ಮನೋರಂಜನೆ

ಬೋಲ್ಡ್ ಆಗಿ ಮಾತನಾಡಿದ ‘ಬುಲೇಟ್ ರಾಣಿ’ ನಿಶಾ

Pinterest LinkedIn Tumblr

nishaವಾರಣಾಸಿ (ಕಾಶಿ)ಯ ಬೆಡಗಿ ನಿಶಾಕೊಥಾರಿ ಮತ್ತೊಮ್ಮೆ ಕನ್ನಡ ಸಿನಿಮಾಕ್ಕೆ ಬಂದಿದ್ದಾರೆ. ರಾಜ್ ದ ಷೋ ಮ್ಯಾನ್, ದಂಡುಪಾಳ್ಯ , ಯಾರಾದ್ರೆ ನನಗೇನು ಎಂಬ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಿಶಾ ಈಗ ಬುಲೆಟ್ ರಾಣಿಯಾಗಿದ್ದಾರೆ. ನಿಶಾಳ ಮೂಲ ನಾಮ ಪ್ರಿಯಾಂಕಾ ಕೊಥಾರಿ.  ಇವರ  ತಂದೆ ಕೆಮಿಕಲ್ ಬ್ಯುನಿನೆಸ್‌ಮನ್. ತಾಯಿ ಗೃಹಿಣಿ. ನಿಶಾ ಕೆಮೆಸ್ಟ್ರಿಯಲ್ಲಿ . ಬಿಎಸ್ಸಿ ಮಾಡಿದ್ದಾರೆ. ಒಲಿದದ್ದು ಒಲಿಸಿಕೊಂಡದ್ದು ಕಲೆ. ಆರು ವರ್ಷ ಕಥಕ್ ಡಾನ್ಸ್ ಅಭ್ಯಾಸ ಮಾಡಿದ ನಿಶಾ ಮಾಡೆಲ್ ಆದರು. ಮ್ಯೂಸಿಕ್ ವೀಡಿಯೋದಲ್ಲಿ ಕಾಣಿಸಿಕೊಂಡರು.

ರಾಮ್‌ಗೋಪಾಲವರ್ಮನ ಕಣ್ಣಿಗೆ ಬಿದ್ದ ಮೇಲೆ ನಿಶಾಳ ಬದುಕಿನ ಬಣ್ಣವೇ ಬದಲಾಯಿತು. ಮುಖಕ್ಕೆ ಮೇಕಪ್ ಬಿತ್ತು. ಚಿತ್ರನಟಿಯಾದರು. ವರ್ಮನಿಗೂ ಮುನ್ನ ನಿಶಾಳನ್ನು ಗುರುತಿಸಿದ್ದು ಮಾಧವನ್. ‘ಜೇಜೇ’ ಎಂಬ ತಮಿಳು ಸಿನಿಮಾದ ಮೂಲಕ ಅರಂಗೇಟ್ರಂ ಆಯಿತು. ರಾಮ್‌ಗೋಪಾಲವರ್ಮನ ‘ಜೇಮ್ಸ್’ ಎಂಬ ಚಿತ್ರವು ನಿಶಾಗೆ ‘ಸೆಕ್ಸೀಗರ್ಲ್’ ಇಮೇಜ್ ನೀಡಿತು.  ವರ್ಮನ ಶಿವ, ದ ಕಿಲರ್, ಡರ್ನಾಜರೂರಿಹೈ, ಆಗ್, ಡಾರ್ಲಿಂಗ್, ಅಜ್ಞಾತ್ ಮುಂತಾದ ಸಿನಿಮಾಗಳಲ್ಲಿ ನಿಶಾಳ  ಅಭಿಯಾನ ಮುಂದುವರಿಯಿತು.

ಹಿಂದಿ, ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತ ಸಾಗಿರುವ 32ರ ಹರಯದ ನಿಶಾಗೆ ಸೆಕ್ಸೀ ಇಮೇಜ್‌ನಿಂದ ಹೊರ ಬರುವ ತೀವ್ರ ತವಕವಿದೆ. ‘ಇದುವರೆಗೆ 18 ಸಿನಿಮಾಗಳಲ್ಲಿ ಅಭಿನಯಿಸಿದೀನಿ. ನನಗೆ ನಟಿಯಾಗುವ ಅತೀವ ಆಸೆ ಇತ್ತು. ಅದು ಈಡೇರಿದೆ’ ಎಂದು ನಿಶಾ ಮಾತಿಗೆ ಪ್ರಾರಂಭಿಸಿದರು. ನಿಮ್ಮ ಪಯಣ ತೃಪ್ತಿಕರವಾಗಿದೆಯೆ? ಸಂಪೂರ್ಣ ತೃಪ್ತಿ ಅಂತ ಹೇಳುವುದಕ್ಕಾ ಗುವುದಿಲ್ಲ.  ಪಯಣದಲ್ಲಿ ಕೆಲ ಸಲ ಸಂತಸ ಕಂಡಿದೀನಿ. ತುಂಬಾ ಸಂತೋಷವಾಗಿದೆ. ಕೆಲವು ಸಲ ದುಃಖ… ಬೇಜಾರಾಗಿದೆ. ಸಾಕಷ್ಟು ಕಲಿತಿದೀನಿ. ಕಲೀತಾ ಇದೀನಿ. ದುಃಖ ಯಾಕೆ?

ಅದನ್ನೆಲ್ಲ ಪತ್ರಿಕೆ ಮೂಲಕ ಷೇರ್ ಮಾಡಿಕೊಳ್ಳೋಕೆ ಇಷ್ಟಪಡೊಲ್ಲ. ಸೆಕ್ಸೀ ಅಥವಾ ಗ್ಲಾಮರಸ್ ಇಮೇಜ್ ನಿಮಗೆ ಸಮಾಧಾನ ಕೊಟ್ಟಿದೆಯೆ? ಕಲಾವಿದರಾದವರು ಗ್ಲಾಮರಸ್ ಆಗಿರಬೇಕು. ಅದರಲ್ಲಿ ತಪ್ಪೇನಿಲ್ಲ. ಗ್ಲಾಮರಸ್ ಹೀರೋಯಿನ್ ಅಂತ ಕರೆಸಿಕೊಳ್ಳುವುದು ಸಂತೋಷವೇ. ಆದರೆ ಬರೀ ಇದೇ ಆಗಬಾರದು. ಕಲೆ ಅನ್ನುವುದು ಗ್ಲಾಮರ್‌ಗಷ್ಟೇ ಸೀಮಿತವಾಗಿಲ್ಲ. ವಿಧವಿಧವಾದ ಛಾಯೆಗಳಿವೆ. ಎಲ್ಲ ರೀತಿಯ  ಪಾತ್ರಗಳಲ್ಲೂ ಅಭಿನಯಿಸಿ ಸೈ ಅನ್ನಿಸಿಕೊಳ್ಳಬೇಕು. ಒಂದೇ ಇಮೇಜ್‌ಗೆ ಸೀಮಿತ ವಾಗುವಂಥಹ ಸ್ಥಿತಿ ನಿಮಗೇಕೆ ಬಂತು?

ನಾನು ಅಭಿನಯ ವೃತ್ತಿಗೆ ಇಳಿದಾಗ ಸೂಕ್ತ ಮಾರ್ಗದರ್ಶಕರಿರಲಿಲ್ಲ. ಒಂಟಿಯಾಗಿ ಪ್ರಾರಂಭಿಸಿದೆ. ಬಹುಶಃ ಅನನುಭವದಿಂದಾಗಿ ನನಗೆ ಹೀಗಾಗಿರಬಹುದು.ಬುಲೆಟ್ ರಾಣಿ ಅನ್ನೋ ಕನ್ನಡ ಸಿನಿಮಾದಲ್ಲೂ ನಿಮಗೆ ಗ್ಲಾಮರ್ ಹುಡುಗಿ ಪಾತ್ರವೆ? ತುಂಬಾ ಒಳ್ಳೇ ಪಾತ್ರ. ಇದು ಬಹಳ ಸೀರಿಯಸ್ ಫಿಲಂ ಅಲ್ಲ. ತುಂಬು ಮನರಂಜನ್ಮಾತ ಕಥೆ ಇದೆ. ನನ್ನದು ಬೋಲ್ಡ್ ಹುಡುಗಿ ರೋಲ್. ಬಾಡಿಲಾಂಗ್ವೇಜೇ ಬೋಲ್ಡಾಗಿದೆ. ಆಕ್ಷನ್ , ಅಡ್ವೆಂಚರ್ ಎಲ್ಲ ಇದೆ. ಇಂಥಾ ಪಾತ್ರ ಇದುವರೆಗೂ ಸಿಕ್ಕಿರಲಿಲ್ಲ. ನಿಮ್ಮ  ಇದುವರೆಗಿನ ಇಮೇಜ್‌ಗಿಂತ ಡಿಫರೆಂಟಾಗಿದೆ ಅನ್ನಿ?

ನಾನು ಕಟ್ಟುನಿಟ್ಟಾಗಿ ಇಮೇಜ್‌ಗೆ ಬದ್ಧಳಾಗಿಲ್ಲ. ಜನ ನನ್ನನ್ನ ಸೆಕ್ಸೀ , ಗ್ಲಾಮರಸ್ ಅಂತ ಕರೀತಾರೆ ಅಷ್ಟೇ . ಬುಲೆಟ್‌ರಾಣಿ ಸಿನಿಮಾದ ಪಾತ್ರವೂ ಗ್ಲಾಮರಸ್ ಆಗಿ ಕಂಡರೆ ನಾನೇನು ಮಾಡಲಿ? ನಿಮ್ಮ ದೃಷ್ಟಿಯಲ್ಲಿ ಬದುಕು ಅಂದರೇನು? ಬದುಕು ಅಥವಾ ಜೀವನ ಒಂದು ಸಂಘರ್ಷ. ಬದುಕಿನ ಪ್ರತಿಕ್ಷಣವೂ ಸಂತಸಮಯವಾಗಿರುತ್ತದೆ ಅಂತ ಅಂದುಕೊಳ್ಳುವುದು ತಪ್ಪು. ಹೋರಾಡಬೇಕು, ಗೆಲ್ಲಬೇಕು. ಅದೇ ಬದುಕು, ಅದೇ ಸಂತೋಷ. ಇದು ನಿಮ್ಮ ಅನುಭವವೆ? ಹಾಗಂದುಕೊಳ್ಳಬಹುದು. ಅಭಿನೇತ್ರಿಯಾಗಿ ನಿಮ್ಮನ್ನ ನೀವು ಕಾಣುವ ಬಗೆ?

ಸುಮಾರು ಇಪ್ಪತ್ತು ಸಿನಿಮಾ ಆಗುತ್ತ ಬಂತು. ಈ ಪೈಕಿ ಯಾವ ಸಿನಿಮಾದಲ್ಲಿ ನಾನು ಅಭಿನೇತ್ರಿಯಾಗಿದ್ದೇನೆ ಅಂತ ನೋಡಿದಾಗ ಉತ್ತರ ಸಿಗುವುದಿಲ್ಲ. ಅಭಿನೇತ್ರಿ  ಅನ್ನುವುದು ಪರಿಪೂರ್ಣತೆಯಿಂದ ಕೂಡಿದ ಪದ. ನಿರ್ದೇಶಕರು ಹೇಳಿದ ಹಾಗೆ ನಾನು ನಟಿಸಿರಬಹುದು, ಆದರೆ ಅಭಿನೇತ್ರಿಯಾಗಿಲ್ಲ ಅನ್ನಿಸುತ್ತದೆ.ನಿಮ್ಮಲ್ಲಿ ನೀವು ಕಾಣುವ ಸ್ಟ್ರಾಂಗ್ ಪಾಯಿಂಟ್ಸ್ ಯಾವುದು? ಮಾನಸಿಕವಾಗಿ ಹೇಳಬೇಕು ಅಂದರೆ, ನನ್ನಲ್ಲಿರಬಹುದಾದ ದೌರ್ಬಲ್ಯಗಳನ್ನು  ಅರ್ಥ ಮಾಡಿಕೊಂಡಿರುವುದು ಸ್ಟ್ರಾಂಗ್ ಪಾಯಿಂಟ್. ಇದಕ್ಕೆ ಹೋಲಿಸಿದರೆ ದೈಹಿಕವಾಗಿ  ಸ್ಟ್ರಾಂಗ್ ಆಗುವುದು ಸುಲಭ. ಫಿಸಿಕಲಿ ಸಾಕಷ್ಟು ಸ್ಟ್ರಾಂಗ್ ಆಗಿ, ಒಬ್ಬ ನಟಿ ಹೇಗಿರಬೇಕೋ ಹಾಗೆ ದೈಹಿಕ ಗುಣಗಳನ್ನು ಹೊಂದಿದೀನಿ ಅನ್ನಿಸುತ್ತದೆ.

ನಾಲ್ಕೈದು ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ನಿಮ್ಮ ನೆಲೆ ಅಥವಾ ಜನಪ್ರಿಯತೆ ಎಲ್ಲಿ ಬಲವಾಗಿದೆ ಅನ್ನಿಸುತ್ತದೆ? ನಾನು ಹಿಂದಿ ಸಿನಿಮಾಗಳಲ್ಲಿ ನಟಿಸಿರೋದೇ ಜಾಸ್ತಿ. ಹಾಗಂತ ಅಲ್ಲೇ ನಾನು ಪಾಪುಲರ್ ಅಂತ ಹೇಳೋಕಾಗೊಲ್ಲ . ಕಚೇರಿ ಆರಂಭಂ, ಪಡಂ ಪೇಸುಂ ಎಂಬ ತಮಿಳು ಸಿನಿಮಾಗಳು ಬಿಡುಗಡೆ ಆದ ಮೇಲೆ ಇಲ್ಲಿ ನನ್ನ ಜನಪ್ರಿಯತೆ ಬೆಳೆಯಿತು. ಇದು ಆಯಾ ಸಿನಿಮಾಗಳನ್ನು ಅವಲಂಬಿಸುತ್ತದೆ. ಬುಲೆಟ್‌ರಾಣಿ ಚಿತ್ರ ಒಂದು ವೇಳೆ ಸೂಪರ್‌ಹಿಟ್ ಆಯಿತು ಅನ್ನಿ. ಆಗ ಇಲ್ಲಿ ಪಾಪುಲರ್ ಆಗಿಬಿಡ್ತೀನಿ. ಮಹಿಳಾ ಪ್ರಧಾನ ಚಿತ್ರವೊಂದನ್ನು ಜನರಿಗೆ ತಲುಪಿಸಲು ಸಶಕ್ತಳಾಗಿದೀನಿ ಎಂಬ ಆತ್ಮವಿಶ್ವಾಸ ನಿಮಗಿದೆಯೆ?
ಖಂಡಿತವಾಗಿಯೂ ಇದೆ. ಆತ್ಮವಿಶ್ವಾಸವೇ ನಮ್ಮ ಬಂಡವಾಳ.

ಅದಿಲ್ಲದಿದ್ದರೆ ಒಂದೇ ಒಂದು ಹೆಜ್ಜೆ ಇಡುವುದಕ್ಕೂ ಆಗುವುದಿಲ್ಲ . ಬುಲೆಟ್‌ರಾಣಿ ಅನ್ನುವುದು ನಾಯಕಿ ಪ್ರಧಾನ ಚಿತ್ರ. ತುಂಬು ಆತ್ಮವಿಶ್ವಾಸದಿಂದ ಅಭಿನಯಿಸಿದೀನಿ. ನಮ್ಮ ಪಾತ್ರವನ್ನು ಮೊದಲು ನಾವು ಇಷ್ಟಪಡಬೇಕು. ಮನದಾಳದಿಂದ ಕೆಲಸ ಮಾಡಬಹುದು. ನಮ್ಮ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡುವುದು ಬಹಳ ಮುಖ್ಯ. ಕಲಾವಿದರಿಗೆ ವೃತ್ತಿವಂತಿಕೆ ಅತ್ಯಗತ್ಯ. ಕಠಿಣ ಅನ್ನಿಸುವಂಥಹ ಪಾತ್ರಗಳನ್ನು ಸ್ವೀಕರಿಸುವ ಸ್ಥೈರ್ಯ ನನಗಿದೆ. ನಾಮ್‌ಕೆ ವಾಸ್ತೆ ಪಾತ್ರಗಳು ಬೇಡ. ಒಳ್ಳೇ ಫಿಲಂ ಒಳ್ಳೇ ಪಾತ್ರಗಳಿಗೆ ಆದ್ಯತೆ. ಕೆಲವು ಸಲ ಪಾತ್ರ ಚೆನ್ನಾಗಿರತ್ತೆ, ಕಥೆ ದುರ್ಬಲವಾಗಿರುತ್ತೆ. ನಾವು ಕಷ್ಟಪಟ್ಟು ಮಾಡಿದ ಅಭಿನಯ ವ್ಯರ್ಥವಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಪಕ್ಕಾ ವೃತ್ತಿವಂತಿಕೆ ಇದೆ. ತುಂಬಾ ಇಷ್ಟಪಟ್ಟು ಕನ್ನಡ ಫಿಲಂನಲ್ಲಿ ಮಾಡ್ತಿದೀನಿ. ಇನ್ನೂ ಹೆಚ್ಚಿನ ಅವಕಾಶ ಬಂದರೆ ಮೋಸ್ಟ್ ವೆಲ್‌ಕಮ್.

Write A Comment