ನವದೆಹಲಿ,ಅ.24: ಐಪಿಎಲ್ ಫ್ರಾಂಚೆಸಿ ಜೊತೆ ನಿಕಟ ಸಂಬಂಧ ಹೊಂದಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹೊಸ ತಂಡವನ್ನು ಸೇರುವ ಸಾಧ್ಯತೆ ಇದೆ.
ಎಂ.ಎಸ್.ಧೋನಿಯನ್ನು ಚೆನ್ನೈ ಸೂಪರ್ ಕಿಂಗ್ಸ್ 2008ರ ಜನವರಿಯಲ್ಲಿ ಐಪಿಎಲ್ 1.5 ದಶಲಕ್ಷ ಡಾಲರ್(7.5ಕೋಟಿ ರೂ.)ಗೆ ಅತ್ಯಧಿಕ ಹಣ ನೀಡಿ ಖರೀದಿಸಿತ್ತು. ಧೋನಿ ಐಪಿಎಲ್ ಎಲ್ಲಾ 8 ಆವೃತ್ತಿಗಳಲ್ಲಿ ತಂಡದ ನಾಯಕತ್ವ ವಹಿಸಿ ದಾಖಲೆ ನಿರ್ಮಿಸಿದ್ದಾರೆ.
ಸಿಎಸ್ಕೆ ತಂಡವನ್ನು ಮುದ್ಗಲ್ ಸಮಿತಿ 2 ವರ್ಷ ಅಮಾನತುಗೊಳಿಸಿದ ಬಳಿಕ ಧೋನಿ ಮುಂದೇನು ಮಾಡುತ್ತಾರೆಂಬ ಪ್ರಶ್ನೆ ಎದ್ದಿತ್ತು. ಅವರು ಬೇರೆ ಫ್ರಾಂಚೈಸಿಗೆ ಆಡುವ ಬದಲು ಐಪಿಎಲ್ನಿಂದ ಹೊರಗುಳಿಯುತ್ತಾರೆಂಬ ಸುದ್ದಿಗಳು ಹರಡಿದ್ದವು. ಇದೀಗ ಧೋನಿ ಹೊಸ ತಂಡ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಧೋನಿ ಹೊಸ ತಂಡದಲ್ಲಿ ಆಡದಂತೆ ತಡೆಯಲು ಸಿಎಸ್ಕೆಯಲ್ಲಿ ಯಾವುದೇ ಒತ್ತಡವಿಲ್ಲ. ಈ ಸೀಸನ್ಗೆ ಇನ್ನೆರಡು ಫ್ರಾಂಚೈಸಿಗಳ ಹೆಸರನ್ನು ಇನ್ನೂ ಗುರುತಿಸಲಾಗಿಲ್ಲ. ಆದರೆ ಎರಡೂ ಹೊಸ ಫ್ರಾಂಚೈಸಿಗಳಿಗೆ ಧೋನಿ ಅವರ ಬ್ರಾಂಡ್ ಮೌಲ್ಯ ಮತ್ತು ಪಂದ್ಯ ಗೆಲ್ಲುವ ಸಾಮಥ್ರ್ಯಗಳಿಂದಾಗಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲು ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಧೋನಿ ಎರಡು ವರ್ಷಗಳ ಕಾಲ ಆಡಿದರೆ, ಸಿಎಸ್ಕೆ ಅವರನ್ನು ವಾಪಸು ಕರೆಸಿಕೊಳ್ಳುವ ಆಯ್ಕೆ ಇರುತ್ತದೆ. ಸಿಎಸ್ಕೆ ಜೊತೆ ಧೋನಿ ಸಂಬಂಧ ಇನ್ನೂ ಮುಗಿದಿಲ್ಲ. ಆದರೆ ಸದ್ಯಕ್ಕೆ ಧೋನಿ ಅವರು ಹೊಸ ತಂಡಕ್ಕೆ ಆಡುತ್ತಾರೆ ಎನ್ನಲಾಗಿದೆ.