ಮಲಯಾಳಿ ಬೆಡಗಿ ಆಸಿನ್ ಸಿನಿಖಾತೆ ಗಮನಿಸಿದರೆ, ಸಿಗುವುದು ಬರೀ ಸೂಪರ್ ಹಿಟ್ ಚಿತ್ರಗಳೇ! ಹಾಗಾದರೆ, ಅವರ ಕೈಯಲ್ಲೀಗ ಸಿಕ್ಕಾಪಟ್ಟೆ ಅವಕಾಶಗಳಿವೆ ಎಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಅದ್ಯಾಕೋ ಅವರಿಗೆ ಸಿನಿಬದುಕು ಕೈಕೊಟ್ಟು ತುಂಬ ದಿನಗಳೇ ಆದವು. ಕಳೆದ ಮೂರು ವರ್ಷಗಳಲ್ಲಿ ಆಸಿನ್ ನಟಿಸಿದ್ದು ಒಂದೇ ಚಿತ್ರದಲ್ಲಿ; ‘ಆಲ್ ಈಸ್ ವೆಲ್’. ಇದೂ ಅಂತಿಮವಾಗಿ ಮುಂದಿನ ವಾರ (ಆ. 21) ತೆರೆಗೆ ಬರುವ ಸೂಚನೆ ನೀಡಿದೆ. ಈ ಬಾರಿಯಾದರೂ, ಈ ಮಾಜಿ ಸ್ಟಾರಿಣಿಗೆ ಮತ್ತೆ ಅದೃಷ್ಟ ಖುಲಾಯಿಸುತ್ತಾ? ಕಾಲವೇ ಉತ್ತರಿಸಬೇಕು. ಈಗ ಕೇಳಿಬರುತ್ತಿರುವ ಸುದ್ದಿ ಪ್ರಕಾರ, ಒಂದುವೇಳೆ ಅವರಿಗೆ ಅದೃಷ್ಟ ಕೈಹಿಡಿದರೂ ಅದು ಉಪಯೋಗವಿಲ್ಲ. ಯಾಕೆ? ಕೆಲವೇ ದಿನಗಳಲ್ಲಿ ಆಸಿನ್, ಚಿತ್ರರಂಗಕ್ಕೆ ಗುಡ್ಬೈ ಹೇಳಲಿದ್ದಾರೆ! ಕಾರಣ, ಮದುವೆ!!
ಮೂಲಗಳ ಪ್ರಕಾರ, ಆಸಿನ್ ಈಗ ಜೀವನದಲ್ಲಿ ಸೆಟ್ಲ್ ಆಗುವ ಕಡೆ ಗಮನ ನೀಡಿದ್ದಾರೆ. ಆದಷ್ಟು ಬೇಗ ಮದುವೆ ಮಾಡಿಕೊಂಡು ಸಂತೃಪ್ತ ಜೀವನ
ಕಟ್ಟಿಕೊಳ್ಳುವ ಬಯಕೆ ಅವರದು. ದೆಹಲಿ ಮೂಲದ ಉದ್ಯಮಿ ರಾಹುಲ್ ಶರ್ವ ಎಂಬುವರನ್ನು ತುಂಬ ಹಚ್ಚಿಕೊಂಡಿರುವ ಆಸಿನ್, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇದೆ. ಬಹುಶಃ, ‘ಆಲ್ ಈಸ್ ವೆಲ್’ ಅವರ ಸಿನಿಜೀವನದ ಕೊನೆಯ ಚಿತ್ರವಾಗಬಹುದು ಎಂದೇ ಹೇಳಲಾಗುತ್ತಿದೆ. ಇಷ್ಟು ದಿನವಾದರೂ ತಮ್ಮ ಲವ್ಸ್ಟೋರಿ ಯಾಕೆ ಮುಚ್ಚಿಟ್ಟಿದ್ದರು ಎಂಬ ಪ್ರಶ್ನೆ ಅವರ ಆಪ್ತ ವಲಯದಿಂದಲೇ ಹರಿದಾಡುತ್ತಿದೆ. ‘ಆಸಿನ್ 15ನೇ ವಯಸ್ಸಿನಿಂದಲೇ ನಟನೆಗೆ ಇಳಿದಿದ್ದರು. ಇದೀಗ ಅವರಿಗೆ 30ರ ಹರೆಯ. 15 ವರ್ಷ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮದುವೆಯಾಗಲು ಇದು ಸೂಕ್ತ ಸಮಯ’ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರೊಬ್ಬರ ಹೇಳಿಕೆ.