ನೈಜ ಘಟನೆಯಾಧಾರಿತ ಚಲನಚಿತ್ರ ಮಾಡಿದರೆ, ಯಾವ ವ್ಯಕ್ತಿ ಕುರಿತು ಚಿತ್ರ-ಕಥೆ ಮಾಡಿರುತ್ತೇವೆಯೋ ಆತನಿಗೆ ಎಲ್ಲರಿಗಿಂತ ಮುಂಚೆ ಸಿನಿಮಾ ತೋರಿಸಲೇಬೇಕಾ? ಇದು ಆಯಾ ಚಿತ್ರತಂಡಕ್ಕೆ ಬಿಟ್ಟ ವಿಚಾರ. ಕೆಲವರು ತೋರಿಸುತ್ತಾರೆ, ಹಲವರು ‘ಚಿತ್ರಮಂದಿರಕ್ಕೆ ನೀವೇ ಬಂದು ನೋಡಿಕೊಳ್ಳಿ’ ಅಂತ ಉದಾಸೀನ ತೋರುತ್ತಾರೆ. ಅದೇನೇ ಇರಲಿ, ‘ಬೆತ್ತನಗೆರೆ’ ಚಿತ್ರತಂಡಕ್ಕೆ ‘ನಾನು ನೋಡಿದ ಮೇಲೆಯೇ ರಿಲೀಸ್ ಮಾಡಬೇಕು’ ಎಂದು ರಿಯಲ್ ರೌಡಿ ಶಂಕ್ರ ಕಟ್ಟಪ್ಪಣೆ ಮಾಡಿದ್ದಾನಂತೆ!
ನಿಮಗೆಲ್ಲ ತಿಳಿದಂತೆ/ ಹೆಸರೇ ಹೇಳುತ್ತಿರುವಂತೆ, ‘ಬೆತ್ತನಗೆರೆ’ ಶಂಕ್ರ ಮತ್ತು ಶೀನ ಎಂಬ ರೌಡಿ ಸಹೋದರರ ರಕ್ತಚರಿತ್ರೆ. ಇವರಿಬ್ಬರಲ್ಲಿ, ಇತ್ತೀಚೆಗೆ ಶೀನನ ಮರ್ಡರ್ ಆಗಿದೆ. ಶಂಕ್ರ ಸದ್ಯ ಜೈಲಿನಲ್ಲಿದ್ದಾನೆ. ಇಂದೋ, ನಾಳೆಯೋ (ಮಂಗಳವಾರ- ಬುಧವಾರ) ಶಂಕ್ರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಈ ವಾರದಲ್ಲಿ ಅಂದರೆ ಬರುವ ಶನಿವಾರದೊಳಗೆ ‘ಬೆತ್ತನಗೆರೆ’ ವೀಕ್ಷಿಸಲಿದ್ದಾನೆ ಎನ್ನುವುದು ಚಿತ್ರತಂಡದ ಮೂಲಗಳ ಹೇಳಿಕೆ. ಈ ಕುರಿತಾಗಿ ನಿರ್ವಪಕ ಬಿ.ಎನ್. ಸ್ವಾಮಿ ಅವರನ್ನು ‘ಇದು ನಿಜವೇ’ ಎಂದು ಪ್ರಶ್ನಿಸಿದರೆ, ಅವರ ಪ್ರತಿಕ್ರಿಯೆ ಹೀಗಿತ್ತು; ‘ಬಿಡುಗಡೆಗೂ ಮೊದಲು ಸಿನಿಮಾ ನೋಡುವುದಾಗಿ ಅವರು (ಶಂಕ್ರ) ಹೇಳಿದ್ದಾರೆ. ಚಿತ್ರದಲ್ಲಿ ನೆಗೆಟಿವ್ ಆಗಿ ಏನಾದರೂ ತೋರಿಸಿರಬಹುದೇನೋ ಎಂಬ ಅನುಮಾನ ಅವರ ಹುಡುಗರಲ್ಲಿದೆ. ಅದಕ್ಕಾಗಿ ನಾವೇ ಈ ವಾರದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಿದ್ದೇವೆ…’
ಅಂದ್ಹಾಗೆ, ಬಿ.ಜಿ. ಮೋಹನ್ ಗೌಡ ನಿರ್ದೇಶನದ ‘ಬೆತ್ತನಗೆರೆ’ಗೆ ಸೆನ್ಸಾರ್ ಮಂಡಳಿ ಬರೊಬ್ಬರಿ 139 ಕಟ್ಸ್ ಕೊಟ್ಟಿತ್ತು! ಸೆಪ್ಟೆಂಬರ್ನಲ್ಲಿ ಬಿಡುಗಡೆ ಭಾಗ್ಯ ಕಾಣಲಿರುವ ಚಿತ್ರಕ್ಕೆ ‘ಸಿಲ್ಕ್’ ಅಕ್ಷಯ್ ಮತ್ತು ‘ದಿಲ್ವಾಲ’ ಸುಮಂತ್ ಹೀರೋಗಳು. ಖ್ಯಾತ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.