ಮನೋರಂಜನೆ

ರಾಷ್ಟ್ರೀಯ ತಂಡದಲ್ಲಿ ಕನ್ನಡಿಗ ಅರವಿಂದ್‌ಗೆ ಸ್ಥಾನ: ನಾಯಕರಾಗಿ ಮುಂದುವರಿದ ದೋನಿ

Pinterest LinkedIn Tumblr

pvec21xaravinda_0ಬೆಂಗಳೂರು: ದೇಶಿ ಮತ್ತು ಐಪಿಎಲ್‌ ಟೂರ್ನಿಗಳಲ್ಲಿ ಅಪೂರ್ವ ಸಾಮರ್ಥ್ಯ ನೀಡಿರುವ ಕರ್ನಾಟಕದ ಎಸ್‌. ಅರವಿಂದ್‌ ಅವರಿಗೆ ಮತ್ತೆ ಅದೃಷ್ಟ ಒಲಿದು ಬಂದಿದೆ. ದಕ್ಷಿಣ ಆಫ್ರಿಕಾ ಎದುರು ಅಕ್ಟೋಬರ್‌ ಎರಡರಿಂದ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಗೆ ಬೆಂಗಳೂರಿನ ಆಟಗಾರನಿಗೆ ಸ್ಥಾನ ಲಭಿಸಿದೆ.

ಬಿಸಿಸಿಐ ಆಯ್ಕೆ ಸಮಿತಿಯು ಭಾನುವಾರ ನಗರದಲ್ಲಿ ಸಭೆ ನಡೆಸಿ ತಂಡವನ್ನು ಆಯ್ಕೆ ಮಾಡಿತು. ಬಳಿಕ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್‌ ಪಾಟೀಲ್‌ ಮತ್ತು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್‌ ಟ್ವೆಂಟಿ–20 ಸರಣಿ ಮತ್ತು ಮೊದಲ ಮೂರು ಏಕದಿನ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದರು.

ಈ ಎರಡೂ ಮಾದರಿಗಳಿಗೂ ಮಹೇಂದ್ರ ಸಿಂಗ್ ದೋನಿ ನಾಯಕರಾಗಿ ಮುಂದುವರಿದಿದ್ದಾರೆ. ಆಯ್ಕೆ ಸಮಿತಿಯ ಸಭೆಯಲ್ಲಿ ದೋನಿ ಕೂಡ ಪಾಲ್ಗೊಂಡಿದ್ದರು. ರಾಜ್ಯದ ಇನ್ನೊಬ್ಬ ಆಟಗಾರ ಸ್ಟುವರ್ಟ್‌ ಬಿನ್ನಿ ಎರಡೂ ಮಾದರಿಯಲ್ಲೂ ಸ್ಥಾನ ಉಳಿಸಿಕೊಂಡಿದ್ದಾರೆ.  ಗಾಯದಿಂದ ಚೇತರಿಸಿಕೊಂಡಿರುವ ಶಿಖರ್‌ ಧವನ್‌, ಯುವ ಆಟಗಾರ ಅಕ್ಷರ್‌ ಪಟೇಲ್‌, ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ ಸುರೇಶ್ ರೈನಾ ಅವರನ್ನು ಟ್ವೆಂಟಿ–20 ಮತ್ತು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ.

‘ಮುಂದಿನ ವರ್ಷ ನಡೆಯುವ ಟ್ವೆಂಟಿ–20 ವಿಶ್ವಕಪ್‌ ಅನ್ನು   ಗಮನ ದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ. ಎರಡೂ ಮಾದರಿ ಯಲ್ಲೂ ಯುವ ಆಟಗಾರರಿಗೆ ಅವಕಾಶ ಕೊಡಲಾಗಿದೆ’ ಎಂದು ಸಂದೀಪ್‌ ಪಾಟೀಲ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಹರಿಣಗಳ ನಾಡಿನ ಎದುರಿನ ಸರಣಿಗೆ ಸ್ಪಿನ್‌ ವಿಭಾಗಕ್ಕೆ ಒತ್ತು ಕೊಡಲಾಗಿದೆ. ಅಕ್ಷರ್‌ ಪಟೇಲ್‌, ಹಿರಿಯ ಆಫ್‌ ಸ್ಪಿನ್ನರ್‌ ಹರಭಜನ್ ಸಿಂಗ್‌, ಅಮಿತ್‌ ಮಿಶ್ರಾ ಮತ್ತು ಅನುಭವಿ ಅಶ್ವಿನ್‌ ಅವರಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ.

ಆದರೆ, ಹರಭಜನ್ ಅವರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಈ ಬಗ್ಗೆ ಸಂದೀಪ್‌ ಪಾಟೀಲ್‌ ಅವರನ್ನು ಪ್ರಶ್ನಿಸಿದಾಗ, ‘ಹರಭಜನ್‌ ಉತ್ತಮ ಸಾಮರ್ಥ್ಯ ನೀಡುತ್ತಿದ್ದಾರೆ. ಆದರೆ, 15 ಆಟಗಾರರ ತಂಡವನ್ನಷ್ಟೇ ಪ್ರಕಟಿಸ ಬೇಕಲ್ಲವೇ. ಒಂದು ವೇಳೆ 16 ಆಟ ಗಾರರ ತಂಡ ಪ್ರಕಟಿಸಿದ್ದರೆ ಅದರಲ್ಲಿ ಹರಭಜನ್‌ ಕೂಡ ಇರುತ್ತಿದ್ದರು’ ಎಂದರು.

ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ವೇಗಿ ಮಹಮ್ಮದ್ ಶಮಿ  ಚೇತರಿಸಿಕೊಂಡ ಬಳಿಕ ಅವರನ್ನು ಆಯ್ಕೆಗೆ ಪರಿಗಣಿಸಲು ಬಿಸಿಸಿಐ ನಿರ್ಧರಿಸಿದೆ. ‘ಸೋಮವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ತಂಡದ ಶಿಬಿರ ಆರಂಭ ವಾಗಲಿದೆ. ರೋಜರ್‌ ಬಿನ್ನಿ ಶಿಬಿರದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ’ ಎಂದು ಅನುರಾಗ್ ಠಾಕೂರ್‌ ತಿಳಿಸಿದರು.

ದಕ್ಷಿಣ ಆಫ್ರಿಕಾ ತಂಡ ‘ಮಹಾತ್ಮ ಗಾಂಧಿ–ನೆಲ್ಸನ್‌ ಮಂಡೇಲಾ’ ಸರಣಿಯಲ್ಲಿ ಮೂರು ಟ್ವೆಂಟಿ–20, ಐದು ಏಕದಿನ ಪಂದ್ಯಗಳು ಮತ್ತು ನಾಲ್ಕು ಟೆಸ್ಟ್‌ ಆಡಲಿದೆ. ಸೆ. 29ರಂದು ಬೋರ್ಡ್ ಅಧ್ಯಕ್ಷರ ಇಲೆವೆನ್‌ ಎದುರು ಪ್ರವಾಸಿ ತಂಡ ಒಂದು ಅಭ್ಯಾಸ ಪಂದ್ಯ ಆಡಲಿದೆ.

ತಂಡಗಳು:
ಟ್ವೆಂಟಿ–20 ತಂಡ: ಮಹೇಂದ್ರ ಸಿಂಗ್‌ ದೋನಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಸ್ಟುವರ್ಟ್‌ ಬಿನ್ನಿ, ಎಸ್‌. ಅರವಿಂದ್‌, ಆರ್‌. ಅಶ್ವಿನ್‌, ಅಕ್ಷರ್ ಪಟೇಲ್‌, ಹರಭಜನ್‌ ಸಿಂಗ್‌, ಭುವನೇಶ್ವರ್‌ ಕುಮಾರ್‌, ಮೋಹಿತ್ ಶರ್ಮಾ ಮತ್ತು ಅಮಿತ್‌ ಮಿಶ್ರಾ.

ಏಕದಿನ ಸರಣಿಗೆ ತಂಡ: ಮಹೇಂದ್ರ ಸಿಂಗ್‌ ದೋನಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಸ್ಟುವರ್ಟ್‌ ಬಿನ್ನಿ, ಆರ್. ಅಶ್ವಿನ್‌, ಅಕ್ಷರ್‌ ಪಟೇಲ್‌, ಗುರುಕೀರತ್‌ ಸಿಂಗ್‌, ಅಮಿತ್‌ ಮಿಶ್ರಾ, ಭುವನೇಶ್ವರ್ ಕುಮಾರ್, ಮೋಹಿತ್‌ ಶರ್ಮಾ ಮತ್ತು ಉಮೇಶ್ ಯಾದವ್‌.

***
ಅನಿರೀಕ್ಷಿತ ಆಯ್ಕೆ ಖುಷಿ ತಂದಿದೆ
ಬೆಂಗಳೂರು: ‘ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕೆನ್ನುವುದು ಪ್ರತಿ ಕ್ರಿಕೆಟಿಗನ ಕನಸು. ಅದರಂತೆ ನಾನೂ ಇದೇ ರೀತಿಯ ಆಸೆ ಹೊಂದಿದ್ದೆ. ಆದರೆ, ಟ್ವೆಂಟಿ–20 ಸರಣಿಗೆ ಈಗ ಆಯ್ಕೆಯಾಗು ತ್ತೇನೆ ಎನ್ನುವ ನಿರೀಕ್ಷೆ ಹೊಂದಿರಲಿಲ್ಲ. ಅನಿರೀಕ್ಷಿತ ಆಯ್ಕೆ ಅಚ್ಚರಿಯ ತಂದಿದೆ. ಜೊತೆಗೆ ಜವಾಬ್ದಾರಿ ಹೆಚ್ಚಿಸಿದೆ’ ಎಂದು ಎಸ್‌. ಅರವಿಂದ್‌ ಪ್ರತಿಕ್ರಿಯಿಸಿದ್ದಾರೆ.

31 ವರ್ಷದ ಎಡಗೈ ವೇಗಿ ಅರವಿಂದ್‌ 2008ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಗಾಯದ ಸಮಸ್ಯೆಯಿಂದ ಬಳಲಿದ್ದ ಕಾರಣ ಎರಡು ವರ್ಷ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗಿದ್ದರು. ನಂತರ ಅಪೂರ್ವವಾಗಿ ಚೇತರಿಸಿಕೊಂಡು ಮತ್ತೆ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಬೆಂಗಳೂರಿನ ಅರವಿಂದ್ 2011ರಲ್ಲಿ ಇಂಗ್ಲೆಂಡ್ ಎದುರಿನ ಕ್ರಿಕೆಟ್‌ ಸರಣಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದ್ದರು. ಆದರೆ, ಅಂತಿಮ ಹನ್ನೊಂದರ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಆರ್‌ಸಿಬಿ ತಂಡದ ಆ್ಯಡಮ್‌ ಮಿಲ್ನೆ ಗಾಯಗೊಂಡಿದ್ದ ಕಾರಣ ಅವರ ಬದಲು ಅರವಿಂದ್‌ಗೆ ಈ ಬಾರಿಯ ಐಪಿಎಲ್‌ ನಲ್ಲಿ ಸ್ಥಾನ ಲಭಿಸಿತ್ತು. ಒಂದೇ ಪಂದ್ಯದಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದರು. ‘ಐಪಿಎಲ್‌ನಲ್ಲಿ ಆಡುವಾಗ ಅನು ಭವಿ ಆಟಗಾರರ ಜೊತೆ ಡ್ರೆಸ್ಸಿಂಗ್‌ ಕೊಠಡಿ ಹಂಚಿಕೊಂಡಿದ್ದೇನೆ.  ಆ ದಿನಗಳೇ ನನಗೆ ಈಗಲೂ ಸ್ಫೂರ್ತಿಯೆನಿ ಸುತ್ತದೆ. ರಾಹುಲ್‌ ದ್ರಾವಿಡ್‌ ಸರ್‌ ನೀಡಿದ ಸಲಹೆ ಪ್ರೇರಣೆ’ ಎಂದು ಅರವಿಂದ್‌ ನುಡಿದರು.

*
ಪ್ರತಿ ವಿಷಯದ ಬಗ್ಗೆಯೂ ಸಕಾರಾತ್ಮಕವಾಗಿ ಯೋಚಿಸುವಂತೆ ಮಾಡಿದ್ದು ರಾಹುಲ್‌ ದ್ರಾವಿಡ್‌. ನನ್ನ ಸಾಧನೆಯಲ್ಲಿ ಅವರ ಪಾಲು ದೊಡ್ಡದು.
-ಎಸ್‌. ಅರವಿಂದ್‌

Write A Comment