ನವದೆಹಲಿ: ವಿಮಾನವನ್ನು ಕೊಂಡು ಅದರಲ್ಲಿ ಪ್ರಯಾಣ ಮಾಡುವ ಆಸೆಯೇನೋ ಇದೆ. ಆದರೆ ವಿಮಾನ ಕೊಂಡುಕೊಳ್ಳುವಷ್ಟು ಹಣ ನನ್ನ ಬಳಿ ಇಲ್ಲ ಎಂದು ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಬುಧವಾರ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನನಗೆ ವಿಮಾನ ಕೊಳ್ಳುವ ಆಸೆಯೇನೋ ಇದೆ. ಆದರೆ ಅದನ್ನು ಕೊಳ್ಳುವಷ್ಟು ಹಣ ನನ್ನ ಬಳಿ ಇಲ್ಲ. ಸಾಕಷ್ಟು ಹಣವಿದ್ದರೂ ಸಹ ಆ ಹಣವನ್ನು ಸಿನಿಮಾ ನಿರ್ಮಾಣಕ್ಕೆ ಹಾಕಿಬಿಡುತ್ತೇನೆ. ಪ್ರತಿಯೊಂದಕ್ಕೂ ಒಂದು ಆಯ್ಕೆಯೆಂಬುದಿರುತ್ತದೆ. ಒಂದು ವಿಮಾನ ತೆಗೆದುಕೊಳ್ಳಬೇಕು. ಇಲ್ಲವೇ ಚಿತ್ರ ಮಾಡಬೇಕು. ಹೀಗಾಗಿ ನಾನು ಸಿನಿಮಾವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ.
ಇದೇ ವೇಳೆ ನಿಮ್ಮ ಜೀವನದ ದೊಡ್ಡ ತಲೆನೋವು ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ನನ್ನ ಜೀವನದಲ್ಲಿ ಸಾಕಷ್ಟು ತಲೆನೋವಿದೆ. ಪ್ರತಿಯೊಂದು ಹಂತದಲ್ಲಿ ಒಂದಲ್ಲ ಒಂದು ರೀತಿಯ ತಲೆನೋವುಂಟು ಮಾಡುವ ಪರಿಸ್ಥಿತಿಗಳಿರುತ್ತವೆ. ನನಗೂ ಈ ಹಂತದಲ್ಲಿ ಸಾಕಷ್ಟು ಚಿಂತೆಗಳಿವೆ. ದೊಡ್ಡ ಚಿಂತೆ ಎಂದರೆ ಎಲ್ಲರ ಬಳಿಯೂ ಒಳ್ಳೆಯವರಾಗಿರುವುದು. ಪ್ರತಿಯೊಬ್ಬರ ಬಗ್ಗೆಯೂ ಚಿಂತಿಸುವುದು. ಜೀವನದಲ್ಲಿ ಒಂದು ಹಂತವಿತ್ತು, ಇಷ್ಟವಾಗದ್ದಕ್ಕೆ ಇಲ್ಲ ಎಂದು ಹೇಳುತ್ತಿದ್ದೆ. ನನ್ನ ಬಗ್ಗೆ ಒಬ್ಬರು ಚಿಂತೆ ಮಾಡುತ್ತಿದ್ದರು. ಆಗ ನನಗೆ ಯಾವುದೇ ಚಿಂತೆ, ನೋವುಗಳಿರಲಿಲ್ಲ. ಆದರೀಗ ಎಲ್ಲಾ ರೀತಿಯಲ್ಲೂ ಚಿಂತೆಗಳು ಎದುರಾಗುತ್ತವೆ ಎಂದು ಹೇಳಿದ್ದಾರೆ.