ಬೆಂಗಳೂರು, ಸೆ.28: ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ‘ಎ’ ತಂಡದ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ಮೇಲುಗೈ ಸಾಧಿಸಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೆ ದಿನ ಆಟ ನಿಂತಾಗ ಬಾಂಗ್ಲಾ ‘ಎ’ ತಂಡ ಎರಡನೆ ಇನಿಂಗ್ಸ್‌ನಲ್ಲಿ 11 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 36 ರನ್ ಗಳಿಸಿತ್ತು.
ನಾಯಕ ಮೂಮಿನುಲ್ ಹಕ್ ಔಟಾಗದೆ 9 ಮತ್ತು ವಿಕೆಟ್ ಕೀಪರ್ ಲಿಟ್ಟನ್ ದಾಸ್ 7 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ.
ಇದಕ್ಕೂ ಮೊದಲು ಭಾರತ ‘ ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ 86.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 411 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದರೊಂದಿಗೆ ಭಾರತ 183 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು.
ಮೊದಲ ದಿನದಾಟ ಕೊನೆಗೊಂಡಾಗ 116 ರನ್ ಗಳಿಸಿ ಔಟಾಗದೆ ಉಳಿದಿದ್ದ ನಾಯಕ ಶಿಖರ್ ಧವನ್ ಅವರು ಶ್ರೇಯಸ್ ಅಯ್ಯರ್ ಜೊತೆ ಬ್ಯಾಟಿಂಗ್ ಮುಂದುವರಿಸಿ ಎರಡನೆ ವಿಕೆಟ್‌ಗೆ ಜೊತೆಯಾಟದಲ್ಲಿ 67 ರನ್ ಸೇರಿಸಲು ನೆರವಾದರು. ಧವನ್ 150 ರನ್ (146ಎ, 18ಬೌ,3ಸಿ) ಗಳಿಸಿದ್ದಾಗ ಸಕ್ಲೈನ್ ಸಾಜಿಬ್ ಅವರು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಅಯ್ಯರ್ 38 ರನ್ ಗಳಿಸಿ ಔಟಾದರು.
ನಾಲ್ಕನೆ ವಿಕೆಟ್‌ಗೆ ಕರುಣ್ ನಾಯರ್ ಮತ್ತು ಶಂಕರ್ 108 ರನ್‌ಗಳ ಜೊತೆಯಾಟ ನೀಡಿದರು. ನಾಯರ್ 71 ರನ್ ಮತ್ತು ಶಂಕರ್ 86 ರನ್ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ ್ಸಮನ್ ನಮನ್ ಓಜಾ 25 ರನ್ ಗಳಿಸಿ ಔಟಾಗದೆ ಉಳಿದರು. ಬಾಂಗ್ಲಾದ ಲೆಗ್ ಸ್ಪಿನ್ನರ್ ಝುಬೈರ್ ಹುಸೈನ್ 76ಕ್ಕೆ 2 ವಿಕೆಟ್ ಕಬಳಿಸಿದರು.