ಬೆಂಗಳೂರು: ತಮ್ಮ ಚೊಚ್ಚಲ ನಿರ್ದೇಶನದ ಸಿನೆಮಾಗೆ ಸಹೋದರ ನಟರನ್ನು ಒಂದೆ ಸಿನೆಮಾದಲ್ಲಿ ನಟಿಸುವಂತೆ ಒಪ್ಪಿಸಿರುವ ರವಿವರ್ಮ ಅವರ ಧೈರ್ಯಕ್ಕೆ, ನಿರ್ಮಾಪಕರಾದ ಜಯಣ್ಣ ಭೋಗೇಂದ್ರ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಲಿದ್ದಾರಂತೆ. ಎಸ್ ಎಸ್ ರಾಜಮೌಳಿ ಅವರ ಬಹು ಕೋಟಿ-ಬೃಹತ್ ಬಜೆಟ್ ತೆಲುಗು ಸಿನೆಮಾ ‘ಬಾಹುಬಲಿ’ಯ ಯಶಸ್ಸು ಕೂಡ ಈ ಕನ್ನಡ ನಿರ್ಮಾಪಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ್ದು, ಎಲ್ಲವೂ ಸರಿ ಬಂದರೆ ಈ ಸಿನೆಮಾ ಕನ್ನಡದ ಅತಿ ದೊಡ್ಡ ಬಜೆಟ್ ಸಿನೆಮಾ ಆಗಲಿದೆ ಎನ್ನಲಾಗುತ್ತಿದೆ.
ಈಗಾಗಲೇ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ತಮ್ಮ ಒಪ್ಪಗೆ ಸೂಚಿಸಿದ್ದು, ಈಗ ನಿರ್ದೇಶಕ ಹಾಲಿವುಡ್ಡಿನ ತಂತ್ರಜ್ಞರು ಮತ್ತು ನಟರ ಜೊತೆ ಮಾತುಕತೆ ನಡೆಸಿದ್ದಾರಂತೆ. ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಮುಹೂರ್ತ ನಡೆಯಲಿದ್ದರೂ, ಈ ಸಿನೆಮಾ ಈಗಾಗಲೇ ಪ್ರೇಕ್ಷಕರ ಕಾತರವನ್ನು ಹೆಚ್ಚಿಸುತ್ತ ಬಂದಿದೆಯಂತೆ.
ಮೂಲಗಳ ಪ್ರಕಾರ ಈ ಸಿನೆಮಾದ ಬಜೆಟ್ ೪೦ ಕೋಟಿ ದಾಟಲಿದೆ. ಸಿನೆಮಾದ ಗ್ರಾಫಿಕ್ಸ್ ಗಾಗಿ ಹಾಲಿವುಡ್ ತಂತ್ರಜ್ಞರನ್ನು ಸೆಳೆಯಲಾಗುತ್ತಿದೆ ಎನ್ನುತ್ತವೆ ಮೂಲಗಳು. ದಕ್ಷಿಣ ಭಾರತದ ಇನ್ನೂ ಹಲವಾರು ಜನಪ್ರಿಯ ನಟರ ಜೊತೆ ಮಾತುಕತೆ ಪ್ರಗತಿಯಲ್ಲಿದ್ದು ಎಲ್ಲವೂ ಸುಸೂತ್ರವಾಗಿ ಜರುಗಿದರೆ ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗಿ ೨೦೦ ದಿನಗಳಲ್ಲಿ ಮುಕ್ತಾಯವಾಗಲಿದೆ ಎನ್ನಲಾಗಿದೆ.