ಮನೋರಂಜನೆ

25ನೆ ವಾರಕ್ಕೆ ಕಾಲಿಟ್ಟ ‘ರಂಗಿತರಂಗ’

Pinterest LinkedIn Tumblr

RANGITARANGA

ಕನ್ನಡ ಚಿತ್ರರಂಗದ 2015ರ ದೊಡ್ಡ ಹಿಟ್ ಯಾವುದು? ಈ ಪ್ರಶ್ನೆಗೆ ಅನುಮಾನವಿಲ್ಲದೆ ಹೇಳಬಹುದಾದ ಉತ್ತರ– ‘ರಂಗಿತರಂಗ’. ಹೊಸಬರೇ ಸೇರಿಕೊಂಡು ನಿರ್ಮಿಸಿದ್ದ ಈ ಚಿತ್ರ ಇಂದು 25ನೇ ವಾರಕ್ಕೆ ಕಾಲಿಡುತ್ತಿದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ಇನ್ನೂ ಓಟವನ್ನು ಮುಂದುವರಿಸಿರುವ ಚಿತ್ರ ತನ್ನ ಬೆಳ್ಳಿ ಮಹೋತ್ಸವದ ಸಂಭ್ರಮವನ್ನು ಪತ್ರಕರ್ತರೊಂದಿಗೆ ಹಂಚಿಕೊಂಡಿತು.

ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ ನಿರ್ದೇಶಕ ಅನೂಪ್ ಭಂಡಾರಿ ಅವರ ತಂದೆ ಸುಧಾಕರ ಭಂಡಾರಿ, ‘ಚಿತ್ರಗಳು ಇಪ್ಪತ್ತೈದು ದಿನ ಓಡುತ್ತವೋ ಇಲ್ಲವೋ ಎಂಬುದೇ ಅನುಮಾನ ಆಗಿರುವ ಇಂದಿನ ಕಾಲದಲ್ಲಿ ಹೊಸಬರ ಚಿತ್ರವೊಂದು ಇಪ್ಪತ್ತೈದು ವಾರಗಳ ಕಾಲ ಓಡಿದೆ ಎಂದರೆ ಅದ್ಭುತ ಅಲ್ಲದೆ ಇನ್ನೇನು’ ಎಂದು ತಮ್ಮ ಸಂತಸ ಹಂಚಿಕೊಂಡರು.

‘ಕಪಾಲಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಹೊರಬಂದ ಕೆಲವರು ಸಿನಿಮಾ ಓಡುವುದಿಲ್ಲ ಎಂದಾಗ ಚಿತ್ರಮಂದಿರದ ಬೆಂಚಿನ ಅಂಚಿನಲ್ಲಿ ತಲೆಯ ಮೇಲೆ ಕೈ ಹೊತ್ತು ಕುಳಿತುಬಿಟ್ಟಿದ್ದೆ’ ಎಂದು ಮೊದಲ ದಿನದ ಮೊದಲ ಪ್ರದರ್ಶನದ ಉದ್ವೇಗವನ್ನು ಹಂಚಿಕೊಂಡರು ನಿರ್ದೇಶಕ ಅನೂಪ್. ಚಿತ್ರ ಬಿಡುಗಡೆಯಾದ ಒಂದೆರಡೇ ವಾರಗಳಲ್ಲಿ ‘ಬಾಹುಬಲಿ’, ‘ಬಜರಂಗಿ ಭಾಯಿಜಾನ್’ನಂಥ ದೊಡ್ಡ ಚಿತ್ರಗಳು ಬಿಡುಗಡೆಯಾಗಿ ‘ರಂಗಿತರಂಗ’ ಚಿತ್ರಮಂದಿರಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದ್ದನ್ನು ತಂಡ ನೆನಪಿಸಿಕೊಂಡಿತು.

ನಾಯಕ ನಿರೂಪ್, ನಾಯಕಿಯರಾದ ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ನಿರ್ಮಾಪಕ ಎಚ್.ಕೆ. ಪ್ರಕಾಶ್, ನಟ ಅರವಿಂದ್ ರಾವ್ ವೇದಿಕೆಯಲ್ಲಿ ಇದ್ದರು. ಕಲಾವಿದರಿಗಿಂತ ಹೆಚ್ಚಾಗಿ ತಂತ್ರಜ್ಞರಿಗೆ ಕೃತಜ್ಞತೆ ಹೇಳುವ ಕಾರ್ಯಕ್ರಮ ಅದಾಗಿತ್ತು. ಚಿತ್ರರಂಗದಕ್ಕೆ ಇತ್ತೀಚೆಗಷ್ಟೇ ಕಾಲಿಟ್ಟವರಿಂದ ಹಿಡಿದು ದಶಕದಿಂದ ಉದ್ಯಮದಲ್ಲಿ ಕೆಲಸ ಮಾಡಿದ ಅನೇಕರು ಮೊದಲ ಬಾರಿ ವೇದಿಕೆಯ ಮೇಲೆ ಬಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Write A Comment