ಎಂಟನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ನಾಳೆ (ಜನವರಿ 28ರಿಂದ) ಪ್ರಾರಂಭವಾಗಲಿದೆ. ಜಗತ್ತಿನ ಸುಮಾರು 50 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳು, ಒಂದು ವಾರದ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಿತ್ರೋತ್ಸವದಲ್ಲಿ ಡೆಲಿಗೇಟ್‌ಗಳಾಗಿ ಭಾಗವಹಿಸುವವರು ಮೊದಲಿಗೆ ಡಿಲೆಗೇಟ್ ಪಾಸ್‌ಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಇಲಾಖೆ ಮುಂತಾದ ಕಡೆ ದುಡ್ಡು ಕೊಟ್ಟು ಖರೀದಿಸಬೇಕು. ಆ ನಂತರ ಈ ಚಿತ್ರೋತ್ಸವದಲ್ಲಿ ಯಾವ್ಯಾವ ಅಂಶಗಳನ್ನು ಪಾಲಿಸಬೇಕು ಎಂಬ ಕೆಲವು ಅಂಶಗಳು ಇಲ್ಲಿವೆ.
1) ಮರೆಯದೇ ನಿಮ್ಮ ಎಂಟ್ರಿ ಪಾಸ್‌ನ್ನು ತೆಗೆದುಕೊಂಡು ಹೋಗಿ.
2) ಚಿತ್ರೋತ್ಸವ ಸಮಿತಿಯು ಕೊಡುವ ಬುಕ್ ಮತ್ತು ಸಿನಿಮಾಗಳ ವೇಳಾಪಟ್ಟಿಯನ್ನು ಪಡೆದುಕೊಳ್ಳಿ. ಸಾಧ್ಯವಾದರೆ ಪ್ರತಿ ಚಿತ್ರದ ಸಿನಾಪ್ಸಿಸ್‌ಗಳನ್ನು ಓದಿಕೊಳ್ಳಿ. ನಿಮಗೆ ಆಸಕ್ತಿಯೆನಿಸುವ ಚಿತ್ರಗಳಿಗೆ ಮೊದಲ ಪ್ರಾಮುಖ್ಯತೆ ಕೊಡಿ.
3) ಚಿತ್ರೋತ್ಸವದಲ್ಲಿ ಕನ್ನಡ, ಭಾರತೀಯ ಮತ್ತು ಏಷ್ಯಾ ಸಿನಿಮಾದ ಸ್ಪರ್ಧಾತ್ಮಕ ವಿಭಾಗಗಳಿರುತ್ತವೆ. ಜೊತೆಗೆ ಜಗತ್ತಿನ ಚಿತ್ರಗಳು, ಇರಾನ್-ಮೆಕ್ಸಿಕೋ-ಟರ್ಕಿ ದೇಶದ ಕಂಟ್ರಿ ಫೋಕಸ್ ಚಿತ್ರಗಳು, ಭಾರತದ ಹಳೆಯ ಕ್ಲಾಸಿಕ್ ಚಿತ್ರಗಳು, ಅವಲೋಕನ, ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು … ಹೀಗೆ ಇಷ್ಟೊಂದು ವಿಭಾಗಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿದೆ. ಆ ಪೈಕಿ ನೀವು ನೋಡಬೇಕಾದ ಚಿತ್ರಗಳನ್ನು ಮತ್ತು ಅದರ ಸಮಯವನ್ನು ಮೊದಲೇ ಗುರುತು ಮಾಡಿಕೊಳ್ಳಿ ಮತ್ತು ಅದರ ಪ್ರಕಾರ ಸಿನಿಮಾ ನೋಡಿ.
4) ಒರೆಯಾನ್ ಮಾಲ್‌ನಲ್ಲಿರುವ ಪಿವಿಆರ್ ಚಿತ್ರಮಂದಿರದಲ್ಲಿ 11 ಪರದೆಗಳಿವೆ. ಒಂದೊಂದು ಪರದೆಯಲ್ಲಿ ಐದು ಸಿನಿಮಾಗಳು ಪ್ರದರ್ಶನವಾಗುತ್ತವೆ. ದಿನವೊಂದಕ್ಕೆ 55 ಚಿತ್ರಗಳ ಪ್ರದರ್ಶನವಿರುತ್ತದೆ. ಆ ಪೈಕಿ ಐದು ಸಿನಿಮಾಗಳನ್ನು ನೋಡುವುದಕ್ಕೆ ಮಾತ್ರ ಸಾಧ್ಯ. ಹಾಗಾಗಿ ನೀವು ಯಾವ ಚಿತ್ರವನ್ನು ನೋಡಬೇಕೆಂದು ಮೊದಲೇ ತೀರ್ಮಾನಿಸಿಕೊಂಡು ಹೋಗಿ.
5) ನಿಮಗೆ ಬೇಕಾದ ಎರಡು ಚಿತ್ರಗಳು ಒಂದೇ ಸಮಯಕ್ಕೆ ನಿಗದಿಯಾಗಿರಬಹುದು. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಮೊದಲಿಗೆ ಆ ಎರಡು ಚಿತ್ರಗಳ ಮರುಪ್ರದರ್ಶನ ಯಾವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಆಗ ಎರಡೂ ಚಿತ್ರಗಳಿಗೆ ಸಮಯ ನಿಗದಿ ಮಾಡಿಕೊಳ್ಳಬಹುದು.
6) ಸುಮಾರು 50ಕ್ಕೂ ಹೆಚ್ಚು ದೇಶಗಳ ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುತ್ತಿದೆ. ಬೇರೆ ಬೇರೆ ದೇಶಗಳು, ಭಾಷೆಗಳು ಮತ್ತು ಸಂಸ್ಕೃತಿಗಳನ್ನು ನೋಡುವ ಅವಕಾಶ ನಿಮ್ಮದಾಗಿರುತ್ತದೆ. ಹಾಗಾಗಿ ಎಷ್ಟು ವೈವಿಧ್ಯಮಯ ಚಿತ್ರಗಳನ್ನು ನೋಡುವುದಕ್ಕೆ ಸಾಧ್ಯವೋ, ಅವುಗಳನ್ನು ನೋಡಿ.
7) ಹಳೆಯ ಭಾರತೀಯ ಚಿತ್ರಗಳೆಂದು ತಾತ್ಸಾರ ಮಾಡಬೇಡಿ. ನ್ಯಾಷನಲ್ ಆಕೈವ್‌ನಲ್ಲಿರುವ ಹಳೆಯ ಚಿತ್ರಗಳು ನೋಡುವುದಕ್ಕೆ ಸಿಗುವುದು ಕಷ್ಟ. ಹಾಗಾಗಿ ಅಂತಹ ಚಿತ್ರಗಳಿದ್ದರೆ, ಅದಕ್ಕೂ ಸಮಯ ಹೊಂದಿಸಿಕೊಳ್ಳಿ.
8) ಪ್ರತಿ ದಿನ ಸಂಜೆ ಐದರಿಂದ ಆರರವರೆಗೆ ಹಲವು ನಿರ್ದೇಶಕರ ಜೊತೆಗೆ ಚರ್ಚೆ ಇರುತ್ತದೆ. ಸಿನಿಮಾ ವಿದ್ಯಾರ್ಥಿಗಳಿಗೆ ಮತ್ತು ಸಿನಿಮಾಸಕ್ತರಿಗೆ ಇಂಥದ್ದೊಂದು ಚರ್ಚೆ ಬಹಳ ಮುಖ್ಯ. ಹಾಗಾಗಿ ಪ್ರತಿದಿನ ಯಾರೊಂದಿಗೆ ಚರ್ಚೆ ಇರುತ್ತದೆ ಎಂಬುದನ್ನು ಮೊದಲಿಗೇ ತಿಳಿದುಕೊಂಡು, ಸಾಧ್ಯವಾದಲ್ಲಿ ಆ ಚರ್ಚೆಗಳಲ್ಲಿ ಭಾಗವಹಿಸಿ.
9) ಕೆಲವು ಚಿತ್ರಗಳಿಗೆ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿರುತ್ತಾರೆ. ಇನ್ನು ಮಾಧ್ಯಮದವರಿಗೆ, ಚಿತ್ರರಂಗದವರಿಗೆ ಮತ್ತು ಇತರರಿಗೆಂದು ಕೆಲವು ಆಸನಗಳನ್ನು ತೆಗೆದಿರಸಲಾಗಿರುತ್ತದೆ. ಹಾಗಾಗಿ ಆಸನಗಳ ಕೊರತೆ ಎದ್ದು ಕಾಣಬಹುದು. ಈ ಸಂದರ್ಭದಲ್ಲಿ ಚಿತ್ರೋತ್ಸವದ ಸಮಿತಿಯೊಂದಿಗೆ ಜಗಳವಾಡಿ ಯಾವುದೇ ಪ್ರಯೋಜನವಿಲ್ಲ. ಸಿನಿಮಾ ನಿಜಕ್ಕೂ ನೋಡಬೇಕೆಂದಿದ್ದರೆ, ತಾಳ್ಮೆಯಿಂದ ಸಾಲಿನಲ್ಲಿ ನಿಂತು ಚಿತ್ರ ನೋಡಿ.
10) ಒರೆಯಾನ್ ಮಾಲ್‌ನಲ್ಲಿ ನೀವು ಪಾರ್ಕಿಂಗ್‌ಗಾಗಲಿ ಅಥವಾ ಊಟ-ತಿಂಡಿಗಾಗಲ ಯೋಚನೆ ಮಾಡಬೇಕಿಲ್ಲ. ಚಿತ್ರೋತ್ಸವದ ಪಾಸ್ ಇದ್ದವರು ದ್ವಿಚಕ್ರ ವಾಹನಗಳಿಗೆ ದಿನವೊಂದಕ್ಕೆ 30 ರೂಪಾಯಿಯಾದರೆ, ಕಾರ್‌ನವರಿಗೆ 80 ರೂಪಾಯಿ ಶುಲ್ಕ ವಿಧಿಸಲಾಗುವುದು. ಇನ್ನು ಊಟ-ತಿಂಡಿಗೆ ಹಲವು ಹೋಟೆಲ್‌ಗಳು ಮಾಲ್ ಒಳಗೇ ಇದೆ. ಆದರೆ, ಸ್ವಲ್ಪ ದುಬಾರಿ ಬೆಲೆ ಕೊಟ್ಟು ತಿನ್ನಬೇಕಾಗುತ್ತದೆ. ಹಾಗಾಗಿ ಹೊಟ್ಟೆ ಖಾಲಿಯಾಗದಂತೆ ಒಂದಿಷ್ಟು ಬಿಸ್ಕೆಟ್ಟುಗಳನ್ನು ಇಟ್ಟುಕೊಳ್ಳಿ.
-ಉದಯವಾಣಿ