ಮನೋರಂಜನೆ

ಕಲರ್ ಫುಲ್ ಕುಟುಂಬದ ಕಳಾಪೂರ್ಣ ಕಲರವ

Pinterest LinkedIn Tumblr

suraj---amulya---.-ಎಲ್ಲವೂ ಸರಿಯಾಗಿ ಹೋಗುತ್ತಿದೆ, ಎರಡು ಫ್ಯಾಮಿಲಿಗಳು ಖುಷಿ ಖುಷಿಯಾಗಿಯಾಗಿವೆ, ಇಂತಹ ಕುಟುಂಬಗಳಿದ್ದರೆ ಎಲ್ಲಾ ಕಡೆ, ಎಲ್ಲರೂ ನೆಮ್ಮದಿಯಿಂದಿರಬಹುದೆಂದುಕೊಳ್ಳುವಷ್ಟರಲ್ಲಿ ನಡೆಯಬಾರದ ಘಟನೆಯೊಂದು ನಡೆದುಬಿಡುತ್ತದೆ. ಛೇ ಹೀಗಾಗಬಾರದಿತ್ತು, ಇಷ್ಟೊಳ್ಳೆ ಕುಟುಂಬ ಮುಂದೇನಾಗುತ್ತೋ ಎಂದು ತಲೆಮೇಲೆ ಕೈ ಹೊತ್ತುಕೊಂಡು ಪ್ರೇಕ್ಷಕ ಇಂಟರವಲ್‌ ಬ್ರೇಕ್‌ ತೆಗೆದುಕೊಂಡು ಬಂದು ಕೂರುವ ಹೊತ್ತಿಗೆ ಮತ್ತೆ ಟ್ವಿಸ್ಟ್‌. ನಿರ್ದೇಶಕ ಕವಿರಾಜ್‌ಗೆ ಒಂದು ಔಟ್‌ ಅಂಡ್‌ ಔಟ್‌ ಫ್ಯಾಮಿಲಿ ಸಿನಿಮಾವನ್ನು ಕೊಡಬೇಕೆಂಬ ಆಸೆಯನ್ನು ಈ ಸಿನಿಮಾ ಮೂಲಕ ಭರ್ಜರಿಯಾಗಿ ಈಡೇರಿಸಿಕೊಂಡಿದ್ದಾರೆಂದರೆ ತಪ್ಪಲ್ಲ. ಅಷ್ಟರ ಮಟ್ಟಿಗೆ ಇದೊಂದು ಕೌಟುಂಬಿಕ ಚಿತ್ರ. ಬಹುತೇಕ ಎಲ್ಲರೂ “ನಮ್ಮದು ಫ್ಯಾಮಿಲಿ ಪ್ರೇಕ್ಷಕರು ನೋಡುವ ಸಿನಿಮಾ’ ಎಂದು ಹೇಳುತ್ತಲೇ ಇರುತ್ತಾರೆ. ಆದರೆ, ಪಾಸಿಂಗ್‌ ಶಾಟ್‌ನಲ್ಲಿ ಫ್ಯಾಮಿಲಿ  ಬಂದು ಹೋಗುತ್ತದೆ. ಕವಿರಾಜ್‌ ಮಾತ್ರ ಹೇಳಿದಂತೆ ಫ್ಯಾಮಿಲಿ ಬಿಟ್ಟು ಅಲ್ಲಾಡಿಲ್ಲ. ಹಾಗಾಗಿ, ಇದು ನಿಜಕ್ಕೂ ಫ್ಯಾಮಿಲಿ ಪ್ರೇಕ್ಷಕರು ನೋಡುವ ಸಿನಿಮಾವೇ.

ಎರಡು ಕುಟುಂಬಗಳ ನಡುವೆ ನಡೆಯುವ ಪ್ರೀತಿ, ಸ್ನೇಹ, ಸಂಬಂಧ, ಸಂಘರ್ಷಗಳೇ ಈ ಸಿನಿಮಾದ ಜೀವಾಳ. ಅವುಗಳನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಕವಿರಾಜ್‌. ಇದು ಕವಿರಾಜ್‌ ನಿರ್ದೇಶನದ ಚೊಚ್ಚಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಒಂದು ನೀಟಾದ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಕವಿರಾಜ್‌. ನಿರೂಪಣೆಯಲ್ಲಿ ಮತ್ತಷ್ಟು ವೇಗವನ್ನು ಕಾಯ್ದುಕೊಂಡಿದ್ದರೆ “ಫ್ಯಾಮಿಲಿ ಮ್ಯಾಟರ್‌’ ಅನ್ನು ಬೇಗನೇ ಬಗೆಹರಿಸಬಹುದಿತ್ತು. ಇಲ್ಲಿ ಸಾಕಷ್ಟು ಘಟನೆಗಳು, ಸನ್ನಿವೇಶಗಳು ಬಂದು ಹೋಗುತ್ತವೆ. ಎಲ್ಲವೂ ನಿಮ್ಮ ಅಕ್ಕ-ಪಕ್ಕದ ಮನೆಯಲ್ಲೇ ನಡೆಯುವಂತೆ ಭಾಸವಾಗುವುದು ಈ ಸಿನಿಮಾದ ಪ್ಲಸ್‌ ಪಾಯಿಂಟ್‌. ಕುಟುಂಬಗಳ ಮಧ್ಯೆ ಇರುಸು-ಮುರುಸಾದಾಗ, ಸಣ್ಣ ಮನಸ್ತಾಪವಾದಾಗ ಏನೇನೋ ಆಗಬಹುದೋ ಅವೆಲ್ಲವನ್ನು ಸೂಕ್ಷ್ಮವಾಗಿ ತೋರಿಸಲು ಪ್ರಯತ್ನಪಟ್ಟಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕಾದರೆ ಬ್ರೈನ್‌ಗೆ ಹೆಚ್ಚು ಕೈ ಹಾಕದೇ ತಣ್ಣಗೆ ಸಾಗುವ ಸಿನಿಮಾವಿದು. ಸಣ್ಣ ಸಣ್ಣ ಘಟನೆಗಳ ಮೂಲಕ ಕೆಲ ಅಂಶಗಳನ್ನು, ಅದರ ಹಿಂದಿನ ಉದ್ದೇಶಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ಕವಿರಾಜ್‌.

ಕವಿರಾಜ್‌ಗೆ ತಾನು ಹೇಳಬೇಕೆಂಬುದು ಸ್ಪಷ್ಟವಾಗಿದೆ. ಹಾಗಾಗಿಯೇ ಇಲ್ಲಿ ಅನಾವಶ್ಯಕ ದೃಶ್ಯಗಳಾಗಲಿ, ಕೆಟ್ಟ ಕಾಮಿಡಿಯಾಗಲಿ ಇಲ್ಲ. ಚಿತ್ರದ ಟೈಟಲ್‌ಗೆ ತಕ್ಕಂತೆ ಮದುವೆ, ಮಮತೆ ಹಾಗೂ ಕರೆಯೋಲೆ ಸುತ್ತಮುತ್ತವೇ ಚಿತ್ರ ಸಾಗುತ್ತದೆ. ಹಾಗಾಗಿ, ಇಲ್ಲಿ ನಿಮಗೆ ನಿಮ್ಮ ಕುಟುಂಬಗಳ ಸಂಭ್ರಮದ, ಬೇಸರದ, ಸಂದಿಗ್ಧ ಪರಿಸ್ಥಿತಿಯ ದಿನಗಳು ನಿಮಗೆ ನೆನಪಾಗಬಹುದು. ಅದರಲ್ಲೂ ನೀವು ಕೌಟುಂಬಿಕ ಧಾರಾವಾಹಿಗಳನ್ನು ಹೆಚ್ಚು ನೋಡುವವರಾಗಿದ್ದರೆ ಖಂಡಿತಾ ನಿಮಗೆ ಈ ಚಿತ್ರ ಕೊಂಚ ಹೆಚ್ಚೇ ಇಷ್ಟವಾಗುತ್ತದೆ.

ಹಾಗಾಗಿಯೇ ಇಲ್ಲಿ ಪೋಷಕ ನಟರ ಜೊತೆ ಪೋಷಕ ನಟಿಯರಿಗೂ ಹೆಚ್ಚಿನ ಅವಕಾಶ ಸಿಕ್ಕಿದೆ. ಆರಂಭದಿಂದ ಅಂತ್ಯದವರೆಗೂ ಕಲರ್‌ಫ‌ುಲ್‌ ಕುಟುಂಬವನ್ನು ನೀವು ಕಣ್ತುಂಬಿಕೊಳ್ಳಬಹುದು. ಸಾಧುಕೋಕಿಲ, ಬುಲೆಟ್‌ ಪ್ರಕಾಶ್‌, ಚಿಕ್ಕಣ್ಣ …ಹೀಗೆ ಕಾಮಿಡಿ ನಟರೆಲ್ಲಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೂ ಅತಿಯಾದ ಹಾಗೂ ಅನಾವಶ್ಯಕ ಕಾಮಿಡಿಗಳಿಂದ ಸಿನಿಮಾವನ್ನು ಮುಕ್ತವಾಗಿಸಿದ್ದಾರೆ ಕವಿರಾಜ್‌. ಚಿತ್ರದ ಕ್ಲೈಮ್ಯಾಕ್ಸ್‌ ಹೊತ್ತಿಗೆ ಬರುವ ಕೆಲ ದೃಶ್ಯಗಳು ನಗೆತರಿಸಿದರೂ ತೀರಾ ಹೊಸದೆಂದೆನಿಸುವುದಿಲ್ಲ.

ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಸೂರಜ್‌ ಲವರ್‌ಬಾಯ್‌ ಆಗಿ ಇಷ್ಟವಾಗುತ್ತಾರೆ. ಈ ಮೂಲಕ ಕನ್ನಡ ಚಿತ್ರಕ್ಕೆ ಮತ್ತೂಬ್ಬ ಲವರ್‌ ಬಾಯ್‌ ಸಿಕ್ಕ ಎಂದರೆ ತಪ್ಪಲ್ಲ. ನಾಯಕಿ ಅಮೂಲ್ಯಗೆ ಇಂತಹ ಪಾತ್ರ ತೀರಾ ಹೊಸದೇನು ಅಲ್ಲ. ಇತ್ತೀಚೆಗೆ ಅವರು ಇಂತಹ ಬಾಯಿ ಬಡುಕಿ ಪಾತ್ರಗಳಿಗೆ ಬ್ರಾಂಡ್‌ ಆಗುತ್ತಿದ್ದಾರೆ. ಈ ಹಿಂದೆ ಬಂದ ಚಿತ್ರಗಳಲ್ಲೂ ಅಮೂಲ್ಯ ಬೇಜಾನ್‌ ಮಾತನಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಈಗ ಈ ಚಿತ್ರದಲ್ಲೂ ಅಂತಹುದೇ ಪಾತ್ರದಲ್ಲಿ ಕಾಣಿಸಿಕೊಂಡರೂ ಆ ಪಾತ್ರವನ್ನು ಟ್ರೀಟ್‌ ಮಾಡಿರುವ ಭಿನ್ನವಾಗಿದೆ. ಹಾಗೆ ನೋಡಿದರೆ ಈ ಸಿನಿಮಾದ ನಿಜವಾದ ಹೀರೋ ಅನಂತ್‌ನಾಗ್‌. ಇಡೀ ಸಿನಿಮಾವನ್ನು ಹೊತ್ತು ಸಾಗಿರುವವರು ಅನಂತ್‌ನಾಗ್‌. ಫ್ರೇಮ್‌ ಟು ಫ್ರೇಮ್‌ ಅವರು ಕಾಣಿಸಿಕೊಂಡಿರುವ ರೀತಿ, ಅವರ ನಟನೆ ಎಲ್ಲವೂ ಸೂಪರ್‌. ಅದು ಬಿಟ್ಟರೆ ಅಚ್ಯುತ್‌, ಚಿತ್ರಾ ಶೆಣೈ, ಸುಂದರ್‌, ಶಾಲಿನಿ, ಸಂಗೀತಾ ಎಲ್ಲರೂ ತಮ್ಮ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ನಿರ್ದೇಶಕ ಕವಿರಾಜ್‌ ಮೂಲತಃ ಗೀತಸಾಹಿತಿ. ಹಾಗಾಗಿ ಇಲ್ಲಿ ಸೊಗಸಾದ ಹಾಡುಗಳಿಗೆ. ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಇಷ್ಟವಾಗುತ್ತವೆ. ಅದಕ್ಕೆ ಸರಿಯಾಗಿ ಸುಂದರ ತಾಣಗಳಲ್ಲಿ ಇವುಗಳನ್ನು ಚಿತ್ರೀಕರಿಸಲಾಗಿದೆ.

*ನಿರ್ಮಾಣ: ತೂಗುದೀಪ ಪ್ರೊಡಕ್ಷನ್ಸ್‌
*ನಿರ್ದೇಶನ: ಕವಿರಾಜ್‌
*ತಾರಾಗಣ: ಸೂರಜ್‌, ಅಮೂಲ್ಯ, ಅನಂತ್‌ನಾಗ್‌, ಅಚ್ಯುತ್‌ ಕುಮಾರ್‌, ಶರತ್‌ ಲೋಹಿತಾಶ್ವ, ಚಿಕ್ಕಣ್ಣ ಮತ್ತಿತರರು
*ರವಿಪ್ರಕಾಶ್ ರೈ
-ಉದಯವಾಣಿ

Write A Comment