ಮನೋರಂಜನೆ

ನಾಟಕೀಯ ತಿರುವು ಕಂಡ ಪ್ರಥಮ ಟೆಸ್ಟ್ ಪಂದ್ಯ; ಭಾರತಕ್ಕೆ ಹೀನಾಯ ಸೋಲು: ಶ್ರೀಲಂಕಾಕ್ಕೆ 63 ರನ್ನುಗಳ ವಿಜಯ

Pinterest LinkedIn Tumblr

220131

ಗಾಲೆ: ನಾಟಕೀಯ ತಿರುವು ಕಂಡ ಪ್ರಥಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶನಿವಾರ ಭಾರತಕ್ಕೆ ಹೀನಾಯ ಸೋಲುಂಟಾಗಿದೆ. ಗೆಲ್ಲಬಹುದಾದ ಪಂದ್ಯವನ್ನು ಕೈಚೆಲ್ಲಿದ ಭಾರತೀಯ ದಾಂಡಿಗರು, ಶ್ರೀಲಂಕಾಕ್ಕೆ 63 ರನ್ನುಗಳ ವಿಜಯ ಒದಗಿಸಿಕೊಟ್ಟು, ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದ್ದಾರೆ.

ಇತ್ತೀಚಿನ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ನಾಟಕೀಯ ತಿರುವು ಕಂಡ ಪಂದ್ಯದಲ್ಲಿ, ಗೆಲ್ಲಲು 176 ರನ್‌ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತದ ವಿಕೆಟುಗಳು ಪಟಪಟನೆ ಉರುಳುತ್ತಾ ಹೋಗಿ, 49.5 ಓವರುಗಳಲ್ಲಿ ಕೇವಲ 112 ರನ್ ಸೇರಿಸುವಷ್ಟರಲ್ಲಿ ಸರ್ವ ಪತನ ಕಂಡಿತು.

222

Sri Lanka India Cricket

ಎಡಗೈ ಸ್ಪಿನ್ನರ್ ರಂಗನಾ ಹೇರಾತ್ ಅವರು 48 ರನ್ ನೀಡಿ 7 ವಿಕೆಟ್ ಕಿತ್ತು ಮಿಂಚಿದರೆ, ತರೀಂದು ಕೌಶಲ್ ಅವರು ಉಳಿದ ವಿಕೆಟುಗಳನ್ನು 47 ರನ್ ನೀಡಿ ತಮ್ಮದಾಗಿಸಿಕೊಂಡರು.

ಮೊದಲ ಇನ್ನಿಂಗ್ಸ್‌ನಲ್ಲಿ 192 ರನ್ನುಗಳಷ್ಟು ಹಿನ್ನಡೆ ಕಂಡಿದ್ದ ಆತಿಥೇಯ ಶ್ರೀಲಂಕಾ, ಎರಡನೇ ಇನ್ನಿಂಗ್ಸ್‌ನಲ್ಲಿ ಸ್ವಲ್ಪ ಚೇತರಿಸಿಕೊಂಡಿತ್ತು. ಶುಕ್ರವಾರ ಭೋಜನ ವಿರಾಮ ವೇಳೆಗೆ 5 ವಿಕೆಟ್ ಕಳೆದುಕೊಂಡು 95 ರನ್ ಸೇರಿಸಿದ್ದ ಶ್ರೀಲಂಕಾ ಪರವಾಗಿ ದಿನೇಶ್ ಚಾಂದಿಮಲ್ ಅವರು ಚೇತರಿಕೆ ನೀಡಿ, ಅಜೇಯ 162 ರನ್ ದಾಖಲಿಸಿ ತಂಡವನ್ನು ಮೇಲೆತ್ತಿದ್ದರು. ಆಗಲೇ ಲಂಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲಾರಂಭಿಸಿತ್ತು.

ಬ್ಯಾಟ್ಸ್‌ಮನ್‌ಗಳನ್ನು ಬದಿಗಿಟ್ಟು ಐವರು ಸ್ಪಿನ್ನರ್‌ಗಳೊಂದಿಗೆ ಭಾರತವು ಅಂಗಣಕ್ಕಿಳಿದದ್ದೇ ತಪ್ಪೆಂದು ಸಾಬೀತಾಯಿತು. ಸುಲಭ ಗುರಿಯನ್ನೂ ಮುಟ್ಟಲಾಗದ ಭಾರತ ತಂಡದ ಶಿಖರ್ ಧವನ್ ಅವರು, ನಾಲ್ಕನೇ ದಿನ ಮೊದಲ ಸ್ಕೋರ್ ದಾಖಲಿಸಲು 36 ಎಸೆತಗಳನ್ನು ತೆಗೆದುಕೊಂಡರು.

ಭಾರತೀಯರು ಸ್ಪಿನ್ ಬೌಲಿಂಗಿಗೆ ಚೆನ್ನಾಗಿ ಆಡುವವರೆಂಬ ನಂಬಿಕೆಯಿದ್ದರೂ, ಶನಿವಾರ ದಯನೀಯ ವೈಫಲ್ಯ ಕಂಡರು. ಅಜಿಂಕ್ಯ ರಹಾನೆ (36) ಹಾಗೂ ಧವನ್ (28) ಇಬ್ಬರು ಮಾತ್ರವೇ ಒಂದಿಷ್ಟು ಹೊತ್ತು ಕ್ರೀಸಿನಲ್ಲಿ ನಿಲ್ಲಲು ಶಕ್ತರಾದವರು.

ಪಂದ್ಯ ಗೆದ್ದು ಭಾರತದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದಲೇ ಆಚರಿಸಬೇಕೆಂದುಕೊಂಡಿದ್ದ ಭಾರತದ ಪಾಳಯವನ್ನು ಈ ಹೀನಾಯ ಸೋಲು ಕಂಗೆಡಿಸಿದ್ದಂತೂ ಸುಳ್ಳಲ್ಲ.

ಆಗಸ್ಟ್ 20ರಂದು ಎರಡನೇ ಟೆಸ್ಟ್ ಪಂದ್ಯವು ಕೊಲಂಬೋದ ಸಾರಾ ಓವಲ್ ಮೈದಾನದಲ್ಲಿ ನಡೆಯಲಿದೆ.

Write A Comment