ಮನೋರಂಜನೆ

ಅನನ್ಯ ಆಡಳಿತಗಾರ ದಾಲ್ಮಿಯಾ ಇನ್ನಿಲ್ಲ

Pinterest LinkedIn Tumblr

dalmiyaಕೋಲ್ಕತ್ತ (ಪಿಟಿಐ/ಐಎಎನ್‌ಎಸ್‌): ಎದೆ ನೋವಿನಿಂದಾಗಿ ಹೋದ ಗುರು ವಾರ ಆಸ್ಪತ್ರೆಗೆ ದಾಖಲಾಗಿದ್ದ ಬಿಸಿಸಿಐ ಅಧ್ಯಕ್ಷ ಜಗಮೋಹನ್‌ ದಾಲ್ಮಿಯಾ (75) ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಇಲ್ಲಿನ ಬಿ.ಎಂ ಬಿರ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಭಾನುವಾರ ಸಂಜೆ ಆರು ಗಂಟೆಯ ಸುಮಾರಿಗೆ ಹೃದಯಾಘಾತವಾಗಿತ್ತು. ಇದರಿಂದ ಚೇತರಿಸಿಕೊಳ್ಳದ ಅವರು ರಾತ್ರಿ 9.15ರ ಸುಮಾರಿಗೆ ಅಸುನೀಗಿದರು. ಅವರಿಗೆ ಪತ್ನಿ ಚಂದ್ರಲೇಖಾ, ಪುತ್ರಿ ವೈಶಾಲಿ ಮತ್ತು ಪುತ್ರ ಅಭಿಷೇಕ್‌ ಇದ್ದಾರೆ.

ಅನನ್ಯ ಆಡಳಿತಗಾರರಾಗಿದ್ದ ದಾಲ್ಮಿಯಾ ಈ ವರ್ಷದ ಮಾರ್ಚ್‌ ಎರಡರಂದು ಬಿಸಿಸಿಐ ಅಧ್ಯಕ್ಷ ಗಾದಿಗೆ ಏರಿದ್ದರು. ಇತ್ತೀಚಿನ ದಿನಗಳಲ್ಲಿ ಪದೇ ಪದೇ ಅನಾರೋಗ್ಯ ಕಾಡಿದ್ದರಿಂದ ಅವರು ಬಿಸಿಸಿಐ ಆಡಳಿತ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಸಜ್ಜನ ಆಡಳಿತಗಾರ..

1940 ಮೇ 30 ರಂದು ಕಲ್ಕತ್ತದಲ್ಲಿ ಜನಿಸಿದ ದಾಲ್ಮಿಯಾ ಇಲ್ಲಿನ ಸ್ಕಾಟಿಸ್‌ ಚರ್ಚ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ್ದರು. ಕಾಲೇಜು ದಿನಗಳಲ್ಲಿ ವಿಕೆಟ್‌ ಕೀಪರ್‌ ಆಗಿ ಗುರುತಿಸಿಕೊಂಡಿದ್ದ ಅವರು ತಮ್ಮ ಕಾಲೇಜು ತಂಡ ಮತ್ತು ಕೆಲ ಕ್ಲಬ್‌ ಪರವಾಗಿಯೂ ಆಡಿದ್ದರು.

1979ರಲ್ಲಿ ಬಿಸಿಸಿಐ ಆಡಳಿತ ಚಟುವಟಿಕೆಗಳಲ್ಲಿ ಗುರುತಿಸಿಕೊಂಡ ಅವರು 1983ರಲ್ಲಿ ಮೊದಲ ಬಾರಿಗೆ ಖಜಾಂಚಿಯಾಗಿ ಆಯ್ಕೆಯಾಗಿದ್ದರು. 1997ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಅವರು ಮೂರು ವರ್ಷಗಳ ಕಾಲ ಈ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

2001ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಅವರು 2004ರವರೆಗೆ ಕಾರ್ಯಭಾರ ಮಾಡಿದ್ದರು. 2013ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್‌.ಶ್ರೀನಿವಾಸನ್‌ ಐಪಿಎಲ್‌ ಕಳ್ಳಾಟ ಮತ್ತು ಬೆಟ್ಟಿಂಗ್‌ ಹಗರಣಕ್ಕೆ ಸಂಬಂಧಿಸಿದಂತೆ ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದರು. ಸುಪ್ರೀಂಕೋರ್ಟ್‌ ಆದೇಶದಿಂದ ಅವರು ಈ ಹುದ್ದೆಯಿಂದ ಕೆಳಗಿಳಿದಿದ್ದರು. ಈ ಅವಧಿಯಲ್ಲಿ ದಾಲ್ಮಿಯಾ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು.

2015ರ ಮಾರ್ಚ್‌ನಲ್ಲಿ ನಡೆದ ಬಿಸಿಸಿಐ ಅಧ್ಯಕ್ಷ ಸ್ಥಾನದ ಚುನಾವಣೆ ಯಲ್ಲಿ ಗೆದ್ದು ಅವರು 10 ವರ್ಷಗಳ ಬಳಿಕ ಮತ್ತೆ ಅಧ್ಯಕ್ಷ ಗಾದಿಯನ್ನು ಅಲಂಕರಿಸಿದ್ದರು. 2007ರಲ್ಲಿ ಅವರು ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲೂ ಅವರು ಸಿಎಬಿ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು. ಅವರು 35 ವರ್ಷಗಳ ಕಾಲ ಬಿಸಿಸಿಐನಲ್ಲಿ ಸೇವೆ ಸಲ್ಲಿದ್ದಾರೆ.

ಕಾರ್ಯಕ್ರಮ ರದ್ದು.. ದಾಲ್ಮಿಯಾ ನಿಧನದ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ನಿಗದಿ ಯಾಗಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ  ಕ್ರಿಕೆಟ್‌ ಸರಣಿಯ ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾರತ ಏಕದಿನ ಮತ್ತು ಟ್ವೆಂಟಿ–20 ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಮತ್ತು ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾ ತಂಡದ ನಾಯಕರು ಭಾಗವಹಿಸಬೇಕಿತ್ತು.

ತುಂಬಲಾರದ ನಷ್ಟ..
‘ಭಾರತದ ಕ್ರಿಕೆಟ್‌ಗೆ ತುಂಬಲಾರದ ನಷ್ಟ ಉಂಟಾಗಿದೆ. ನನ್ನ ಮತ್ತು ಅವರ ನಡುವೆ ಆಡಳಿತದ ವಿಚಾರದಲ್ಲಿ ಉತ್ತಮ ಹೊಂದಾಣಿಕೆ ಇತ್ತು. ನಾವೀಗ ಒಬ್ಬ ಸಜ್ಜನ ಕ್ರೀಡಾ ಆಡಳಿತಗಾರರನ್ನು ಕಳೆದುಕೊಂಡಿದ್ದೇವೆ’ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ. ‘ದಾಲ್ಮಿಯಾ ದೂರದೃಷ್ಟಿ ಹೊಂದಿ ದ್ದಂತಹ ಆಡಳಿತಗಾರ. ಭಾರತದ ಕ್ರಿಕೆಟ್‌ಗೆ ಅವರು ನೀಡಿರುವ  ಕೊಡುಗೆ ಅನನ್ಯವಾದುದು’ ಎಂದೂ ಅವರು ಹೇಳಿದ್ದಾರೆ.

ಸಂತಾಪ ನಮನ..
ದಾಲ್ಮಿಯಾ ನಿಧನಕ್ಕೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ನಮನ ಸಲ್ಲಿಸಿದ್ದಾರೆ. ‘ದಾಲ್ಮಿಯಾ ಸಾವಿನ ಸುದ್ದಿ ತಿಳಿದು ಮನಸ್ಸು ಭಾರವಾಯಿತು’ ಎಂದು ಪ್ರಣವ್‌ ಟ್ವೀಟ್‌ ಮಾಡಿದ್ದಾರೆ.

‘ದಾಲ್ಮಿಯಾ ಕುಟುಂಬಕ್ಕೆ ಭಗವಂತ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ‘ದಾಲ್ಮಿಯಾ ನಾನು ಕಂಡ ಅಪ ರೂಪದ ಕ್ರೀಡಾ ಆಡಳಿತಗಾರ ರಾಗಿದ್ದರು. ಅವರ ನಿಧನದ ಸುದ್ದಿ ತಿಳಿದು ಕಣ್ಣುಗಳು ತುಂಬಿ ಬಂದವು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Write A Comment