ತೆಲುಗಿನ ‘ಬಾಹುಬಲಿ’ ಚಿತ್ರ ನೋಡಿದವರೆಲ್ಲ ಕೇಳಿದ್ದು ಒಂದೇ ಪ್ರಶ್ನೆ; ‘ನಮ್ಮಲ್ಲೇಕೆ ಈ ತರಹದ ಚಿತ್ರ ಮಾಡುವುದಿಲ್ಲ? ಮನಸು ಮಾಡಿದರೆ ಯಾವುದು ಅಸಾಧ್ಯವಲ್ಲ’. ಆದರೆ…
ಆದರೇನು ಇಲ್ಲ. ‘ಯಾಕಾಗಲ್ಲ’ ಎಂದು ಎದೆತಟ್ಟಿಕೊಂಡು ಮುಂದೆ ಬರುತ್ತಾರೆ ನಿರ್ದೇಶಕ ನಿರ್ಭಯ್ ಚಕ್ರವರ್ತಿ. ಐತಿಹಾಸಿಕ ವಿಷಯವೊಂದನ್ನು ಎತ್ತಿಕೊಂಡು ಪೌರಾಣಿಕ ಹಾಗೂ ಆಧುನಿಕ ಸಮ್ಮಿಳಿತದಲ್ಲಿ ಒಂದೊಳ್ಳೆಯ ಸಿನಿಮಾ ಮಾಡಿದ್ದಾರಂತೆ ಇವರು. ಅದೇ, ‘ವಿಜಯಾದಿತ್ಯ’. ಧನಂಜಯ ನಟನೆಯ ಈ ಚಿತ್ರದ ಕ್ಯಾಪ್ಟನ್ ನಿರ್ಭಯ್. ಹೇರಳ ಗ್ರಾಫಿಕ್ಸ್ ಬಳಕೆ/ ಯುದ್ಧದ ಸನ್ನಿವೇಶವುಳ್ಳ ‘ವಿಜಯಾದಿತ್ಯ’, ‘ಬಾಹುಬಲಿ’ಯಷ್ಟೇ ಪರಾಕ್ರಮಿಯಂತೆ! ಆ ಚಿತ್ರದಷ್ಟೇ ರಿಚ್ನೆಸ್ ಇಲ್ಲೂ ಇದ್ದು, ಯುದ್ಧದ ಸನ್ನಿವೇಶ ಮತ್ತು ದೃಶ್ಯಾವಳಿ ಪ್ರಮುಖ ಆಕರ್ಷಣೆ ಎನ್ನುತ್ತಾರೆ ನಿರ್ದೇಶಕರು. ‘ಬಾಹುಬಲಿ’ಗೆ ಕೆಲಸ ಮಾಡಿದ ಹೈದರಾಬಾದ್ ಗ್ರಾಫಿಕ್ಸ್ ತಂತ್ರಜ್ಞರೇ ‘ವಿಜಯಾದಿತ್ಯ’ನಿಗೂ ಚುಕ್ಕಿ ಹಾಕಿ ಗೆರೆ ಎಳೆದು ದೃಶ್ಯವೈಭವ ಸೃಷ್ಟಿಸಿರುವುದು ವಿಶೇಷ. ಅಂದರೆ, ಸಿಜಿ ವರ್ಕ್.
ನಿರ್ಭಯ್ ಅವರಿಗೆ ‘ವಿಜಯಾದಿತ್ಯ’ ಚೊಚ್ಚಲ ಚಿತ್ರ. ಎಂಬಿಎ ಓದಿಕೊಂಡಿರುವ ಅವರು ಯಾವ ನಿರ್ದೇಶಕರ ಬಳಿಯೂ ಕೆಲಸ ಮಾಡಿಲ್ಲ. ಆದರೂ ಮೊದಲ ಪ್ರಯತ್ನಕ್ಕೆ ಐತಿಹಾಸಿಕ ಕಥೆ ಆಧರಿಸಿ ಸಿನಿಮಾ ಮಾಡಹೊರಟಿರುವುದು ಹೆಚ್ಚುಗಾರಿಕೆಯೇ ಸರಿ. ಅದಾಗಲೇ ಶೇ. 80 ಚಿತ್ರೀಕರಣ ಪೂರೈಸಿರುವ ಚಿತ್ರದ ಉಳಿದ ಭಾಗದ ಶೂಟಿಂಗ್ ಸೆಪ್ಟೆಂಬರ್ನಲ್ಲಿ ಶುರು. ಅದಕ್ಕೂ ಮುಂಚೆ, ಟೀಸರ್
ತೋರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಆ. 20ಕ್ಕೆ ಧನಂಜಯ ಅವರ ಹುಟ್ಟುಹಬ್ಬ; ಅಂದೇ ಅಥವಾ ಇದಾದ ನಾಲ್ಕು ದಿನಗಳಿಗೆ ಟೀಸರ್ ರಿಲೀಸ್ ಕಾರ್ಯಕ್ರಮ.
ಅಂದ್ಹಾಗೆ, ‘ಬಾಹುಬಲಿ’ ಬಜೆಟ್ 200 ಕೋಟಿ ರೂ. ದಾಟಿತ್ತು. ‘ವಿಜಯಾದಿತ್ಯ’ನ ಆಯವ್ಯಯ? ‘ಕನ್ನಡದ ಮಟ್ಟಿಗೆ ಅಷ್ಟು ದೊಡ್ಡ ಮೊತ್ತ ಖರ್ಚು ಮಾಡಲಿಕ್ಕೆ ಸಾಧ್ಯವೇ ಇಲ್ಲ. ಅದರಲ್ಲೊಂದ್ 5 ಪರ್ಸೆಂಟ್ ಅಂತೂ ಖಂಡಿತ ಆಗುತ್ತೆ ಎಂಬುದು ನಿರ್ಭಯ್ ಹೇಳಿಕೆ.
ಅಲ್ಲಿಗೆ, ಎಷ್ಟಾಗಬಹುದು? ಹೀಗೆ ಕೈ ಬೆರಳು ಮಡಚಿ ಲೆಕ್ಕ ಹಾಕುತ್ತಿರಿ, ಅಷ್ಟರಲ್ಲಿ ‘ಟೀಸರ್’ ತೋರಿಸಿ ಸಾಕ್ಷ್ಯ ನೀಡುತ್ತೇನೆ ಎನ್ನುತ್ತಾರವರು ಹೆಮ್ಮೆಯಿಂದ!