ಜಕಾರ್ತ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ನಲ್ಲಿ ಸ್ಪೇನ್‌ನ ಕ್ಯಾರೊಲೀನಾ ಮರೀನ್ ವಿರುದ್ಧ 16-21, 19-21 ಗೇಮ್‌ಗಳಿಂದ ಸೋತ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಭಾನುವಾರ ಚಿನ್ನದ ಪದಕದಿಂದ ವಂಚಿತರಾದರು.
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಅತ್ಯುತ್ತಮ ಆಟಗಾರ್ತಿಯಾಗಿ ಹೊರಹೊಮ್ಮಿದ ಸೈನಾ ರಜತ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಸ್ವಾತಂತ್ರ್ಯ ದಿನದಂದು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ತಲುಪುವ ಮೂಲಕ ಸೈನಾ ಐತಿಹಾಸಿಕ ಸಾಧನೆ ಮೆರೆದಿದ್ದರು.
ಉತ್ತಮ ಹೋರಾಟದೊಂದಿಗೆ ಪಂದ್ಯ ಆರಂಭವಾದರೂ, ಕ್ಯಾರೋಲಿನಾ ಒಡ್ಡಿದ ತೀವ್ರ ಸ್ಪರ್ಧೆಗೆ ಸೈನಾ ಮಣಿದರು. ಮೊದಲು ಸೈನಾ 7-5 ಅಂತರದಿಂದ ಮುಂದಿದ್ದರು, ನಂತರ ಮಿಂಚಿನ ವೇಗದಲ್ಲಿ ಆಡಿದ ಕ್ಯಾರೊಲೀನಾ 11-7 ಗೇಮ್‌ಗಳಿಂದ ಜಯ ಸಾಧಿಸಿದರು.
ಎರಡನೇ ಗೇಮ್‌ನ ಆರಂಭದಲ್ಲೂ ಸೈನಾ ಮುಂಚೂಣಿ ಸಾಧಿಸಿದರೂ, ಕ್ಯಾರೋಲಿನಾ ಅವರ ರಭಸದ ಹೊಡೆತಕ್ಕೆ ನಂತರ ಶರಣಾದರು. 22ರ ಹರೆಯದ ಮರೀನ್, ಶನಿವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸಂಗ್ ಜಿ ಹ್ಯುನ್‌ಗೆ 21-17, 15-21, 21-16 ಗೇಮ್‌ಗಳಿಂದ ಸೋಲುಣಿಸಿ ಸತತ 2ನೇ ಬಾರಿ ಫೈನಲ್ ತಲುಪಿದ ಸಾಧನೆ ಮಾಡಿದ್ದರು.
ಇದೇ ವರ್ಷ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್, ಕ್ಯಾರೊಲೀನಾ ಮರೀನ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದರು.