ತಲಕಾಡಿನ ಸಮುದಾಯ ಆರೋಗ್ಯ ಕೇಂದ್ರದ ಬಳಿ ಯಾವುದೋ ಕಾರಣಕ್ಕೆ ಹೊಡೆದಾಟ ನಡೆದಿತ್ತು. ಮಾಸ್ ಮಾದ ಹೇಳಿದಂತೆ ಪ್ರಜ್ವಲ್ ದೇವರಾಜ್ ಹಾಗೂ ಸಂತೋಷ್ ಹೊಡೆದಾಡುತ್ತಿದ್ದರು. ಅವರಿಬ್ಬರೂ ನಡೆಸುತ್ತಿದ್ದ ಸೆಣೆಸಾಟವನ್ನು ಬಿಡಿಸದೇ, ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್ ಖುಷಿಯಿಂದ ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದರು!
‘ಭುಜಂಗ’ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಪತ್ರಕರ್ತರು ಭೇಟಿ ನೀಡಿದಾಗ ಮಧ್ಯಾಹ್ನದ ಬಿಸಿಲು ಪ್ರಖರವಾಗಿತ್ತು. ವರುಣಾ ಮಹೇಶ್ ನಿರ್ಮಾಣದ ಈ ಚಿತ್ರದ ನಿರ್ದೇಶಕ ಜೀವ. ಸತತ ನಾಲ್ಕು ದಿನಗಳ ಕಾಲ ನಡೆದ ಚಿತ್ರೀಕರಣವನ್ನು ವೀಕ್ಷಿಸಲು ಸುದ್ದಿಮಿತ್ರರನ್ನು ಆಹ್ವಾನಿಸಲಾಗಿತ್ತು.
ಆಸ್ಪತ್ರೆ ಸುತ್ತಲೂ ದೃಶ್ಯಗಳನ್ನು ಸೆರೆಹಿಡಿಯಬೇಕಿದ್ದುದರಿಂದ ಹಲವೆಡೆ ವಿಚಾರಿಸಿ, ಕೊನೆಗೆ ತಲಕಾಡಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿತ್ರೀಕರಣ ನಡೆಸಲಾಯಿತು. ಶೂಟಿಂಗ್‌ಗೆ ವಿರಾಮ ಹೇಳಿದ ಚಿತ್ರತಂಡ, ಪತ್ರಕರ್ತರ ಜತೆ ಮಾತಿಗಿಳಿಯಿತು. ಇನ್ನು ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಿದರೆ ಮಾತಿನ ಭಾಗ ಮುಕ್ತಾಯ.
ಎರಡು ಹಾಡುಗಳ ಶೂಟಿಂಗ್ ಮುಗಿದರೆ ಕುಂಬಳಕಾಯಿ ಒಡೆದಂತೆ ಎಂಬ ಮಾಹಿತಿ ನೀಡಿದ ನಿರ್ಮಾಪಕ ಮಹೇಶ್, ‘ಈವರೆಗೆ 48 ದಿವಸಗಳ ಕಾಲ ಚಿತ್ರೀಕರಣ ಮಾಡಲಾಗಿದೆ, ನಾವು ಅಂದುಕೊಂಡ ಬಜೆಟ್‌ಗಿಂತ ಹೆಚ್ಚು ಖರ್ಚಾಗಿದೆ. ಚಿತ್ರದ ಯಾವುದೇ ಸನ್ನಿವೇಶಕ್ಕೂ ಯಾವುದೇ ರೀತಿಯ ಕೊರತೆ ಆಗಬಾರದು ಎಂಬುದು ನಮ್ಮ ಉದ್ದೇಶ’ ಎಂದರು.
ಚಿತ್ರೀಕರಣಕ್ಕೆ ಯಾವುದೇ ಅಡೆತಡೆಯಾಗಿಲ್ಲ ಎಂಬ ಖುಷಿ ನಿರ್ದೇಶಕ ಜೀವ ಅವರದು. ಚಿತ್ರದ ಬಜೆಟ್ ಹೆಚ್ಚಾಗುವ ಸೂಚನೆ ಕಂಡಾಗ ನಿರ್ಮಾಪಕರು ಅದಕ್ಕೆ ಹಸಿರುನಿಶಾನೆ ತೋರಿಸಿರುವುದು ಇನ್ನಷ್ಟು ಖುಷಿ ಕೊಟ್ಟಿದೆ. ‘ಸಿನಿಮಾದ ದ್ವಿತೀಯಾರ್ಧದಲ್ಲಿ ಸಾಹಸ ನಿರ್ದೇಶಕ ಮಾಸ್ ಮಾದ ಬಗೆಬಗೆಯ ಸ್ಟಂಟ್‌ಗಳನ್ನು ಕಂಪೋಸ್ ಮಾಡಿದ್ದಾರೆ. ಮೂರು ಸಾಹಸ ಸನ್ನಿವೇಶಗಳು ಮತ್ತು ಮೂರು ಸಣ್ಣ ಫೈಟಿಂಗ್‌ಗಳಿಗೆ ಎರಡು ವಾರ ಶ್ರಮಿಸಿದ್ದಾರೆ’ ಎಂದು ಜೀವ ಮಾಹಿತಿ ನೀಡಿದರು.
ತಮ್ಮ ವೃತ್ತಿ ಜೀವನದಲ್ಲಿ ಇದೊಂದು ದೊಡ್ಡ ಮಟ್ಟದ ಸಾಹಸ ಭರಿತ ಸಿನಿಮಾ ಎಂಬ ಬಣ್ಣನೆ ಪ್ರಜ್ವಲ್ ದೇವರಾಜ್ ಅವರಿಂದ ಬಂತು. ‘ಗಡ್ಡ-ಮೀಸೆ ಬಿಟ್ಟುಕೊಂಡು ಪಕ್ಕಾ ಪರೋಡಿಯಂತೆ ಇರುವ ಪಾತ್ರ ನನ್ನದು. ಮಾಸ್ ಮಾದ ಅವರಂತೂ ನನ್ನಿಂದ ಸರಿಯಾಗಿ ಕೆಲಸ ತೆಗೆಸಿದ್ದಾರೆ. ನಾನೂ ಹೆಚ್ಚು ಕಾಳಜಿಯಿಂದ ನಟಿಸಿದ್ದೇನೆ. ಸಾಹಸ ಸನ್ನಿವೇಶಗಳಲ್ಲಿ ಡ್ಯೂಪ್ ಇಲ್ಲದೆ ಕೆಲಸ ಮಾಡಿದ್ದೇನೆ’ ಎಂದರು.
ನಾಯಕ ಸಂತೋಷ್ ಈ ಸಿನಿಮಾದಲ್ಲಿ ಅಭಿನಯಿಸಲು ಮುಖ್ಯ ಕಾರಣ– ಪ್ರಜ್ವಲ್ ಅವರೊಂದಿಗಿನ ಗೆಳೆತನ. ‘ನೂರು ಜನ್ಮಕು’ ನಂತರ ಅವರು ಮತ್ತೆ ಸಿನಿಮಾದಲ್ಲಿ ಅಭಿನಯಿಸಲು ಬಂದಿದ್ದಾರೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಪಾಯಕಾರಿ ತಾಣದಲ್ಲಿ ಸಾಹಸಮಯ ದೃಶ್ಯ ಸೆರೆಹಿಡಿಯುವ ಹೊಣೆಯನ್ನು ಗುಂಡ್ಲುಪೇಟೆ ಸುರೇಶ್ ವಹಿಸಿಕೊಂಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ರಾಗ ಸಂಯೋಜಿಸಿದ್ದಾರೆ. ಮೇಘನಾ ರಾಜ್, ಜೈ ಜಗದೀಶ್, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ತಬಲಾ ನಾಣಿ ಇತರರು ಇರುವ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬಿ.ಎ. ಮಧು ಬರೆದಿದ್ದಾರೆ.