ನಾದಬ್ರಹ್ಮ ಹಂಸಲೇಖ ಈಗ ನಿರ್ದೇಶಕನ ಕ್ಯಾಪ್ ಹಾಕಿಕೊಳ್ಳುವ ತವಕದಲ್ಲಿದ್ದಾರೆ. ಕೆಲ ವರ್ಷಗಳ ಹಿಂದೆ ‘ಬಾಗಿನ’ ಹೆಸರಿನ ಸಿನಿಮಾ ಮಾಡುತ್ತಾರೆಂದೂ, ಅದಕ್ಕೆ ಶಿವರಾಜ್ಕುಮಾರ್ ಹೀರೋ ಎಂದೂ ದೊಡ್ಡ ಸುದ್ದಿಯಾಗಿತ್ತು. ಈಗ ‘ಆ ಪ್ರಾಜೆಕ್ಟ್ ಡ್ರಾಪ್ ಆಯಿತು’ ಅನ್ನುತ್ತಾರೆ ಹಂಸ್ ವಿಷಾದದಿಂದ. ‘ಪೂರ್ತಿ ಕೈ ಕಳೆದುಕೊಳ್ಳುವ ಬದಲು ಒಂದು ಬೆರಳು ಮಾತ್ರ ಹೋದಂತಾಯ್ತು ಬಿಡಿ’ ಎನ್ನುತ್ತಾರವರು.
ಆಷಾಢ ಮುಗಿಯುತ್ತಿದ್ದಂತೆಯೇ ತಾವು ಆಕ್ಷನ್-ಕಟ್ ಹೇಳಲಿರುವ ಹೊಸ ಚಿತ್ರವನ್ನು ಘೊಷಿಸಲಿದ್ದಾರೆ ಹಂಸಲೇಖ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ಈಗಲೇ ಬಿಟ್ಟುಕೊಡಲು ಸಿದ್ಧರಿಲ್ಲದ ಅವರು, ‘ಪಕ್ಕಾ ಕಮರ್ಷಿಯಲ್ ಚಿತ್ರವನ್ನೇ ಮಾಡಲಿದ್ದೇನೆ. 10 ಹಾಡುಗಳಿರುತ್ತವೆ. ತಂತ್ರಜ್ಞಾನವನ್ನು ಒಂದು ರೂಪಕವಾಗಿ ಹೇಗೆ ಬಳಸಬಹುದು ಎಂಬುದನ್ನು ತೋರಿಸುವ ಪ್ರಯತ್ನ ಇಲ್ಲಿರುತ್ತೆ. ಕನ್ನಡಕ್ಕೆ ಇದು ನನ್ನ ಪುಟ್ಟ ಕೊಡುಗೆ’ ಎನ್ನುತ್ತ ಕೌತುಕ ಹೆಚ್ಚಿಸುತ್ತಾರವರು. ಯಾವ ರೀತಿಯಲ್ಲಿ ಎಂಬುದಕ್ಕೂ ಹಂಸ್ ಈ ರೀತಿ ಸುಳಿವು ಕೊಡುತ್ತಾರೆ; ‘ಅಂತರ್ಜಾಲದಲ್ಲಿ ಅಶ್ಲೀಲ ಚಿತ್ರಗಳು ಬೇಕು ಅಂತ ಹಕ್ಕೊತ್ತಾಯ ಮಂಡಿಸುವ ಕಾಲ ಇದು! ನಮಗೆ ಆ ಉದ್ದೇಶವಂತೂ ಇಲ್ಲ. ಒಟ್ಟಿನಲ್ಲಿ ಕಲೆ ಸೂಕ್ಷ್ಮವಾಗಿರಬೇಕು, ಕೌಶಲ ಇರಬೇಕು. ಕೌಶಲ ಇದ್ದರೆ ಕಲೆಗೆ ಯಾವಾಗಲೂ ಬೆಲೆ’.
ಸರಿ, ‘ಬಾಗಿನ’ ಡ್ರಾಪ್ ಆಗಿದ್ದು ಯಾಕೆ? ಈ ಬಗ್ಗೆ ನಿರ್ದೇಶಕ ರತ್ನಜ ಹೇಳುವುದಿಷ್ಟು; ‘ನೆನಪಿರಲಿ’ ಬಳಿಕ ‘ಬಾಗಿನ’ ಮಾಡಬೇಕಿತ್ತು. ಅದು ಗುರುಗಳ (ಹಂಸಲೇಖ) ಮಹತ್ವಾಕಾಂಕ್ಷೆಯ ಚಿತ್ರ. ಅದನ್ನು ಒಣಭೂಮಿಯಲ್ಲಿ ಚಿತ್ರಿಸಬೇಕಿತ್ತು. ಆದರೆ ಆ ಹೊತ್ತಿಗೆ ಬೇಸಿಗೆ ಮುಗಿದು ಮಳೆಗಾಲ ಶುರುವಾಗಿತ್ತು. ನಟ-ನಟಿಯರ ಡೇಟ್ಸ್ ಸಮಸ್ಯೆಯೂ ಎದುರಾಯಿತು. ಆಮೇಲೆ ಸ್ವಲ್ಪ ದಿನ ಬಿಟ್ಟು ಗುರುಗಳೇ ಆ ಚಿತ್ರ ನಿರ್ದೇಶಿಸುತ್ತಾರೆ ಅಂತ ಆಯ್ತು. ಮುಂದಿನದು ನನಗೆ ಗೊತ್ತಿಲ್ಲ…
‘ಬಾಗಿನ’ಕ್ಕೆ ನಾಯಕಿ ಯಾರಾಗಬೇಕಿತ್ತು
ಗೊತ್ತೇ? ‘ಸ್ಯಾಂಡಲ್ವುಡ್ ಕ್ವೀನ್’ ರಮ್ಯಾ!!