ಜನ ನಟಿಯರನ್ನು ‘ಹಾಟ್’ ಕೋನದಲ್ಲಿ ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ, ಹಾಗೆ ನೋಡಲಿಕ್ಕೆ ವೆಬ್ಲೋಕ ಪ್ರೇರಣೆ ನೀಡುತ್ತಿರುವುದಂತೂ ಖರೆ. ಈ ಜಾಯಮಾನ ರಾಧಿಕಾ ಆಪ್ಟೆ ಅವರಿಗೆ ದೊಡ್ಡ ವಿರೋಧಾಭಾಸದಂತೆ ಕಾಣಿಸುತ್ತದೆ. ‘ಎಲ್ಲ ನಟಿಯರ ವಿಷಯದಲ್ಲೂ ಇದೇ ಆಗುತ್ತಿದೆ! ಈ ದೇಶದಲ್ಲಿ ಜನ ನಮ್ಮನ್ನು ನೋಡುವ ದೃಷ್ಟಿಕೋನವೇ ಹೀಗಿದೆಯೇನೋ!! ಹೋಗಲಿ ಬಿಡಿ… ನಾನು ಇದನ್ನು ವೈಯಕ್ತಿಕವಾಗಿ ಸ್ವೀಕರಿಸುವುದಿಲ್ಲ’ ಎಂದಿದ್ದಾರೆ ರಾಧಿಕಾ. ಇಂಥ ಒಣ ಗ್ಲಾಮರ್ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು, ಗಟ್ಟಿ ಪಾತ್ರಗಳ ಮೂಲಕ ಗಮನ ಸೆಳೆಯುವತ್ತ ಅವರ ಚಿತ್ತ.
ಸ್ವಂತ ಊರು ಪುಣೆಯಿಂದ ಮುಂಬೈಗೆ ಹೋಗಿ, ಅಲ್ಲಿ ಹಲವು ಚಿತ್ರಗಳ ಆಡಿಷನ್ನಲ್ಲಿ ಭಾಗವಹಿಸಿ ಕಡೆಗೆ ನಿರ್ವಪಕ/ ನಿರ್ದೇಶಕರ ಅವಜ್ಞೆಗೆ ಒಳಗಾಗುತ್ತಿದ್ದ ರಾಧಿಕಾ, ಈಗ ಗಮನ ಸೆಳೆಯುತ್ತಿರುವುದು ಗ್ಲಾಮರ್ನಿಂದಾಗಿ ಅಲ್ಲ… ಪ್ರತಿಭೆಯಿಂದಾಗಿ. 2005ರಿಂದ ಬಾಲಿವುಡ್ನಲ್ಲಿ ಸಕ್ರಿಯವಾಗಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು ಕಳೆದ ವರ್ಷ ಬಿಡುಗಡೆಯಾದ ‘ಬದ್ಲಾಪುರ್’. ಆ ಚಿತ್ರದ ಬಿಡುಗಡೆ ಹತ್ತಿರದಲ್ಲಿದ್ದಾಗ ರಾಧಿಕಾ ನಗ್ನಚಿತ್ರಗಳು ಅಂತರ್ಜಾಲದಲ್ಲಿ ಲೀಕ್ ಆಗಿ ಬಿಸಿಬಿಸಿ ಚರ್ಚೆ ಹುಟ್ಟಿಸಿದ್ದವು. ನಿರ್ದೇಶಕ ಅನುರಾಗ್ ಕಶ್ಯಪ್ ಅಂತಾರಾಷ್ಟ್ರೀಯ ಸಿನಿಮಾಗೋಸ್ಕರ ಚಿತ್ರೀಕರಿಸಿದ ಕಿರುಚಿತ್ರದ ಫೋಟೋಗಳು ಅವಾಗಿದ್ದವು ಎನ್ನುವ ವಾಸ್ತವ ಗೊತ್ತಾಗುವ ಹೊತ್ತಿಗೆ, ‘ಬದ್ಲಾಪುರ್’ನಲ್ಲಿನ ನಟನಾಸಾಮರ್ಥ್ಯದ ಮೂಲಕ ರಾಧಿಕಾ ಜನಮನದಲ್ಲಿ ಒಳ್ಳೆಯ ಹೆಸರು ಮಾಡಿಯಾಗಿತ್ತು. 29ರ ಹರೆಯದ ಈ ನಟಿಗೀಗ ಕೈತುಂಬ ಅವಕಾಶಗಳು. ಆ. 21ಕ್ಕೆ ತೆರೆಕಾಣುತ್ತಿರುವ ‘ಮಾಂಝಿ’ ಹಾಗೂ ‘ಕೌನ್ ಕಿತ್ನೇ ಪಾನಿ ಮೆ ಹೈ’, ‘ದ ಫೀಲ್ಡ್’ ಮತ್ತಿತರ ಚಿತ್ರಗಳಿವೆ. ರಜನಿಕಾಂತ್ ನಾಯಕತ್ವದ ತಮಿಳು ಚಿತ್ರಕ್ಕೂ ರಾಧಿಕಾ ಆಯ್ಕೆಯಾಗಿದ್ದಾಗಿದೆ.
ಸಾಮಾನ್ಯವಾಗಿ ಮದುವೆಯಾದ ಮೇಲೆ ನಟಿಯರಿಗೆ ಬೇಡಿಕೆ ಕಮ್ಮಿಯಾಗುತ್ತದೆ. ರಾಧಿಕಾ ಇದಕ್ಕೆ ತದ್ವಿರುದ್ಧ. ಅವರು ವೈಯಕ್ತಿಕ ಬದುಕಿನ ಮಾಹಿತಿಗಳನ್ನು ಮುಚ್ಚಿಟ್ಟವರಲ್ಲ. 2012ರಲ್ಲಿ ಬ್ರಿಟನ್ನ ಪಿಟೀಲು ವಾದಕ ಬೆನೆಡಿಕ್ಟ್ ಟೇಲರ್ ಅವರನ್ನು ವರಿಸಿರುವ ರಾಧಿಕಾಗೆ ರಜನಿ ಚಿತ್ರದ ಆಫರ್ ಬಂದಾಗ ‘ಮದುವೆಯಾಗಿಲ್ಲ ಅಂತ ಹೇಳು’ ಎನ್ನುವ ಸಲಹೆ ಕೊಟ್ಟಿದ್ದರಂತೆ ಹಿತೈಷಿಗಳು. ಊಹ್ಞೂಂ… ರಾಧಿಕಾ ಹಾಗೆ ಮಾಡಲಿಲ್ಲ!!