ಶಿವರಾಜ್ಕುಮಾರ್ ಮತ್ತು ಸುದೀಪ್ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಬಹುದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ಕುರಿತು ಇವರಿಬ್ಬರೂ ‘ನಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ’ ಎಂದು ಹಲವು ಬಾರಿ ಹೇಳಿದ್ದರೂ ವದಂತಿಗೆ ಬ್ರೇಕ್ ಬಿದ್ದಿರಲಿಲ್ಲ. ಇದೀಗ, ಆ ಥರ ಏನೂ ಇಲ್ಲ ಎನ್ನುವುದಕ್ಕೆ ದಿಟ್ಟ ಸಾಕ್ಷ್ಯ ಸಿಕ್ಕಿದೆ. ಸುದೀಪ್ ಮನೆಗೆ ಪತ್ನಿ ಗೀತಾ ಜೊತೆ ತೆರಳಿದ ಶಿವರಾಜ್ಕುಮಾರ್ ಮಗಳ ಮದುವೆಯ ಆಹ್ವಾನ ಪತ್ರಿಕೆ ಕೊಟ್ಟು, ಒಂದಷ್ಟು ಹರಟಿ ಊಟ ಮಾಡಿಕೊಂಡು ನಮ್ಮ ನಡುವೆ ಅಂತಹದ್ದೇನಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ!
ಕೆಲವು ದಿನಗಳಿಂದ ಪುತ್ರಿ ನಿರುಪಮಾ ಮದುವೆ ಆಮಂತ್ರಣ ಪತ್ರಿಕೆ ಕೊಡುವಲ್ಲಿ ಬಿಜಿಯಾಗಿರುವ ಶಿವರಾಜ್ಕುಮಾರ್, ಮೊನ್ನೆ ಶನಿವಾರ ಮತ್ತೆ ಹೈದರಾಬಾದ್ಗೆ ಹೋಗಿ ಇನ್ನೊಂದು ಸುತ್ತು ಆಹ್ವಾನ ಕೊಟ್ಟಿದ್ದಾರೆ. ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ರಾಜಮೌಳಿ ಸೇರಿದಂತೆ ನೆರೆರಾಜ್ಯಗಳ ಕಲಾವಿದರು ಮತ್ತು ತಂತ್ರಜ್ಞರನ್ನೆಲ್ಲ ಆಮಂತ್ರಿಸಿ ಬಂದಿದ್ದರು. ಈ ಮಧ್ಯೆ, ಚಂದನವನದ ಮಂದಿಯ ಮನೆಗಳಿಗೂ ಭೇಟಿ ನೀಡಿ ಕರೆಯೋಲೆ ಹಂಚಿದ್ದರು. ನಿನ್ನೆ ಭಾನುವಾರ ಬೆಂಗಳೂರು ದಕ್ಷಿಣ ವಲಯದ ಭೇಟಿ ಇಟ್ಟುಕೊಂಡಿದ್ದ ಶಿವು ದಂಪತಿ, ಸುದೀಪ್ ಮತ್ತು ಸಚಿವ ಕಮ್ ನಟ ಅಂಬರೀಷ್ ನಿವಾಸಕ್ಕೂ ತೆರಳಿ ಮಗಳ ಮದುವೆಗೆ ಬರುವಂತೆ ಕೋರಿದ್ದಾರೆ.
ಅಂದ್ಹಾಗೆ, ಸುದೀಪ್ ಅವರ ಕುಟುಂಬದವರೊಟ್ಟಿಗೆ ಶಿವರಾಜ್ಕುಮಾರ್ ಹಾಗೂ ಗೀತಾ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಲೈಕ್ ಗಿಟ್ಟಿಸಿಕೊಳ್ಳುತ್ತಿವೆ. ಅಲ್ಲಿಗೆ ‘ಸೆಂಚುರಿಸ್ಟಾರ್’ ಮತ್ತು ‘ಕಿಚ್ಚ’ನ ನಡುವೆ ಇಲ್ಲಸಲ್ಲದ ಗಾಸಿಪ್ ಹಬ್ಬಿಸುತ್ತಿರುವವರ ಬಾಯಿಗೆ ಸದ್ಯ ಬ್ರೇಕ್ ಬೀಳಲಿದೆ!!!