‘ಕೇವಲ ವಿದೇಶಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ನನಗೆ ಇಷ್ಟವಿಲ್ಲ’ ಎಂದು ಆಸ್ಟ್ರೇಲಿಯಾ ಮೂಲದ ನಟಿ/ ರೂಪದರ್ಶಿ ಕ್ರಿಸ್ಟಿನಾ ಅಖೀವಾ ಹೇಳಿದ್ದಾರೆ.
‘ಭಾರತೀಯ ಸಿನಿಮಾಗಳಲ್ಲಿ ಬರೀ ವಿದೇಶಿ ಹುಡುಗಿಯ ಪಾತ್ರಕ್ಕೆ ನನ್ನನ್ನು ನಾನು ಸೀಮಿತಗೊಳಿಸಿಕೊಳ್ಳುವುದು ಇಷ್ಟವಿಲ್ಲ. ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಬೇಕು’ ಎನ್ನುವುದು ಅವರ ಬಯಕೆ. ‘ಯಮ್ಲಾ ಪಗ್ಲಾ ದಿವಾನಾ 2’ ಸಿನಿಮಾದಲ್ಲಿ ನಟಿಸುವುದರ ಮೂಲಕ ಬಾಲಿವುಡ್ಗೆ ಅಡಿಯಿಟ್ಟ ಈ ಬೆಡಗಿ, ಇದೇ ವಾರ ಬಿಡುಗಡೆಯಾಗಲಿರುವ ಕನ್ನಡದ ‘ಉಪ್ಪಿ 2’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಮತ್ತು ಈ ಚಿತ್ರದಲ್ಲಿ ಅವರು ಭಾರತೀಯ ಹುಡುಗಿಯ ಪಾತ್ರದಲ್ಲಿಯೇ ಕಾಣಿಸಿಕೊಂಡಿರುವುದು ವಿಶೇಷ. ಈ ಕುರಿತು ಅವರು ವಿವರಿಸುವುದು ಹೀಗೆ.
‘‘ಉಪ್ಪಿ 2’ ಚಿತ್ರದಲ್ಲಿ ನಾನು ಭಾರತೀಯ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಕೆಲವು ನಿರ್ದಿಷ್ಟ ಪಾತ್ರಗಳಿಗಷ್ಟೇ ಹೊಂದುತ್ತೇನೆ ಎಂದು ಕೆಲವು ಜನರು ತಪ್ಪು ತಿಳಿವಳಿಕೆ ಹೊಂದಿದ್ದರು. ಹೀಗೆ ನನ್ನನ್ನು ನೋಡಿ ನಕ್ಕವರಿಗೆ ಅವರ ಅಭಿಪ್ರಾಯ ತಪ್ಪು ಎಂದು ನಾನು ಸಾಬೀತು ಮಾಡಿದ್ದೇನೆ. ಆದ್ದರಿಂದ ಇನ್ನು ಮುಂದೆ ನನ್ನನ್ನು ಕೇವಲ ವಿದೇಶಿ ಹುಡುಗಿಯ ಪಾತ್ರ ನಿರ್ವಹಣೆಗೆ ಕರೆಯಲಾರರು’ ಎಂದು ಅವರು ಕೊಂಚ ಖಾರವಾಗಿಯೇ ಹೇಳಿದ್ದಾರೆ.
‘ಈ ವಿದೇಶಿ ಹುಡುಗಿಯ ಹಣೆಪಟ್ಟಿಯಿಂದ ಹೊರಬರಲು ನಾನು ಸಾಕಷ್ಟು ಶ್ರಮ ಮತ್ತು ಸಮಯವನ್ನು ವ್ಯಯಿಸಿದ್ದೇನೆ. ಇಂತಹವುಗಳಿಗೆ ಹೊರತಾದ ಸವಾಲಿನ ಪಾತ್ರಗಳನ್ನು ನಿರ್ವಹಿಸುವುದು ನನಗೆ ಹೆಚ್ಚು ರೋಮಾಂಚಕಾರಿ ಅನುಭವ ನೀಡುತ್ತದೆ’ ಎಂದೂ ಅವರು ಐಎಎನ್ಎಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದೇ ವಾರ ಬಿಡುಗಡೆಯಾಗಲಿರುವ ಉಪೇಂದ್ರ ಅವರ ‘ಉಪ್ಪಿ 2’ ಚಿತ್ರದಲ್ಲಿ ಕ್ರಿಸ್ಟಿನಾ, ಉಪ್ಪಿ ಜತೆ ತೆರೆ ಹಂಚಿಕೊಂಡಿದ್ದಾರೆ.
‘ಈ ಚಿತ್ರದಲ್ಲಿ ನಟಿಸುವಂತೆ ಆಹ್ವಾನ ಬಂದಾಗ ಕನ್ನಡ ಚಿತ್ರೋದ್ಯಮದ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಆದರೆ ಈ ಕುರಿತು ಸಾಕಷ್ಟು ಮಾಹಿತಿ ಕಲೆಹಾಕಿದಾಗ ಇದು ಎಷ್ಟು ದೊಡ್ಡ ಅವಕಾಶ ಎಂದು ತಿಳಿಯಿತು. ಉಪೇಂದ್ರ ಅವರ ಜತೆ ಕೆಲಸ ಮಾಡುವುದು ಒಂದು ವಿಶೇಷ ಅನುಭವ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಖಂಡಿತವಾಗಿಯೂ ಇದು ನನ್ನ ಕನಸಿನ ಪಾತ್ರ’ ಎಂದು ಕ್ರಿಸ್ಟಿನಾ ಖುಷಿ ವ್ಯಕ್ತಪಡಿಸಿದ್ದಾರೆ.