ರೈಲಿನಲ್ಲಿ ಸುಮ್ಮನೆ ಮಲಗಿದ್ದವನನ್ನು ಆ ಪಾರಿವಾಳ ಎಬ್ಬಿಸುತ್ತದೆ. ಅಲ್ಲೊಬ್ಬ ಕುರುಡ ಬಾಗಲಿ ಬಳಿ ಹೋಗುತ್ತಿದ್ದಾನೆ ಎಂದು ಎಚ್ಚರಿಸುತ್ತದೆ. ತಕ್ಷಣ ಅವನು ಹೋಗಿ, ಬಾಗಿಲ ಬಳಿ ನಿಂತಿದ್ದ ಕುರಡನನ್ನು ತಡೆಯುತ್ತಾನೆ. “ಕ್ಯಾಜಿ ನಮುª ಹೇಳದಲ್ವಾ? ಟಾಯ್ಲೆಟ್ ಆ ಕಡೆ ಐತೆ. ನೀವು ಈ ಕಡೆ ಬಂದಿದ್ದೀರಾ. ಬಿದ್‌ಗಿದ್ದಿದ್ರೆ ಏನ್ ಗತಿ. ಬನ್ನಿ ನಾನ್ ಟಾಯ್ಲೆಟ್ ತೋರಿಸ್ತೀನಿ …’ ಎಂದು ಪಕ್ಕಕ್ಕೆ ಕರೆಯುತ್ತಾನೆ. ಕುರುಡನೊಬ್ಬನನ್ನು ಬದುಕಿಸಿದ್ದಕ್ಕೆ ಹೆಮ್ಮೆ ಪಡುತ್ತಿರುವಾಗಲೇ, ಅವನನ್ನು ಆ ಕುರುಡ ಹೊರಗೆ ನೂಕುತ್ತಾನೆ. ಟ್ರೈನ್‌ನಿಂದ ಹಾರಿದ ರಭಸಕ್ಕೆ, ಒಂದು ಕಂಭಕ್ಕೆ ಡಿಕ್ಕಿ ಹೊಡೆದು, ಅವನು ಸ್ಪಾಟ್‌ಔಟ್ …
ಇದು ಕೊಲೆಯಾದರೂ, ನ್ಯಾಯಾಲಯದಲ್ಲಿ ಕೇಸು ನಿಲ್ಲುವುದಿಲ್ಲ. ಮೊದಲಿಗೆ ಆ ಕಂಪಾರ್ಟ್‌ಮೆಂಟ್‌ನಲ್ಲಿ ಬೇರೆ ಯಾರೂ ಇಲ್ಲ. ಸತ್ತವನ ಮತ್ತು ಬಾಡಿ ಬಿದ್ದಿರುವ ಜಾಗದಲ್ಲಿ ಯಾವುದೇ ಕ್ಲೂ ಸಹ ಇಲ್ಲ. ಹಾಗಾಗಿ ಇದೊಂದು ಆತ್ಮಹತ್ಯೆ ಎಂದು ತೀರ್ಪು ನೀಡುತ್ತದೆ ನ್ಯಾಯಾಲಯ. ಆದರೆ, ಅಂಥದ್ದೊಬ್ಬ ನಿರುಪದ್ರವಿ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಸತ್ತವನ ಗರ್ಲ್ಫ್ರೆಂಡ್ ತೀರ್ಮಾನಿಸಿ, ಆ ಕೇಸ್‌ನ್ನು ಪುನಃ ಓಪನ್ ಮಾಡುವುದಕ್ಕೆ ಪ್ರಾರ್ಥಿಸುತ್ತಾಳೆ. ಆಗ ಆ ಕೇಸ್ ಸಿಐಡಿಗೆ ರವಾನೆಯಾಗುತ್ತದೆ. ಆ ಇಲಾಖೆಯ ಜಾಣನೊಬ್ಬನಿಗೆ ಈ ಕೇಸ್ ಬಗೆಹರಿಸುವುದಕ್ಕೆ ಸಿಗುತ್ತದೆ. ಅವನಿಗಿರುವುದೊಂದೇ ಸಾಕ್ಷಿ. ಅದು ಪಾರಿವಾಳ ಮಾತ್ರ.
ಪಾರಿವಾಳದ ಸಹಾಯದಿಂದ ಇಂಥದ್ದೊಂದು ಕೇಸು ಬಗೆಹರಿಸುವುದಕ್ಕೆ ಸಾಧ್ಯವಾ? ಎಂಬ ಪ್ರಶ್ನೆ ಎಲ್ಲರಿಗೂ ಬರಬಹುದು. ನೊಣವೇ ಮನುಷ್ಯನ ಮೇಲೆ ಸೇಡು ತೀರಿಸಿಕೊಳ್ಳುವಾಗ, ಪಾರಿವಾಳದಿಂದ ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯ. ಇಲ್ಲದಿದ್ದರೂ ಅದನ್ನು ಮಾಡಿ ತೋರಿಸಿದ್ದಾರೆ ನಿರ್ದೇಶಕ ಪಿ. ವಾಸು. ಒಂದು ಕಥೆಯನ್ನು ಬೇರೆ ಬೇರೆ ಜಾನರ್‌ಗಳಲ್ಲಿ ನೋಡುವ ಮತ್ತು ಕಮರ್ಷಿಯಲ್ ರೀತಿಯಲ್ಲಿ ಸಮರ್ಥವಾಗಿ ಹೇಳುವ ಕಲೆ ಅವರಿಗೆ ಸಖತ್ತಾಗಿ ಸಿದ್ಧಿಸಿದೆ. “ಶಿವಲಿಂಗ’ ಸಹ ಅದೇ ಶೈಲಿಯ ಸಿನಿಮಾ. ಮೇಲ್ನೋಟಕ್ಕೆ ಇದೊಂದು ಮರ್ಡರ್ ಮಿಸ್ಟ್ರಿ ಚಿತ್ರ ಎಂದನಿಸುವುದು ಹೌದಾದರೂ, ಇದೊಂದು ಅಪ್ಪಟ ಹಾರರ್ ಚಿತ್ರ. ಇಲ್ಲಿ ಪಾರಿವಾಳ ಎಷ್ಟು ಮುಖ್ಯವೋ, ದೆವ್ವ ಕೂಡಾ ಅಷ್ಟೇ ಮುಖ್ಯ. ಶಿವಲಿಂಗನಿಗೆ ಪಾರಿವಾಳ ಹೇಗೆ ಒಂದು ಮಾಧ್ಯಮವಾಗುತ್ತದೋ, ದೆವ್ವಕ್ಕೆ ಶಿವಲಿಂಗನ ಹೆಂಡತಿ ಮಾಧ್ಯಮವಾಗುತ್ತಾಳೆ. ಕೊನೆಗೆ ಸಾಕಷ್ಟು ತನಿಖೆ, ತರ್ಕಗಳ ನಂತರ ಕಥೆಗೊಂದು ಅಂತ್ಯ ಸಿಗುತ್ತದೆ.
ಹೇಳಿದಷ್ಟು ಸುಲಭವೇನಲ್ಲ ಈ ಕಥೆ. ಇಂಥದ್ದೊಂದು ಕಥೆಯನ್ನು ಕಮರ್ಷಿಯಲ್ ರೀತಿಯಲ್ಲಿ ಎಲ್ಲರಿಗೂ ಇಷ್ಟವಾಗುವಂತೆ ಹೇಳುವುದು ಕ್ಲಿಷ್ಟವೇ. ಆದರೆ, ವಾಸು ಈ ಸಾಗರದಲ್ಲಿ ಸಾಕಷ್ಟು ಈಜಾಡಿರುವುದರಿಂದ, ಅವರಿಗೆ ಇದು ಅಷ್ಟು ಕಷ್ಟವೇನಲ್ಲ ಬಿಡಿ. ಯಾವುದೇ ತರಹದ ಚಿತ್ರವಾಗಲೀ ಅದರಲ್ಲಿ ಹಾಡು, ಫೈಟು, ಕಾಮಿಡಿ, ಸಸ್ಪೆನ್ಸ್, ಸೆಂಟಿಮೆಂಟ್ ಮತ್ತು ಥ್ರಿಲ್‌ಗಳನ್ನು ಎಷ್ಟೆಷ್ಟು ಸಮಯಕ್ಕೆ ಎಷ್ಟೆಷ್ಟು ಕೊಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಈ ಚಿತ್ರದಲ್ಲೂ ಅವರು ಅದನ್ನೇ ಮುಂದುವರೆಸಿದ್ದಾರೆ. ಒಂದು ಸರಳ ಸೇಡಿನ ಕಥೆಗೆ ಇವನ್ನೆಲ್ಲಾ ಸೇರಿಸಿ ಎರಡೂವರೆ ಗಂಟೆಯ ಚಿತ್ರ ಮಾಡಿದ್ದಾರೆ. ಚಿತ್ರ ಅಲ್ಲಲ್ಲಿ ಎಳೆದಂತೆ, ನಿಧಾನವಾಗುವಂತೆ ಅನಿಸುವುದುಂಟು. ಮೊದಲೆಲ್ಲಾ ಏನೇ ಮಾಡಿದರೂ, ಕೊನೆಯ ಅರ್ಧ ಗಂಟೆಯನ್ನು ನೋಡಿಸಿಕೊಂಡು ಹೇಗೆ ಮಾಡುವುದು ಎಂಬುದು ವಾಸು, “ಅಪ್ತಮಿತ್ರ’ ಮತ್ತು “ಆಪ್ತರಕ್ಷಕ’ ಚಿತ್ರಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಚಿತ್ರದಲ್ಲೂ ಅವರು ಅದೇ ತರಹದ್ದೊಂದು ಕ್ಲೈಮ್ಯಾಕ್ಸ್ ಇಟ್ಟಿದ್ದಾರೆ. ಕೊನೆಯ ಅರ್ಧ ಗಂಟೆ ಖುಷಿಕೊಟ್ಟು ಬಿಟ್ಟರೆ, ಚಿತ್ರ ಗೆದ್ದಂತೆ.
“ಶಿವಲಿಂಗ’ ಚಿತ್ರದ ಹೈಲೈಟ್ ಎಂದರೆ ಶಿವರಾಜಕುಮಾರ್. ಕಿಲಾಡಿ ಪೋಲಿಸ್ ಆಫಿಸರ್ ಆಗಿ, ಹೆಂಡತಿಯ ಸ್ಥಿತಿಗೆ ಮರುಗುವ ಪತಿಯಾಗಿ ಶಿವರಾಜಕುಮಾರ್ ಅಭಿನಯ ಚೆನ್ನಾಗಿದೆ. ವೇದಿಕಾ ಪಾತ್ರ ಚೆನ್ನಾಗಿದೆ. ಆದರೆ, ಅದಕ್ಕೆ ತಕ್ಕಂತ ಅಭಿನಯ ಆಕೆಯಿಂದ ಬಂದಿಲ್ಲ. ಸಾಧು ಕೋಕಿಲ ಕೆಲವು ದೃಶ್ಯಗಳಲ್ಲಿ ಸಖತ್ ಮಜ ಕೊಡುತ್ತಾರೆ. ಇನ್ನು ಭರತ್, ಶಕ್ತಿ ವಾಸುದೇವನ್, ವೈಶಾಲಿ ದೀಪಕ್, ಊರ್ವಶಿ, ವಿನಯಾ ಪ್ರಸಾದ್ ಎಲ್ಲರೂ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ವಿ. ಹರಿಕೃಷ್ಣ ಹಾಡುಗಳು ಕೇಳುವುದಕ್ಕಿಂತ ನೋಡುವುದು ಚಿತ್ರ. ಇನ್ನು ಪಿ. ವಾಸು ಕಲ್ಪನೆಗಳಿಗೆ ತಕ್ಕಂತೆ ಕತ್ತರಿ ಆಡಿಸಿರುವ ಸುರೇಶ್ ಅರಸ್ ಅವರ ಕೆಲಸವನ್ನು ಮೆಚ್ಚದೆ ಇರಲಾಗದು. ಇಲ್ಲಿ ಶಿವರಾಜಕುಮಾರ್ ಅಭಿಮಾನಕ್ಕಿಂತ ಹೆಚ್ಚಾಗಿ, ವಾಸು ಅವರ ಅಭಿಮಾನಿಯಾಗಿದ್ದರೆ ಈ ಚಿತ್ರವನ್ನು ಖಂಡಿತಾ ಮಿಸ್ ಮಾಡಬೇಡಿ.
ಚಿತ್ರ: ಶಿವಲಿಂಗ
ನಿರ್ದೇಶನ: ಪಿ. ವಾಸು
ಸಂಗೀತ: ವಿ. ಹರಿಕೃಷ್ಣ
ತಾರಾಗಣ: ಶಿವರಾಜಕುಮಾರ್, ವೇದಿಕಾ, ಸಾಧು ಕೋಕಿಲ, ಊರ್ವಶಿ, ವಿನಯಾ ಪ್ರಸಾದ್ ಮುಂತಾದವರು.
– ಚೇತನ್ ನಾಡಿಗೇರ್
-ಉದಯವಾಣಿ