ಇದು ಊರು ಬಿಟ್ಟವರ ‘ಪರಪಂಚ’. ಒಬ್ಬೊಬ್ಬರದು ಒಂದೊಂದು ಕಥೆ. ಎಲ್ಲದರಲ್ಲೂ ಹತ್ತಾರು ವ್ಯಥೆ. ಈ ಗೋಳಿನ ಕಥಾ ಸರಪಳಿಯನ್ನು ಚಿತ್ರದ ಪ್ಲಸ್ ಪಾಯಿಂಟ್ ಎನ್ನಬೇಕೋ ಅಥವಾ ಮೈನಸ್ ಪಾಯಿಂಟ್ ಎನ್ನಬೇಕೋ ಪ್ರೇಕ್ಷಕರಿಗೆ ಬಿಟ್ಟಿದ್ದು. ಪಾತ್ರಗಳು ಮಾಡುವ ಉಪನ್ಯಾಸದ ನಡುವೆ ಮನರಂಜನೆಯನ್ನು ಹುಡುಕುವುದು ಕೊಂಚ ತ್ರಾಸೆನಿಸುತ್ತದೆ. ಇಡೀ ಚಿತ್ರ ನಡೆಯುವುದು ಒಂದೇ ಒಂದು ರೆಸ್ಟೋರೆಂಟ್ ಒಳಗೆ. ಸರಿಯಾಗಿ 6 ಗಂಟೆಗೆ ಶುರುವಾಗುವ ಕಥೆ, ಮಧ್ಯರಾತ್ರಿ 12ಕ್ಕೆ ಕೊನೆಗೊಳ್ಳುತ್ತದೆ. ಮನಸೆಳೆಯುವ ಲೊಕೇಷನ್ಗಳಿಗೆ ಇಲ್ಲಿ ಜಾಗವಿಲ್ಲ, ಮುದವೆನಿಸುವ ಡೈಲಾಗ್ಗಳೂ ಕೇಳಿಸುವುದಿಲ್ಲ, ಆಹಾ.. ಎಂಬಂಥ ಮೀನಿಂಗ್ ಇದ್ದರೂ ಓಹೋ ಎಂಬಂಥ ಮೇಕಿಂಗ್ ಇಲ್ಲ. ಕಾಮಿಡಿ ಮತ್ತು ಆಕ್ಷನ್ ಬಯಸುವವರಿಗೆ ‘ಪರಪಂಚ’ ಹಿಡಿಸುವುದು ಕಷ್ಟ. ದಿಗಂತ್ ಮತ್ತು ರಾಗಿಣಿ ಅವರನ್ನು ನಾಯಕ-ನಾಯಕಿ ಎನ್ನುವುದು ಶಾಸ್ತ್ರಕ್ಕಷ್ಟೇ. ಅವರಿಗಿಂತಲೂ ತೆರೆಮೇಲೆ ಹೆಚ್ಚು ಕಾಣಿ(ಡಿ)ಸುವುದು ರಂಗಾಯಣ ರಘು. ದಯನೀಯ ಫ್ಲ್ಯಾಶ್ಬ್ಯಾಕ್ ಅನ್ನು ಶೋಚನೀಯವಾಗಿ ವಿವರಿಸುತ್ತ, ತುಂಬ ನಾಟಕೀಯ ಎನಿಸುವ ಫೀಲ್ ಮೂಡಿಸುತ್ತಾರವರು. ಇದ್ದೂ ಇಲ್ಲದಂತಿರುವ ‘ಖಾಲಿಪೀಲಿ’ ಪಾತ್ರ ಯೋಗರಾಜ್ ಭಟ್ ಅವರದು. ಎಲ್ಲರೂ ಸೇರಿ ಬೋರ್ ಹೊಡೆಸುವಾಗ ವೀರ್ ಸಮರ್ಥ್ ಸಂಯೋಜನೆಯ ಹಾಡುಗಳು ಕೊಂಚ ರಿಲೀಫ್ ಕೊಡುತ್ತವೆ. ಊರು ಬಿಟ್ಟ ನೋವು ಮರೆಯಲು ಬಾರು ಸೇರಿಕೊಂಡವರ ‘ಪರಪಂಚ’ಕ್ಕೆ ‘ವಿಜಯವಾಣಿ’ ಓದುಗರು ನೀಡಿರುವ ಸರಾಸರಿ ಅಂಕ 10ಕ್ಕೆ 5. ಸ್ಟಾರ್ ಲೆಕ್ಕದಲ್ಲಿ **
ಸಾಧಾರಣ ಕಥೆ
ಸಾಮಾಜಿಕ ಚಿಂತನೆಗೆ ಪ್ರೇರೇಪಣೆ ನೀಡಿದರೂ ಚಿತ್ರದ ಕಥೆ ಸಾಧಾರಣವಾಗಿದೆ. ಬಾರಿನಲ್ಲಿ ಸೇರಿಕೊಂಡು ಭಾವನೆಗಳ ವಿನಿಮಯ ಮಾಡಿಕೊಳ್ಳುವವರ ‘ಪರಪಂಚ’ ಪರವಾಗಿಲ್ಲ. ಆಟೋ ಡ್ರೖೆವರ್ ಹುಚ್ಚ ವೆಂಕಟ್ ಪ್ರೇಕ್ಷಕರಿಗೆ ಹುಚ್ಚು ಹಿಡಿಸುತ್ತಾರೆ. ‘ಹುಟ್ಟಿದ ಊರನು…’ ಹಾಡು ಮತ್ತೆ ಮತ್ತೆ ಗುನುಗುನಿಸಿಕೊಳ್ಳುವಂತಿದೆ.
| ಅರವಿಂದ ಮಡಕಿ ಕಲಬುರಗಿ
ಅರ್ಥವಾಗುವುದು ಕಷ್ಟ
ಕೊನೆವರೆಗೂ ಕಥೆ ಏನೆಂಬುದೇ ಅರ್ಥವಾಗುವುದಿಲ್ಲ. ಏನು ನಡೆಯುತ್ತಿದೆ ಎಂಬುದು ಗೊತ್ತಾಗುವುದೇ ಚಿತ್ರದ ಕೊನೆಯಲ್ಲಿ. ಮಾತುಮಾತಿಗೂ ಒಳ್ಳೆಯದನ್ನು ಮಾಡಿ ಎಂದು ಹೇಳುವ ನಿರ್ದೇಶಕರು ಕೇವಲ ಮದ್ಯಪಾನದ ದೃಶ್ಯಗಳನ್ನೇ ತೋರಿಸಿದ್ದಾರೆ. ಇದ್ದಿದ್ದರಲ್ಲಿ ಹುಚ್ಚ ವೆಂಕಟ್ ಹಾಡಿದ ಸಾಂಗ್ ಪರವಾಗಿಲ್ಲ. ದಿಗಂತ್ ನಟನೆ ಅಷ್ಟಕ್ಕಷ್ಟೆ. ರಾಗಿಣಿ ಅಭಿನಯಕ್ಕಿಂತ ಐಟಂ ಸಾಂಗ್ಗೆ ಹೆಚ್ಚು ಗಮನ ನೀಡಿದ್ದಾರೆ.
| ಶ್ಯಾಮಸುಂದರ ಹುಬ್ಬಳ್ಳಿ
ಅರ್ಥವಾಗದ ಡೈಲಾಗ್ಗಳು
ಭಿನ್ನವಾದ ಪಾತ್ರಗಳಿಂದಾಗಿ ಯೋಗರಾಜ್ ಭಟ್ ಮತ್ತು ರಂಗಾಯಣ ರಘು ನಟನೆ ನೆನಪಿನಲ್ಲಿ ಉಳಿಯುತ್ತದೆ. ಆದರೆ ಇವರಿಬ್ಬರ ನಡುವಿನ ಉದ್ದುದ್ದದ ಸಂಭಾಷಣೆಗಳು ಅರ್ಥವಾಗುವುದಿಲ್ಲ. ಸಂಗೀತವೂ ಅಷ್ಟಕಷ್ಟೆ. ಒಮ್ಮೆ ನೋಡಲು ಅಡ್ಡಿಯಿಲ್ಲ.
| ಶಾಂತಕುಮಾರ ಗಂಗಾವತಿ
ಸ್ಪೀಡ್ ಬೇಕಿತ್ತು…
ಉದ್ಯೋಗಕ್ಕಾಗಿ ಹಳ್ಳಿಯನ್ನು ತೊರೆದು ಪಟ್ಟಣಗಳಿಗೆ ಬರುವವರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ಹೆಚ್ಚಿನ ಹಾಸ್ಯ ದೃಶ್ಯಗಳಿಲ್ಲ. ಮನರಂಜನೆ ಕಮ್ಮಿಯಿದೆ, ಮೆಸೇಜ್ ಜಾಸ್ತಿ ಇದೆ. ನಿರೂಪಣೆ ಇನ್ನೂ ವೇಗವಾಗಿರಬೇಕಿತ್ತು.
| ಸನಿತ್ ಬೆಂಗಳೂರು
ಆಕಳಿಕೆ ತಪ್ಪಿದ್ದಲ್ಲ
ಆರಂಭದಿಂದ ಅಂತ್ಯದವರೆಗೂ ಒಂದೇ ಹದದಲ್ಲಿ ಸಾಗುವ ಚಿತ್ರದಲ್ಲಿ ಥ್ರಿಲ್ಲಿಂಗ್ ಇಲ್ಲ. ಸಂಭಾಷಣೆಯಲ್ಲಿ ಅರ್ಥವಿದ್ದರೂ ಒಟ್ಟಾರೆ ಚಿತ್ರ ಬೋರು ಹೊಡೆಸುತ್ತದೆ. ರಂಗಾಯಣ ರಘು ತಲೆಚಿಟ್ಟು ಹಿಡಿಸುತ್ತಾರೆ. ನಿಧಾನಗತಿಯ ಚಿತ್ರಕಥೆಯಿಂದಾಗಿ ಆಕಳಿಕೆ ತಪ್ಪಿದ್ದಲ್ಲ.
| ಯೂಸೂಫ್ ನದಾಫ್ ಬೆಳಗಾವಿ
ಪೀಸ್ ಪೀಸ್ಕಥೆಗಳು
ರಾಗಿಣಿ ಮತ್ತು ದಿಗಂತ್ ನಡುವೆ ಲವ್ಸ್ಟೋರಿ ಇಲ್ಲ. ಪೀಸ್ ಪೀಸ್ ಕಥೆಗಳನ್ನು ಒಟ್ಟಾಗಿ ಹೆಣೆದು ಸಾಮಾಜಿಕ ಸಂದೇಶ ತಿಳಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರಕಥೆ ಗೊಂದಲಗಳು ಎದ್ದು ಕಾಣುತ್ತಿವೆ. ಫೈಟಿಂಗ್ ಇರದ ಈ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಬೋರ್ ಎನಿಸುತ್ತದೆ.
| ಅಂಕಿತಾ ಶೆಟ್ಟಿ ಮಂಗಳೂರು
ನಾವಿಕನಿಲ್ಲದ ದೋಣಿ
ಚಿತ್ರದಲ್ಲಿ ಹಾಸ್ಯ ದೃಶ್ಯಗಳಿದ್ದರೂ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ತಂದೆ-ತಾಯಿಯನ್ನು ಬಿಟ್ಟು ಬರುವ ನಾಯಕನ ಪಯಣ ನಾವಿಕನಿಲ್ಲದ ದೋಣಿಯಂತೆ ಸಾಗುತ್ತದೆ. ಯಾವುದೇ ಫೈಟ್ ಇಲ್ಲ. ಕ್ಲೈಮ್ಯಾಕ್ಸ್ ಪರವಾಗಿಲ್ಲ.
| ಅನೀಲ ಹಿರೇಮಠ ವಿಜಯಪುರ