ಮನೋರಂಜನೆ

ಪಾರುಲ್ ಯಾದವ್ ಹೊಸ ಐಡಿಯಾ; ಮೊಬೈಲ್ ನೋಡಿ ಕನ್ನಡ ಮಾತಾಡಿ

Pinterest LinkedIn Tumblr

Vastu-prakara-(95)ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರದ ಹಿಂದಿನ ಪತ್ರಿಕಾಗೋಷ್ಠಿಗಳಲ್ಲಿ ಪಾರುಲ್‌ ಯಾದವ್‌ ಇಂಗ್ಲೀಷ್‌ನಲ್ಲೇ ಮಾತನಾಡಿದ್ದರು. ಮೂರ್‍ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರೂ ಒಂದಕ್ಷರವನ್ನೂ ಕನ್ನಡದಲ್ಲಿ ಮಾತನಾಡದ ಪಾರುಲ್‌ ಬಗ್ಗೆ ಕೆಲವರು ಬೇಸರಿಸಿಕೊಂಡಿದ್ದರು. ಅದು ಪಾರುಲ್‌ ಕಿವಿಗೂ ಬಿದ್ದಿತ್ತು.

ಹಾಗಾಗಿ, ಈ ಬಾರಿಯ ಪತ್ರಿಕಾಗೋಷ್ಠಿಯಲ್ಲಿ ಕನ್ನಡದಲ್ಲೇ ಮಾತನಾಡಬೇಕೆಂದುಕೊಂಡೇ ಬಂದಿದ್ದರು ಪಾರುಲ್‌. ಮೈಕ್‌ ಎತ್ತಿಕೊಂಡ ಪಾರುಲ್‌, “ಈ ಹಿಂದಿನ ಪತ್ರಿಕಾಗೋಷ್ಠಿಯಲ್ಲಿ ನಾನು ಕನ್ನಡದಲ್ಲಿ ಮಾತನಾಡದ್ದು ಕೆಲವರಿಗೆ ಬೇಸರವಾಗಿತ್ತಂತೆ. ಈ ಬಾರಿ ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಮಾಡುತ್ತೇನೆ. ತಪ್ಪಿದ್ದರೆ ಕ್ಷಮಿಸಿ’ ಎನ್ನುತ್ತಾ ಮಾತನಾಡಲು ಅಣಿಯಾದರು. ಟೇಬಲ್‌ ಮೇಲಿಟ್ಟಿದ್ದ ಮೊಬೈಲ್‌ ಅವರ ಕೈಗೆ ಬಂತು. ಅದರಲ್ಲಿದ್ದ ಮೆಸೇಜ್‌ ನೀಟಾಗಿ ಓದಲಾರಂಭಿಸುತ್ತಾ ತಮ್ಮ ಕನ್ನಡ ಪ್ರೀತಿ ಮೆರೆದರು ಪಾರುಲ್‌. “ವರ್ಮಾ ಹಾಗೂ ಶಿವರಾಜಕುಮಾರ್‌ ಜೊತೆ ಸಿನಿಮಾ ಮಾಡಿದ್ದು ಖುಷಿ ತಂದಿದೆ. ಇದು ನನ್ನ ಜೀವನದ ಸಾಧನೆಗಳಲ್ಲೊಂದು…’ ಎನ್ನುತ್ತಾ ಹೋದರು ಪಾರುಲ್‌. ಅಲ್ಲಿಗೆ ಪಾರುಲ್‌ ಕನ್ನಡ ಕಲಿಯಲು ಪ್ರಾರಂಭಿಸಿದಂತೆ.

“ಗೋವಿಂದಾಯ ನಮಃ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಪಾರುಲ್‌ ಅಲ್ಲಿಂದ ಇಲ್ಲಿವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಕನ್ನಡ ಕಲಿಯುವ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿರಲಿಲ್ಲ. ಈಗ ಕನ್ನಡ ಕಲಿಯುವ ಮನಸ್ಸು ಮಾಡಿದ್ದಾರೆ. ಮೊದಲ ಪಾಠ ಮೊಬೈಲ್‌ ಮೂಲಕ ಆರಂಭವಾಗಿದೆ. ಹೇಗಾದರೂ ಕನ್ನಡ ಕಲಿತರೆ ಖುಷಿಯೇ. ಮುಂದೆ ಮೊಬೈಲ್‌ ಬದಲು ನೇರವಾಗಿ ಕನ್ನಡ ಮಾತನಾಡಿದರೆ ಕನ್ನಡ ಪ್ರೇಕ್ಷಕರು ಖುಷಿಪಡುವುದರಲ್ಲಿ ಸಂದೇಹವಿಲ್ಲ. ಬೇರೆ ಭಾಷೆಗಳಿಂದ ಕನ್ನಡ ಚಿತ್ರರಂಗಕ್ಕೆ ಬಂದ ಸಾಕಷ್ಟು ನಟಿಮಣಿಯರು ಈಗ ಕನ್ನಡ ಕಲಿತು ಮಾತನಾಡುತ್ತಿದ್ದಾರೆ. ಈಗ ಪಾರುಲ್‌ ಸರದಿ.
-ಉದಯವಾಣಿ

Write A Comment