ಮುತ್ತಪ್ಪ ರೈ ಕುರಿತು ಸಿನಿಮಾ ಮಾಡುತ್ತೀನಿ ಎಂದಿದ್ದರು ರಾಮ್‌ಗೋಪಾಲ್ ವರ್ಮ. ಆದರೆ, ಈ ಕುರಿತು ರೈ ಅವರನ್ನು ಕೇಳಿದರೆ, ವರ್ಮ ಬಂದು ಮಾತಾಡಿರೋದು ಹೌದು, ಚಿತ್ರ ಮಾಡುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದಿದ್ದರು. ಹಾಗಾದರೆ ರೈ ಕುರಿತ ಸಿನಿಮಾ ಸೆಟ್ಟೇರುತ್ತಾ, ಇಲ್ಲವೋ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ರೈ ಕುರಿತ ಸಿನಿಮಾ ನಿಜಕ್ಕೂ ಸೆಟ್ಟೇರಲಿದೆಯಂತೆ. ಚಿತ್ರದಲ್ಲಿ ರೈ ಆಗಿ ನಟಿಸುತ್ತಿರೋದು ಬೇರ್ಯಾರೂ ಅಲ್ಲ, ಸುದೀಪ್. ಈ ಚಿತ್ರಕ್ಕೆ ರಾಮ್‌ಗೊàಪಾಲ್ ವರ್ಮ ಕಥೆ ಬರೆದು ನಿರ್ದೇಶಿಸಿದರೆ, ಎಂ.ಎನ್. ಕುಮಾರ್ ನಿರ್ಮಿಸುತ್ತಿದ್ದಾರೆ. ಈ ಮುನ್ನ ಚಿತ್ರಕ್ಕೆ “ಅಪ್ಪ’ ಎಂಬ ಹೆಸರಿಡಲಾಗಿದೆ ಎಂದು ಹೇಳಲಾಗಿತ್ತು. ಈಗಿನ ಸುದ್ದಿಯ ಪ್ರಕಾರ, ಚಿತ್ರಕ್ಕೆ “ರೈ’ ಎಂದೇ ಹೆಸರಿಡಲಾಗಿದೆ.
ಎಲ್ಲಾ ಸರಿ, ಈ ಚಿತ್ರ ಯಾವಾಗ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆ ಬರಬಹುದು. ಏಕೆಂದರೆ, ಸದ್ಯಕ್ಕೆ ಸುದೀಪ್ “ಕೋಟಿಗೊಬ್ಬ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ನಂತರ “ಹೆಬ್ಬುಲಿ’ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ “ರೈ’ ಶುರುವಾಗೋದು ಯಾವಾಗ ಎಂದರೆ ಬಹುಶಃ ನವೆಂಬರ್‌ನಲ್ಲಿ ಶುರುವಾಗಬಹುದು ಎನ್ನುತ್ತಾರೆ ಕುಮಾರ್.
“ಸದ್ಯಕ್ಕೆ ಚಿತ್ರ ಮಾಡುವುದು ತೀರ್ಮಾನವಾಗಿದೆ. ರಾಮ್‌ಗೋಪಾಲ್ ವರ್ಮ ಅವರು ಮುಂಬೈನಲ್ಲಿ ಕಥೆ-ಚಿತ್ರಕಥೆ ಬರೆಯುವಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಮುಗಿದು ನವೆಂಬರ್ ಕೊನೆ ಅಥವಾ ಡಿಸೆಂಬರ್‌ನಲ್ಲಿ ಚಿತ್ರ ಶುರುವಾಗಬಹುದು’ ಎನ್ನುತ್ತಾರೆ ಕುಮಾರ್.
-ಉದಯವಾಣಿ