ಮನೋರಂಜನೆ

ಭಲೇ ಸಾಧು

Pinterest LinkedIn Tumblr

sadhuನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ‘ಕೋಕಿಲ ಸಾಧು’ ಆಗಿ ಹೆಸರು ಆಚೀಚೆ ಮಾಡಿಕೊಂಡಿದ್ದಾರೆ ಅಂದರೆ, ನಿರ್ದೇಶಕನ ಕ್ಯಾಪ್ ಹಾಕಿಕೊಂಡಿದ್ದಾರೆಂದೇ ಅರ್ಥ. ‘ರಕ್ತಕಣ್ಣೀರು’ ಚಿತ್ರದಿಂದ ಶುರುವಾದ ಸಾಧು ಆಕ್ಷನ್-ಕಟ್ ಯಾನ, ‘ಸೂಪರ್ ರಂಗ’ವರೆಗೆ ತಕ್ಕಮಟ್ಟಿಗೆ ಗಮನಾರ್ಹವಾಗಿಯೇ ಸಾಗಿಬಂದಿದೆ. ಇಲ್ಲೆಲ್ಲ ಎದ್ದುಕಾಣಿಸುವುದು ಅವರ ರಿಮೇಕ್ ಪ್ರೀತಿ. ಸದ್ಯಕ್ಕೆ ಆ ಪ್ರೀತಿ ಪುನಃ ಮೈಕೊಡವಿ ಮೇಲೆದ್ದಿದೆ. 2011ರಲ್ಲಿ ತೆರೆಗೆ ಬಂದಿದ್ದ ‘ಅಲಾ ಮೊದಲಾಯಿಂದಿ’ ತೆಲುಗು ಚಿತ್ರವನ್ನು ಸಾಧು ‘ಭಲೇ ಜೋಡಿ’ಯಾಗಿಸಿದ್ದಾರೆ. ಈಚೆಗೆ ಇದರ ಆಡಿಯೋ ಬಿಡುಗಡೆ ಶಾಸ್ತ್ರ ನಡೆದಾಗ ಸ್ವತಃ ಅವರಿಗೇ ಅಚ್ಚರಿ. ಕಾರಣ, ಒಂದೇ ವರ್ಷದಲ್ಲಿ ಚಿತ್ರ ಕಂಪ್ಲೀಟ್ ಆದ ಪರಿ!

ಯಾವುದೇ ಚಿತ್ರವಾದರೂ ಅದರ ನಿರ್ವಣ ಘಟ್ಟದಲ್ಲಿ ಕನಿಷ್ಠ 2 ವರ್ಷಗಳಷ್ಟು ಶ್ರಮಿಸುವುದು ಸಾಧು ರೂಢಿ. ‘ಭಲೇ ಜೋಡಿ’ಯಲ್ಲಿ ಈ ದಾಖಲೆಯನ್ನು ಅವರೇ ಮುರಿದುಬಿಟ್ಟಿದ್ದಾರೆ! ಹೀಗಾಗಿ ಚಿತ್ರೊದ್ಯಮದಲ್ಲಿ, ಸ್ನೇಹಿತರ ಬಳಗದಲ್ಲಿ ‘ಸಾಧು ಫಾಸ್ಟ್ ಆಗಿಬಿಟ್ಟರು’ ಅನ್ನುವ ಕಾಂಪ್ಲಿಮೆಂಟ್​ಗಳು ಹರಿದುಬರತೊಡಗಿವೆ. ನಿರ್ವಪಕರಾದ ಶೈಲೇಂದ್ರಬಾಬು, ಡಿ. ಹರೀಶ್ ಈ ವೇಗದ ಹಿಂದಿನ ಒತ್ತಾಸೆಯಾಗಿದ್ದರೆ? ಸಾಧು ಪ್ರಕಾರ, ಹೌದು! ನಟ ಸುಮಂತ್​ಗೆ ‘ಯುವ ಸಾಮ್ರಾಟ್’ ಬಿರುದು ಕೊಟ್ಟು, ‘ಚಂದ್ರಲೇಖ’ ಬೆಡಗಿ ಶಾನ್ವಿ ಜತೆ ಡ್ಯುಯೆಟ್ ಹಾಡಿಸಿದ್ದಾರೆ. ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಮಾಡಿರುವ ಸಾಧು, ಕನ್ನಡದ ಗಾಯಕರಿಂದಲೇ ಎಲ್ಲ ಹಾಡುಗಳನ್ನು ಹಾಡಿಸಿ, ಬೆನ್ನು ತಟ್ಟಿಕೊಳ್ಳುತ್ತಾರೆ. ಸಂತೋಷ್, ಉಷಾ, ಹರ್ಷ, ಅರ್ಚನಾ ರವಿ, ಶಶಾಂಕ್, ಸುಚಿತ್ರಾ, ಲಕ್ಷ್ಮೀ- ಆ ಗಾಯಕರು. ‘ಕನ್ನಡ ಗಾಯಕರಿಗೆ ಅವಕಾಶ ಸಿಗುತ್ತಿಲ್ಲ’ ಅನ್ನುವ ಗೋಳು ಹಿಂದೊಮ್ಮೆ ದೊಡ್ಡದಾಗಿ ಕೇಳಿಬಂದಾಗ, ‘ಸೋನು ನಿಗಮ್​ತರಹ ಕನ್ನಡದಲ್ಲಿ ಯಾರು ಹಾಡುತ್ತಾರೆ ತೋರಿಸಿ’ ಎಂದು ಸಾಧು ಕೇಳಿದ್ದರು. ಈಗ ಆ ಪ್ರಶ್ನೆಗೆ ಅವರೇ ಉತ್ತರ ಕಂಡುಕೊಂಡಿದ್ದಾರೆ. ನೆನಪಿಡಿ, ‘ಎದೆಗಾರಿಕೆ’ಯಲ್ಲಿ ‘ನೀನೊಂದು ಮುಗಿಯದ ಮೌನ…’ ಗೀತೆಗೆ ಧ್ವನಿಯಾಗಿದ್ದ ಸಾಧು, ‘ಭಲೇ ಜೋಡಿ’ಗಾಗಿ ‘ಎದೆಯ ಹಾಲು…’ ಅನ್ನುವ ಗೀತೆ ಹಾಡಿದ್ದಾರೆ.

‘ಬೇರೆ ಆಗೋ ಮಾತೇ ಇಲ್ಲ’ ಅಡಿಬರಹವುಳ್ಳ ಈ ಚಿತ್ರದಲ್ಲಿ ಹರಿಪ್ರಿಯಾ, ಹರ್ಷಿಕಾ ಪೂಣಚ್ಚ ಸಹ ಪ್ರಮುಖ ಆಕರ್ಷಣೆ. ಹಿರಿಯ ನಟಿ ಸುಮಲತಾ ಅಂಬರೀಷ್ ಹೀರೊ ತಾಯಿಯಾಗಿ ಅಭಿನಯಿಸಿದ್ದರೆ, ರವಿಶಂಕರ್ ಖಳಗತ್ತು ಪ್ರದರ್ಶಿಸಿದ್ದಾರೆ. ನಾಗೇಂದ್ರಪ್ರಸಾದ್ ಎಲ್ಲ ಹಾಡುಗಳನ್ನು ಬರೆದಿರುವವರು. ಆಡಿಯೋ ಬಿಡುಗಡೆ ವೇಳೆ ಒಟ್ಟಾಗಿದ್ದಾಗ ಎಲ್ಲರೂ ಪರಸ್ಪರ ಪ್ರಶಂಸೆ ವ್ಯಕ್ತಪಡಿಸುವ ಜತೆಗೆ, ಚಿತ್ರ ಗೆಲ್ಲಲಿ ಎಂದು ಆಶಿಸಿದರು. ಸಂಗೀತ ನಿರ್ದೇಶಕ ಗುರುಕಿರಣ್, ನಟರಾದ ಮದರಂಗಿ ಕೃಷ್ಣ, ವಿತರಕ ಎನ್. ಕುಮಾರ್, ನಿರ್ವಪಕರಾದ ಕರಿಸುಬ್ಬು, ಗಣೇಶ್, ಸಂಕಲನಕಾರ ಜೋ. ನಿ. ಹರ್ಷ, ಛಾಯಾಗ್ರಾಹಕ ಜೈಆನಂದ್ ಮತ್ತಿತರರು ವೇದಿಕೆಯಲ್ಲಿದ್ದರು.

ಲಾಸ್ಟ್ ಪಂಚ್: ‘ಈಗ 1 ಲಕ್ಷ ರೂ.ಗಳಿಗೂ ಆಡಿಯೋ ಕೊಳ್ಳುವವರಿಲ್ಲ’ ಎಂದು ಬೇಸರ ಹೊರಹಾಕುವ ಸಾಧು, ತಮ್ಮ ಸಂಗೀತವಿದ್ದ

‘ಎಚ್2ಓ’ ಆಡಿಯೋ 1 ಕೋಟಿ 35 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. ‘ನಮ್ಮವರನ್ನು ನಾವೇ ನಿರ್ಲಕ್ಷಿಸುವುದು ಸರಿಯಲ್ಲ’ ಅನ್ನುತ್ತಲೇ ‘ಭಲೇ..’ ಹಾಡುಗಳನ್ನು ಹೊರತಂದ ಆಂಧ್ರದ ಆದಿತ್ಯ ಆಡಿಯೋ ಮಾಲೀಕರನ್ನು ಸಾಧು ಅಭಿನಂದಿಸುತ್ತಾರೆ!

Write A Comment