ಜ್ಯೂರಿಚ್: ಹಣ ಅವ್ಯವಹಾರ ನಡೆಸಿ ಸಂಸ್ಥೆಗೆ ದ್ರೋಹ ಬಗೆದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡು ಮುಜುಗರಕ್ಕೆ ಒಳಗಾಗಿದ್ದ ಅಧ್ಯಕ್ಷ ಮೈಕೆಲ್ ಪ್ಲ್ಯಾಟಿನಿ ಮತ್ತು ಸೆಪ್ ಬ್ಲಾಟ್ಟರ್ಗೆ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ) ಎಂಟು ವರ್ಷಗಳ ನಿಷೇಧ ಹೇರಿದೆ.
ಇದರಿಂದಾಗಿ ಈ ಇಬ್ಬರೂ ಅಧಿಕಾರಿಗಳು ಅಂತಾರಾಷ್ಟ್ರೀಯ ಮಾನ್ಯತೆಯ ಯಾವುದೇ ಫುಟ್ಬಾಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ.
ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಫಿಫಾ ನೀತಿ ಸಮಿತಿ ಸುದೀರ್ಘ ಚರ್ಚೆಯ ಬಳಿಕ ಈ ನಿರ್ಧಾರಕ್ಕೆ ಬಂದಿದೆ. 1999, ಆಗಸ್ಟ್ 25ರಂದು ಈ ಇಬ್ಬರೂ ಅಧಿಕಾರಿಗಳು ಫಿಫಾ ನಿಯಮ ಉಲ್ಲಂಘಿಸಿರುವುದು ಬಹುತೇಕ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ನಿಷೇಧ ಹೇರಿದೆ.