ಮನೋರಂಜನೆ

ಕನ್ನಡ ನಟಿ ಅಶ್ವಿನಿ ಚಂದ್ರಶೇಖರ್ ತಮಿಳಿನಿಂದ ಕನ್ನಡಕ್ಕೆ

Pinterest LinkedIn Tumblr

aswini-ಗಣೇಶ ವೈದ್ಯ

ಅಪ್ಪಟ ಕನ್ನಡ ಹುಡುಗಿ ಅಶ್ವಿನಿ ಚಂದ್ರಶೇಖರ್ ಮೊದಲು ಅಭಿನಯಿಸಿದ್ದು ತಮಿಳು ಚಿತ್ರಗಳಲ್ಲಿ. ಈಗ ‘ಪ್ರೇಮಪಲ್ಲಕ್ಕಿ’ ಮೂಲಕ ಅವರ ಕನ್ನಡ ಸಿನಿಮಾ ನಂಟು ಶುರುವಾಗಿದೆ.

ಹಿತ್ತಿಲಲ್ಲಿ ಬೆಳೆದ ಬಳ್ಳಿ ಪಕ್ಕದ ಮನೆಯ ಅಂಗಳದಲ್ಲಿ ಹೂವಾಗಿ ಕಂಪು ಬೀರಿದರೆ ಹೇಗೆ? ಇದಕ್ಕೆ ಉದಾಹರಣೆಯಾಗಿ ನಟಿ ಅಶ್ವಿನಿ ಅವರ ಸಿನಿಮಾ ಪಯಣವನ್ನು ಗಮನಿಸಬಹುದು. ಅಶ್ವಿನಿ ಚಂದ್ರಶೇಖರ್ ಹುಟ್ಟಿ ಬೆಳೆದಿದ್ದು ಶಿವಮೊಗ್ಗದಲ್ಲಿ. ಸಿನಿಮಾ ವೃತ್ತಿ ಬದುಕು ಆರಂಭವಾಗಿದ್ದು ಮಾತ್ರ ತಮಿಳಿನಲ್ಲಿ. ಕನ್ನಡದಲ್ಲಿ ಅವಕಾಶ ಸಿಕ್ಕ ಮೊದಲ ಚಿತ್ರ ‘ಪ್ರೇಮಪಲ್ಲಕ್ಕಿ’ ಇಂದು (ಡಿ. 18) ತೆರೆ ಕಾಣುತ್ತಿದೆ.

2011ರ ‘ಮಿಸ್ ಕರ್ನಾಟಕ’ ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್‌ಅಪ್ ಆಗಿದ್ದ ಅಶ್ವಿನಿ ಅದೇ ವರ್ಷ ಚೆನ್ನೈನಲ್ಲಿ ನಡೆದ ‘ವಿವೆಲ್ ಇಂಡಿಯಾ ಮಿಸ್ ಸೌತ್’ ಸ್ಪರ್ಧೆಯ ಕಿರೀಟವನ್ನು ಮುಡಿಗೇರಿಸಿಕೊಂಡವರು. ಗ್ಲಾಮರ್ ಜಗತ್ತಿನ ಬಗ್ಗೆ ಯೋಚಿಸಿಯೇ ಇರದ ಅವರು ಯಾರೋ ಸ್ಪರ್ಧಿ ಗೈರಾದ ಕಾರಣಕ್ಕೆ ‘ಮಿಸ್ ಕರ್ನಾಟಕ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದು. ಸ್ಪರ್ಧೆಯಲ್ಲಿ ಗುರ್ತಿಸಿಕೊಂಡ ಮುಖವಾಗಿದ್ದಕ್ಕೆ ಒಂದಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಂಡರು. ಅದು ಬಣ್ಣದ ಜಗತ್ತಿನ ದಾರಿ ತೆರೆದಿಟ್ಟಿತ್ತು. ತಮಿಳಿನಿಂದ ಸಿನಿಮಾ ಅವಕಾಶಗಳೂ ಹರಿದುಬಂದವು.

ಅಶ್ವಿನಿಗೆ ‘ಮಿಸ್ ಇಂಡಿಯಾ’ಕ್ಕೆ ಗ್ರೀನ್ ಕಾರ್ಡ್ ಎಂಟ್ರಿ ಅವಕಾಶವಿತ್ತು. ಆದರೆ ನಿಗದಿತ ಎತ್ತರಕ್ಕಿಂತ ಒಂದು ಇಂಚು ಕಡಿಮೆ ಎಂಬ ಕಾರಣಕ್ಕೆ ಆ ಸ್ಪರ್ಧೆಯ ಅವಕಾಶ ಕೈ ತಪ್ಪಿತ್ತು. ಅದಾದ ಕೆಲವೇ ದಿನಗಳಲ್ಲಿ ಅಶ್ವಿನಿ ಕೈಯಲ್ಲಿ ಐದು ಚಿತ್ರಗಳಿದ್ದವು. ಅದು ಸಂತೋಷದ ಮೂಟೆಯನ್ನೇ ಹೊತ್ತು ತಂದಿದೆ.

ಕಲಾತ್ಮಕ ಚಿತ್ರಗಳ ಬಗ್ಗೆ ವಿಶೇಷ ಪ್ರೀತಿಯಿಟ್ಟುಕೊಂಡ ಅಶ್ವಿನಿಗೆ ಮೊದಲ ಅವಕಾಶ ಬಂದಿದ್ದು ಮಲಯಾಳಂನ ಕಲಾತ್ಮಕ ಚಿತ್ರದಿಂದಾಗಿಯೇ. ಅದು ಮೋಹನ್ ಲಾಲ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಭಾಗ್ಯ. ಆದರೆ ಆ ಚಿತ್ರ ಪೂರ್ಣಗೊಳ್ಳಲಿಲ್ಲ. ನಂತರ ತಮಿಳಿನತ್ತ ಹಾರಿದರು. ‘ಕನ್ನಡದವರಾಗಿ ಕನ್ನಡದ ಸಿನಿಮಾ ಮಾಡುವುದಿಲ್ಲವೇ’ ಎಂಬ ಪ್ರಶ್ನೆಗೆ ಉತ್ತರವೆಂಬಂತೆ ‘ಪ್ರೇಮಪಲ್ಲಕ್ಕಿ’ ಒಪ್ಪಿಕೊಂಡರು. ಚಿತ್ರರಂಗಕ್ಕೆ ಬರುವಾಗ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದ ಅಶ್ವಿನಿ ಈಗ ತಮಿಳಿನಲ್ಲಿ ಡಬ್ ಮಾಡುವಷ್ಟು ತಯಾರಾಗಿದ್ದಾರೆ.

‘ಪ್ರೇಮಪಲ್ಲಕ್ಕಿ’ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಈ ನಡುವೆ ‘ಒಂದು ರೊಮ್ಯಾಂಟಿಕ್ ಕ್ರೈಂ ಕಥೆ’ ಮತ್ತು ‘ಆಕ್ಟೋಪಸ್’ ಚಿತ್ರಗಳಲ್ಲಿ ಕಾಣಿಸಿಕೊಂಡರು. ‘ಪ್ರೇಮಪಲ್ಲಕ್ಕಿ’ಗಿಂತ ನಂತರ ಒಪ್ಪಿಕೊಂಡ ಈ ಚಿತ್ರಗಳೇ ಮೊದಲು ಬಿಡುಗಡೆಯಾದವು. ಮೊದಲ ಚಿತ್ರದಲ್ಲಿ ನಾಯಕಿಯಾಗಿದ್ದರೂ ‘ಒಂದು ರೊಮ್ಯಾಂಟಿಕ್ ಕ್ರೈಂ ಕಥೆ’ ಮತ್ತು ‘ಆಕ್ಟೋಪಸ್’ನಲ್ಲಿ ಬೇರೆ ನಾಯಕಿಯರ ಜೊತೆ ತೆರೆ ಹಂಚಿಕೊಂಡರು. ‘ಪಾತ್ರ ಚೆನ್ನಾಗಿದ್ದರೆ ನಾಯಕಿಯಾಗಿಯೇ ಆಗಬೇಕೆಂಬುದಿಲ್ಲ. ಗ್ಲಾಮರ್ ಬೊಂಬೆಯಾಗಿ ನಾಯಕನ ಸುತ್ತ ಸುತ್ತುವುದಕ್ಕಿಂತ ಅಭಿನಯಕ್ಕೆ ಅವಕಾಶವಿರುವ ಒಳ್ಳೆಯ ಪಾತ್ರವನ್ನು ಮಾಡುವುದು ಮುಖ್ಯ’ ಎಂಬುದು ಅವರ ಅಭಿಪ್ರಾಯ.

ಚಿಕ್ಕಂದಿನಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿದ್ದ ಅಶ್ವಿನಿಗೆ ಸಿನಿಮಾಕ್ಕೆ ಸಂಬಂಧಿಸಿದಂತೆ ಯಾವ ತರಬೇತಿಯೂ ಇರಲಿಲ್ಲ. ಶಾಸ್ತ್ರೀಯ ನೃತ್ಯ ಕಲಿತ ಅವರಿಗೆ ಸಿನಿಮಾಕ್ಕೆ ಬೇಕಾದ ದೇಹಭಾಷೆ ಕಲಿಯುವುದು ಕಷ್ಟವೂ ಆಯಿತು. ಚಿತ್ರಂಗದಲ್ಲಿ ಹೇಗಿರಬೇಕು ಎಂಬ ಅರಿವಿಲ್ಲದೆ ಮೊದ ಮೊದಲು ಅಳುಕಿದ್ದರು. ತಮ್ಮ ಚಿತ್ರ ನೋಡಿದಾಗ ಇನ್ನೂ ಚೆನ್ನಾಗಿ ನಟಿಸಬಹುದಿತ್ತು ಎಂದುಕೊಂಡಿದ್ದೇ ಹೆಚ್ಚು. ಹಾಗಾಗಿ ಚಿತ್ರರಂಗಕ್ಕೆ ಬರುವ ಹೊಸಬರಿಗೆ ‘ಸೂಕ್ತ ತಯಾರಿ ಮಾಡಿಕೊಂಡೇ ಬನ್ನಿ’ ಎಂಬುದು ಅವರ ಸಲಹೆ.

ತಮಿಳಿನ ಚಿತ್ರವೊಂದರಲ್ಲಿ ಶಾಸ್ತ್ರೀಯ ನೃತ್ಯಕ್ಕೇ ಹೆಚ್ಚು ಪ್ರಾಶಸ್ತ್ಯವಿರುವ ಪಾತ್ರ ಅವರಿಗೆ ಸಿಕ್ಕಿದೆ. ಸದ್ಯ ಸಿನಿಮಾದಲ್ಲಿ ಬ್ಯೂಸಿ ಆಗಿದ್ದರಿಂದ ಒಂದು ವರ್ಷದಿಂದ ಕಾಲೇಜಿನಿಂದ ದೂರವಿದ್ದಾರೆ. ಕೈಲಿರುವ ಕೆಲಸಗಳಿಂದ ಸ್ವಲ್ಪ ಬಿಡುವು ಸಿಕ್ಕಾಗ ಶಿಕ್ಷಣ ಪೂರೈಸುವ ಆಸೆ ಅವರಿಗಿದೆ. ಸದ್ಯ ತೆಲುಗಿನಲ್ಲಿ ಒಂದು ಚಿತ್ರ ಬಿಡುಗಡೆ ಹಂತದಲ್ಲಿದೆ. ತಮಿಳಿನಲ್ಲಿ ಎರಡು ಮತ್ತು ತೆಲುಗಿನಲ್ಲಿ ಒಂದು ಚಿತ್ರದಲ್ಲಿ ತೊಡಗಿಕೊಂಡಿರುವ ಅಶ್ವಿನಿ ಯಾವ ಕನ್ನಡ ಚಿತ್ರಗಳನ್ನೂ ಒಪ್ಪಿಕೊಂಡಿಲ್ಲ. ಗ್ಲಾಮರ್‌ಗಿಂತ ಹೋಮ್ಲಿ ಪಾತ್ರಗಳಲ್ಲೇ ತಾನು ಚೆನ್ನಾಗಿ ಕಾಣುತ್ತೇನೆ ಎಂದು ಅವರ ನಂಬಿಕೆ. ಹಾಗೇ ಪಾತ್ರಗಳ ಆಯ್ಕೆಯಲ್ಲಿ ಅವರು ತುಂಬಾ ಚೂಸಿ ಅಂತೆ.

‘ಪ್ರೇಮಪಲ್ಲಕ್ಕಿ’ಯಲ್ಲಿ…
ಹೆಸರೇ ಹೇಳುವಂತೆ ಇದೊಂದು ಪ್ರೇಮ ಕಥೆ. ಆದರೆ ನಾಯಕ ನಾಯಕಿ ಎಲ್ಲಿಯೂ ಭೇಟಿಯಾಗುವ ಸನ್ನಿವೇಶವೇ ಇಲ್ಲ. ತಂದೆ–ತಾಯಿಯೇ ಮಗಳನ್ನು ಮನೆಯಲ್ಲಿ ಕೂಡಿಹಾಕಿ ಹೊರಜಗತ್ತಿನ ಸಂಪರ್ಕವೇ ಇಲ್ಲದಂತೆ ಮಾಡಿದ ನೈಜ ಘಟನೆ ಆಧರಿತ ಚಿತ್ರ ‘ಪ್ರೇಮಪಲ್ಲಕ್ಕಿ’. ಈ ಗೃಹಬಂಧಿಯ ಪಾತ್ರದಲ್ಲಿ ಅಶ್ವಿನಿ ಕಾಣಿಸಿಕೊಂಡಿದ್ದಾರೆ.

ತಿಳಿದೋ ತಿಳಿಯದೆಯೋ ಮಾಡಿಕೊಳ್ಳುವ ಅನಾಹುತದಿಂದಾಗಿ ಜೀವನದಲ್ಲಿ ಏನೆಲ್ಲ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಚಿತ್ರಕ್ಕೆ ಅಳವಡಿಸಿದ್ದಾರೆ ನಿರ್ದೇಶಕ ಸುಧಾಕರ ಶೆಟ್ಟಿ. ಕನ್ನಡದ ಸಂದರ್ಭದಲ್ಲಿ ಸದ್ಯ ಪ್ರತಿ ವಾರ ನಾಲ್ಕೈದು ಚಿತ್ರಗಳು ಬಿಡುಗಡೆಯಾಗುತ್ತಿವೆ. ಆದರೆ ಈ ವಾರ ‘ಪ್ರೇಮಪಲ್ಲಕ್ಕಿ’ ಒಂದೇ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಈ ಚಿತ್ರ ಹೆಚ್ಚು ಜನರನ್ನು ತಲುಪುತ್ತದೆ ಎಂಬುದು ಅಶ್ವಿನಿ ವಿಶ್ವಾಸ.

Write A Comment