ಪಿ ಕೂಡಾ ಪರಿಚಿತ ಮುಖ. ಅಷ್ಟಕ್ಕೂ “ಉಪ್ಪಿ-2′ ಚಿತ್ರದ ಕಾನ್ಸೆಪ್ಟ್ ಏನು, ಕಥೆಯೇನು ಎಂಬ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಕೇವಲ “ನೀನು’ ಎಂಬುದು ಬಿಟ್ಟರೆ ಬೇರೆ ಯಾವ ಅಂಶವನ್ನೂ ಉಪೇಂದ್ರ ಬಿಟ್ಟುಕೊಟ್ಟಿಲ್ಲ. “ಏನೋ ಮಾಡಿದ್ದೀನಿ, ಗುರುವೋ, ಜನ ಹೇಗೆ ತಗೋತ್ತಾರೋ ನೋಡಬೇಕು’ ಎಂಬುದಷ್ಟೇ ಉಪೇಂದ್ರ ಉತ್ತರವಾಗಿರುತ್ತದೆ.
-ಉದಯವಾಣಿ