ಬೆಂಗಳೂರು: ಹಿಂದಿ ಚಿತ್ರಗಳು ತಮಿಳು, ತೆಲುಗು ಭಾಷೆಗಳಿಗೆ ರಿಮೇಕ್ ಆಗುವುದು ಸಹಜ. ಈಗ ಅಂತಹದ್ದೇ ಒಂದು ಚಿತ್ರ ಕನ್ನಡಿಗರ ಅಭಿರುಚಿಗೆ ತಕ್ಕಂತೆ ತಯಾರಾಗುವುದಕ್ಕೆ ಸಿದ್ಧತೆಗಳು ನಡೆಯುತ್ತಿದೆ.
ಬಾಲಿವುಡ್‍ನಲ್ಲಿ ವಿವಾದಗಳ ಜೊತೆಜೊತೆಗೆ ಸುದ್ದಿ ಮಾಡಿ ಬ್ಲಾಕ್‍ಬಸ್ಟರ್ ಚಿತ್ರ ಎನಿಸಿಕೊಂಡ ಚಿತ್ರ ಓ ಮೈ ಗಾಡ್ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಾಯಕನಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಇಷ್ಟು ದಿನ ಪ್ರೀತಿಯ ಜಪ ಮಾಡುತ್ತಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಇಲ್ಲಿ ದೇವರ ಜಪ ಮಾಡುವುದು ಪಕ್ಕಾ ಆಗಿದೆ.
ಬುಗುರಿ ಚಿತ್ರದ ನಂತರ ಎಂಡಿ ಶ್ರೀಧರ್ ಕನ್ನಡದ ಓ ಮೈ ಗಾಡ್ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದಾರೆ. ಕನ್ನಡಿಗರ ಅಭಿರುಚಿಗೆ ತಕ್ಕಂತೆ ಚಿತ್ರಕಥೆಯನ್ನು ತಯಾರಿಸಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.
ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಓ ಮೈ ಗಾಡ್ ಚಿತ್ರ ಮೊದಲು ಬಿಡುಗಡೆಯಾಗಿದ್ದು ಬಾಲಿವುಡ್‍ನಲ್ಲಿ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವೆಲ್ ಜುಗಲ್‍ಬಂದಿಯ ಜೊತೆಗೆ ಚಿತ್ರ ಸೂಪರ್‍ಹಿಟ್ ಆಗಿತ್ತು. 20 ಕೋಟಿ ಬಜೆಟ್‍ನ ಚಿತ್ರ 120 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದಿತ್ತು. ಇದಿಷ್ಟೆ ಅಲ್ಲ ಟಾಲಿವುಡ್‍ನಲ್ಲಿಯೂ ಗೋವಿಂದ ಗೋವಿಂದ ಎಂಬ ಹೆಸರಿನಲ್ಲಿ ಚಿತ್ರ ರಿಮೇಕ್ ಆಗಿತ್ತು. ಅಲ್ಲಿ ಅಕ್ಷಯ್ ಕುಮಾರ್ ನಿರ್ವಹಿಸಿದ ಪಾತ್ರವನ್ನು ಪವರ್‍ಸ್ಟಾರ್ ಪವನ್ ಕಲ್ಯಾಣ್ ಹಾಗೂ ಪರೇಶ್ ಪಾತ್ರವನ್ನು ವಿಕ್ಟರಿ ವೆಂಕಟೇಶ್ ನಿರ್ವಹಿಸಿದ್ದರು.
ಕನ್ನಡದ ಓ ಮೈ ಗಾಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ದರ್ಶನ್ ಮಾಡಬಹುದು ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಈ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.