ಮನೋರಂಜನೆ

ನಾಲ್ಕು ವರ್ಷ 50 ಚಿತ್ರ! ಅರ್ಧ ಸೆಂಚುರಿ ಬಾರಿಸಿದ ಆರ್ಮುಗಂ ರವಿಶಂಕರ್‌

Pinterest LinkedIn Tumblr

Ravishankar-(4)ಗಾಂಧಿನಗರಕ್ಕೆ ಕಾಲಿಟ್ಟು ಕೇವಲ ನಾಲ್ಕು ವರ್ಷ. ಮಾಡಿದ್ದು ಬರೋಬ್ಬರಿ 50 ಪ್ಲಸ್‌ ಚಿತ್ರ! ಇಷ್ಟು ಕಡಿಮೆ ವರ್ಷಗಳಲ್ಲಿ 50 ಸಿನಿಮಾ ಮಾಡೋದು ಅಂದ್ರೆ ಸುಮ್ನೆàನಾ? ಅದು ಆರ್ಮುಗಂ ಅಲಿಯಾಸ್‌ ರವಿಶಂಕರ್‌ಗೆ ಸಾಧ್ಯವಾಗಿದೆ. ಹೌದು, ಖಳನಟನಾಗಿ ರವಿಶಂಕರ್‌ ಕನ್ನಡದಲ್ಲಿ ಐವತ್ತು ಚಿತ್ರಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಕಿಚ್ಚ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಸುದೀಪ್‌ ನಿರ್ಮಿಸುತ್ತಿರುವ ತಮಿಳಿನ “ಜಿಗರ್‌ಥಂಡ’ದ ರೀಮೇಕ್‌, ರವಿಶಂಕರ್‌ ಅಭಿನಯದ 50 ನೇ ಸಿನಿಮಾ ಅನ್ನೋದು ವಿಶೇಷ.

ವಿಶೇಷವೆಂದರೆ, “ಅಧ್ಯಕ್ಷ’ ಮತ್ತು “ವಿಕ್ಟರಿ’ ಚಿತ್ರಗಳಲ್ಲಿ ಮಾತ್ರ ಕಾಮಿಡಿ ವಿಲನ್‌ ಆಗಿ ಕಾಣಿಸಿಕೊಂಡ ರವಿಶಂಕರ್‌, ಮಿಕ್ಕ ಚಿತ್ರಗಳಲ್ಲಿ ವಿಲನ್‌ ಆಗಿಯೇ ನಟಿಸಿದ್ದಾರೆ. ರವಿಶಂಕರ್‌ಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್‌ ನೀಡಿದ್ದು ಸುದೀಪ್‌ ಅಭಿನಯದ “ಕೆಂಪೇಗೌಡ’. 2011ರಲ್ಲಿ ಬಂದ ಆ ಚಿತ್ರದಲ್ಲಿ ಯಾವಾಗ, ರವಿಶಂಕರ್‌ ತೆರೆಯ ಮೇಲೆ ಅಬ್ಬರಿಸಿದರೋ, ಕನ್ನಡ ಚಿತ್ರರಂಗಕ್ಕೆ ಹೊಸ ಖಳನಟ ಸಿಕ್ಕಾಯ್ತು ಅಂತ ಅದೆಷ್ಟೋ ಮಂದಿ ಖುಷಿಗೊಂಡಿದ್ದುಂಟು. ಅದೇ ಖುಷಿಯಲ್ಲೇ ರವಿಶಂಕರ್‌ಗೆ ಭರಪೂರ ಅವಕಾಶಗಳೂ ದೊರಕಿದ್ದುಂಟು. ತಮ್ಮ ವಿಶೇಷ ಶೈಲಿಯ ಡೈಲಾಗ್‌ ಡಿಲವರಿ ಬಿಡುವ ಮೂಲಕ ಎಂಥವರನ್ನೂ ಭಯಗೊಳಿಸುವಂತಹ ನಟನೆ ಮಾಡಿಕೊಂಡು ಬಂದ ರವಿಶಂಕರ್‌, ಈಗ ಐವತ್ತು ಚಿತ್ರಗಳನ್ನು ಪೂರೈಸಿದ್ದಾರೆ. ಸ್ವತಃ ರವಿಶಂಕರ್‌ ಅವರಿಗೇ ಇಷ್ಟು ಕಡಿಮೆ ಅವಧಿಯಲ್ಲಿ ಹಾಫ್ಸೆಂಚುರಿ ಆಗೋಯ್ತಾ ಅನ್ನೋ ಅಚ್ಚರಿ. ಇದಕ್ಕೆಲ್ಲಾ ಕಾರಣ ಆಗಿರೋದು ಕರ್ನಾಟಕದ ಮಂದಿ ಮತ್ತು ತನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಡುತ್ತಿರುವ ನಿರ್ದೇಶಕ, ನಿರ್ಮಾಪಕರು ಮತ್ತು ಹೀರೋಗಳು ಎನ್ನಲು ಮರೆಯದೆ ಅವರಿಗೋಂದು ಕೃತಜ್ಞತೆ ಸಲ್ಲಿಸುತ್ತಾರೆ ರವಿಶಂಕರ್‌.

ಅಂತೂ ಇಂತೂ ಗೊತ್ತಾಗದಂತೆಯೇ 50 ಪ್ಲಸ್‌ ಚಿತ್ರಗಳನ್ನು ಪೂರೈಸಿರುವ ರವಿಶಂಕರ್‌ ಅವರ ಕಣ್ಣ ಮುಂದೆ ದೊಡ್ಡ ಕನಸೊಂದಿದೆ. ಅದು ನವೆಂಬರ್‌ನಲ್ಲಿ ನನಸಾಗಲಿದೆಯಂತೆ. ಅಷ್ಟಕ್ಕೂ ನವೆಂಬರ್‌ನಲ್ಲೇ ಆ ಕನಸು ನನಸಾಗಬೇಕಾ? ಎಂಬ ಪ್ರಶ್ನೆಗೆ ಉತ್ತರಿಸೋ ರವಿಶಂಕರ್‌, “ನವೆಂಬರ್‌ 28 ನನ್ನ ಹುಟ್ಟುಹಬ್ಬ. ಅಂದು ದೊಡ್ಡದೊಂದು ಸುದ್ದಿ ಕೊಡ್ತೀನಿ’ ಅಂತಾರೆ. ಹಾಗಾದರೆ, ನಿರ್ದೇಶನ ಏನಾದ್ರೂ ಮಾಡ್ತೀರಾ ಎಂಬ ಮತ್ತೂಂದು ಪ್ರಶ್ನೆಗೆ, ಅದೆಲ್ಲವನ್ನೂ ನನ್ನ ಹುಟ್ಟುಹಬ್ಬದ ದಿನದಂದೇ ಹೇಳ್ತೀನಿ. ಅಲ್ಲಿಯವರೆಗೆ ಕಾಯ್ತಾ ಇರಿ’ ಎಂದಷ್ಟೇ ಹೇಳುತ್ತಾರೆ ರವಿಶಂಕರ್‌.

“ಕನ್ನಡಿಗರು ನನ್ನನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಅವರ ಋಣವನ್ನು ಹೇಗೆ ತೀರಿಸಬೇಕೋ ಗೊತ್ತಿಲ್ಲ. ನನ್ನ ಅಣ್ಣ ಸಾಯಿಕುಮಾರ್‌ಗೂ ಕನ್ನಡಿಗರು ಬೆಳೆಸಿದರು. ನನ್ನನ್ನೂ ಹರಸಿದ್ದಾರೆ. ನಾನೆಂದೂ ನನ್ನ ಬೆಳೆಸಿದ ಕನ್ನಡಿಗರನ್ನು ಮರೆಯೋದಿಲ್ಲ’ ಎನ್ನುತ್ತಾರೆ ರವಿಶಂಕರ್‌.
-ಉದಯವಾಣಿ

Write A Comment