ಝಗಮಗಿಸುವ ವೇದಿಕೆ. ವೇದಿಕೆ ಮೇಲೆ ಖಾದಿ ತೊಟ್ಟ ರಾಜಕಾರಣಿಗಳು, ಕಾವಿಧಾರಿ ಸ್ವಾಮೀಜಿಗಳು. ಸಭಾಂಗಣದ ತುಂಬೆಲ್ಲ ಜನ ಜನ ಜನ. ಅದು ‘ಮಾಚಿದೇವ’ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭ. ಬಿ.ಸಿ. ಪಾಟಿಲ್ ಅವರು ಸ್ವಲ್ಪ ಕಾಲದ ಬಿಡುವಿನ ನಂತರ ಮತ್ತೆ ಬಣ್ಣಹಚ್ಚಿರುವ ಚಿತ್ರ ‘ಮಾಚಿದೇವ’.
ಅವರ ರಾಜಕೀಯ ನಂಟಿನ ಕಾರಣ ರಾಜಕಾರಣಿಗಳು ಸಮಾರಂಭಕ್ಕೆ ಬಂದಿದ್ದರೆ, ಬಸವಣ್ಣನ ಸಮಕಾಲೀನರಾದ ಮಾಚಿದೇವನ ಕುರಿತಾದ ಐತಿಹಾಸಿಕ ಚಿತ್ರವೆಂಬ ಕಾರಣಕ್ಕೆ ಸ್ವಾಮಿ ಸಂತರೂ ಹಾಜರಿದ್ದರು. ಬಿಜ್ಜಳ ದೊರೆಯ ಪಾತ್ರದಲ್ಲಿ ಕಾಣಿಸಿಕೊಂಡ ಬಿ.ಸಿ. ಪಾಟೀಲ್, ‘ನಿಜ ಜೀವನದಲ್ಲಂತೂ ಬಿಜ್ಜಳನಾಗಲು ಆಗಿಲ್ಲ. ತೆರೆಯ ಮೇಲಾದರೂ ಸಾಧ್ಯವಾಗುತ್ತಿದೆ. ಸಮಾಜದ ಮೇಲೆ ಬೆಳಕು ಚೆಲ್ಲುವ ಈ ಚಿತ್ರದ ಭಾಗವಾಗಿ ನಾನಿರುವುದು ಸಂತಸವೆನಿಸುತ್ತದೆ’ ಎಂದರು.
ಮಾಚಿದೇವನ ಪತ್ನಿಯಾಗಿ ಚಾರುಲತಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ವಿಜಯ್‌ಕಾಶಿ ಬಸವಣ್ಣನ ಪಾತ್ರ ನಿರ್ವಹಿಸಿದ್ದಾರೆ. ಮಾಚಿದೇವನಾಗಿ ಅಭಿನಯಿಸಿರುವ ಸಾಯಿಕುಮಾರ್ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಹಂಸಲೇಖ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ನಾಲ್ವರು ಹೊಸ ಕನ್ನಡ ಗಾಯಕರನ್ನು ಪರಿಚಯಿಸಿದ್ದಾರೆ. ಎರಡು ಹಾಡುಗಳನ್ನು ಹಂಸಲೇಖ ಅವರೇ ಬರೆದಿದ್ದು ಕೆಲವು ವಚನಗಳನ್ನೂ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
‘ಇಂದಿನ ಬಾಟಲ್ (ಮದ್ಯ), ಬ್ಯಾಟಲ್ (ಗುದ್ದಾಟ) ಮತ್ತು ಕೀಟಲ್ (ಐಟಂ ಡಾನ್ಸ್ ಆಡಿಸಿ ಹುಡುಗಿಯನ್ನು ಕೀಟಲೆ ಮಾಡುವ) ಹಾಡುಗಳ ನಡುವೆ ಮಾಚಿದೇವ ಚಿತ್ರದ ಹಾಡುಗಳು ಬೆಳಕಿನಂತೆ ಕಾಣುತ್ತವೆ’ ಎಂದರು ಹಂಸಲೇಖ. ‘ಸ್ಟ್ರಿಂಗ್ಸ್’ ಎಂಬ ಆಡಿಯೊ ಕಂಪೆನಿಯೊಂದನ್ನು ಸ್ಥಾಪಿಸಿರುವ ಹಂಸಲೇಖ ಈ ಚಿತ್ರದ ಹಾಡುಗಳ ಹಕ್ಕನ್ನೂ ಪಡೆದಿದ್ದಾರೆ.
ಶಿವಮೂರ್ತಿ ಮುರುಘಾಶರಣರು ಮಾತನಾಡಿ, ‘ಶಿವಶರಣರನ್ನು ಹೆಚ್ಚು ಹೆಚ್ಚು ಬೆಳ್ಳಿತೆರೆಯ ಮೇಲೆ ತಂದಷ್ಟು ಶರಣ ಸಂಸ್ಕೃತಿಯನ್ನೂ ಹೆಚ್ಚಾಗಿ ಕಾಣಬಹುದು’ ಎಂದರು. ಸಚಿವ ಎಚ್. ಆಂಜನೇಯ ಅವರು, ‘ಸರ್ಕಾರ ಮತ್ತು ನನ್ನ ಕಡೆಯಿಂದ ಚಿತ್ರಕ್ಕೆ ಬೇಕಾದ ಎಲ್ಲ ಸೌಲಭ್ಯ ಒದಗಿಸಲು ಸಿದ್ಧ’ ಎಂದರು. ಹಾಗೇ ಟಿಕೆಟ್ ಪಡೆದು ಚಿತ್ರದ ಮೊದಲ ಪ್ರದರ್ಶನವನ್ನು ನೋಡುವುದಾಗಿ ಹೇಳಿದರು.
ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಬಗ್ಗೆ ಮಾಚಿದೇವ ನಡೆಸಿದ ಹೋರಾಟ ಮತ್ತು ಅವರ ಜೀವನವನ್ನಾಧರಿಸಿ ನಂದಿಕಾಮೇಶ್ವರ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿ.ಸಿದ್ದೇಶ್ವರ ಹಾಗೂ ಜೆ.ಎಂಜೇರಪ್ಪ ಚಿತ್ರಕ್ಕೆ ಬಂಡವಾಳ ತೊಡಗಿಸಿದ್ದಾರೆ.