ಮನೋರಂಜನೆ

ಬಾಲಿವುಡ್​ ನಟಿ ಸುಷ್ಮಿತಾ ಸೇನ್ ಗೆ ಕಾಮಿಡಿ ವರ ಬೇಕಂತೆ

Pinterest LinkedIn Tumblr

sushmithaಒಂದು ಕಾಲಕ್ಕೆ ಬಾಲಿವುಡ್​ ನ ಟಾಪ್ ನಟಿಯರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದವರು ಸುಷ್ಮಿತಾ ಸೇನ್. ವರ್ಷಕ್ಕೆ 34 ಚಿತ್ರಗಳಲ್ಲಿ ಬಿಜಿಯಾಗಿರುತ್ತಿದ್ದ ಅವರು ಆಮೇಲಾಮೇಲೆ ಬೆಳ್ಳಿಪರದೆಯಿಂದ ದೂರ ಸರಿಯತೊಡಗಿದರು. ಬೆಂಗಾಲಿ ಚಿತ್ರ ‘ನಿರ್ಬಾಕ್’ ಹೊರತು ಪಡಿಸಿ, ಸುಷ್ಮಿತಾ ನಟನೆಯ ಯಾವೊಂದು ಚಿತ್ರವೂ 2010ರ ನಂತರ ತೆರೆಕಂಡಿಲ್ಲ. ಕಡೇಪಕ್ಷ ಮದುವೆ ಮಾಡಿಕೊಂಡಾದರೂ ಜೀವನದಲ್ಲಿ ಸೆಟ್ಲ್ ಆಗಬಹುದಲ್ಲವೇ ಎಂಬುದು ಅವರ ಅಭಿಮಾನಿಗಳ ಪ್ರಶ್ನೆ. ಆದರೆ 39ರ ಪ್ರಾಯದ ಈ ಬೆಡಗಿ ಮದುವೆಗೂ ಸಿದ್ಧರಿಲ್ಲ. ಅಂದ್ಹಾಗೆ, ತಾವೇಕೆ ಇನ್ನೂ ಮದುವೆಯಾಗಿಲ್ಲ ಎಂಬ ಸತ್ಯವನ್ನು ಇದೀಗ ಬಾಯಿಬಿಟ್ಟಿದ್ದಾರೆ ಸುಷ್ಮಿತಾ.

ಖಾಸಗಿ ವಾಹಿನಿಯ ಕಾಮಿಡಿ ರಿಯಾಲಿಟಿ ಶೋವೊಂದಕ್ಕೆ ತೀರ್ಪಗಾರ್ತಿಯಾಗಿ ಆಯ್ಕೆಯಾಗಿರುವ ಸುಷ್ಮಿತಾ, ಅದರ ಆರಂಭಿಕ ಕಾರ್ಯಕ್ರಮದಲ್ಲಿ ಮನದಾಳ ತೋಡಿಕೊಂಡಿದ್ದಾರೆ. ಎಲ್ಲರನ್ನು ಸದಾ ನಗಿಸುವ ಕೌಶಲವುಳ್ಳ ಪುರುಷರು ಮಹಿಳೆಯರ ಹೃದಯ ಗೆಲ್ಲುತ್ತಾರಂತೆ. ಸುಷ್ಮಿತಾ ಕೂಡ ಅಂಥದ್ದೇ ಒಬ್ಬ ಪ್ರಿಯಕರನ ನಿರೀಕ್ಷೆಯಲ್ಲಿದ್ದಾರೆ. ‘ನನ್ನನ್ನು ಕೈಹಿಡಿಯುವವರು ಜೀವನದ ಪ್ರತಿ ಕ್ಷಣವೂ ನಗಿಸುವಂಥ ವ್ಯಕ್ತಿಯಾಗಿರಬೇಕು. ಅಂಥವರು ನನಗಿನ್ನೂ ಸಿಕ್ಕಿಲ್ಲ. ಸಿಕ್ಕರೆ ಖಂಡಿತ ಮದುವೆಯಾಗುತ್ತೇನೆ’ ಎಂದಿದ್ದಾರೆ ಈ ಮಾಜಿ ವಿಶ್ವಸುಂದರಿ. ಇನ್ನು, ಅವರು ಈ ರಿಯಾಲಿಟಿ ಶೋಗೆ ತೀರ್ಪಗಾರ್ತಿಯಾಗಲು ಒಪ್ಪಿಕೊಂಡಿದ್ದು ಕೂಡ ಅದೇ ನಗುವಿನ ಕಾರಣಕ್ಕಂತೆ. ‘ಇಂದು ಪ್ರತಿದಿನ ಮಾಧ್ಯಮಗಳಲ್ಲಿ ನೆಗೆಟಿವ್ ಸುದ್ದಿ, ಕಾರ್ಯಕ್ರಮಗಳನ್ನೇ ನೋಡುತ್ತಿರುತ್ತೇವೆ. ಇದರಿಂದ ಜನರಿಗೆ ನಗುವ ಅವಕಾಶವೇ ಇಲ್ಲದಂತಾಗಿದೆ. ನಗು ಹಂಚುವ ಉದ್ದೇಶದಿಂದಲೇ ನಾನು ಈ ಶೋ ಒಪ್ಪಿಕೊಂಡೆ’ ಎನ್ನುತ್ತಾರವರು.

ಈ ಶೋನಲ್ಲಿ ನುರಿತ ಕಾಮಿಡಿ ಕಿಲಾಡಿಗಳೆಲ್ಲ ನಗು ಉಕ್ಕಿಸುವ ಪ್ರಯತ್ನ ಮಾಡಲಿದ್ದಾರೆ. ಒಂದು ವೇಳೆ ಅವರು ನಗಿಸುವ ಮೋಡಿಗೆ ಸುಷ್ಮಿತಾ ಫಿದಾ ಆಗಿಬಿಟ್ಟರೆ, ಅವರಲ್ಲೇ ಯಾರಾದರೊಬ್ಬರನ್ನು ಅವರು ವರಿಸುತ್ತಾರಾ? ನಗುವೇ ಉತ್ತರಿಸಬೇಕು!!

Write A Comment