ಖ್ಯಾತ ನಟ ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯಿಜಾನ್’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಈ ಚಿತ್ರದ ಕುರಿತು ಕುತೂಹಲಕರ ಮಾಹಿತಿಗಳು ಹೊರ ಬೀಳುತ್ತಿವೆ.
ಮೊದಲಿಗೆ ಈ ಚಿತ್ರವನ್ನು ಕನ್ನಡದಲ್ಲಿ ಮಾಡಬೇಕೆಂದು ತೀರ್ಮಾನಿಸಲಾಗಿತ್ತಾದರೂ ನಾಯಕ ನಟರೊಬ್ಬರು ಒಪ್ಪದ ಕಾರಣ ಬಳಿಕ ಅದನ್ನು ಹಿಂದಿಯಲ್ಲಿ ನಿರ್ಮಿಸಲಾಯಿತೆಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದರು.
ಈಗ ಹೊರ ಬಿದ್ದಿರುವ ಮತ್ತೊಂದು ಮಾಹಿತಿಯಂತೆ ‘ಭಜರಂಗಿ ಭಾಯಿಜಾನ್’ ಚಿತ್ರದ ನಾಯಕರಾಗುವಂತೆ ಮೊದಲಿಗೆ ಮಿಸ್ಟರ್ ಫರ್ಪಕ್ಷನಿಸ್ಟ್ ಅಮೀರ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ ಅವರು ಕೆಲವೊಂದು ಬದಲಾವಣೆಗೆ ಸೂಚಿಸಿದ್ದು, ಚಿತ್ರದ ಕಥೆಗಾರ ವಿಜಯೇಂದ್ರ ಪ್ರಸಾದ್ ಅದಕ್ಕೆ ಒಪ್ಪಲಿಲ್ಲವೆನ್ನಲಾಗಿದೆ. ಆಗ ಅಮೀರ್ ಅವರೇ ಸಲ್ಮಾನ್ ಖಾನ್ ಈ ಪಾತ್ರಕ್ಕೆ ಸೂಕ್ತ ಎಂದು ಸೂಚಿಸಿದರಂತೆ.
ಸ್ವತಃ ಸಲ್ಮಾನ್ ಖಾನ್ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದು, ವಿಜಯೇಂದ್ರ ಪ್ರಸಾದ್ ತಮ್ಮನ್ನು ಭೇಟಿ ಮಾಡಿದ ವೇಳೆ ಈ ಚಿತ್ರವನ್ನು ನಿಮ್ಮ ಪುತ್ರ ರಾಜಮೌಳಿಯವರೇ ನಿರ್ದೇಶಿಸಲಿ ಎಂದು ತಾವು ಹೇಳಿದ್ದಾಗಿ ತಿಳಿಸಿದ್ದಾರೆ. ಆದರೆ ರಾಜಮೌಳಿಯವರು ‘ಬಾಹುಬಲಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದ ಕಾರಣ ಅಂತಿಮವಾಗಿ ಕಬೀರ್ ಖಾನ್ ಈ ಚಿತ್ರವನ್ನು ನಿರ್ದೇಶಿಸಿದರೆಂದು ಹೇಳಲಾಗಿದೆ.