ಸೆಂಟ್ ಜಾನ್ಸ್(ಅಂಟಿಗಾ/ಬರ್ಮುಡಾ): ವೆಸ್ಟ್ ಇಂಡೀಸ್ ಕ್ರಿಕೆಟಿಗರ ವೇತನ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿದ್ದು, ಮುಂಬರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಡರೇನ್ ಸಮಿ ಬಳಗ ಸಜ್ಜಾಗಿದೆ.
ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಆಡುವ ನಿಟ್ಟಿನಲ್ಲಿ ತಾರಾ ಕ್ರಿಕೆಟಿಗ ಕ್ರಿಸ್ ಗೇಲ್, ನಾಯಕ ಡರೇನ್ ಸಮಿ, ಸುಲೇಮಾನ್ ಬೆನ್, ಜಾಸನ್ ಹೋಲ್ಡರ್, ಆಂಡ್ರ್ಯೆ ಫ್ಲೆಚರ್, ಡ್ವೇನ್ ಬ್ರಾವೊ, ಸಮ್ಯುಯೆಲ್ ಬದ್ರಿ, ಲೆಂಡ್ಲಿ ಸಿಮನ್ಸ್, ಜೆರೊಮ್ ಟೇಲರ್, ಆಂಡ್ರೆ ರಸೆಲ್ಸ್, ಮರ್ಲಾನ್ ಸ್ಯಾಮುಯೆಲ್ಸ್ ಹಾಗೂ ದಿನೇಶ್ ರಾಮ್ದಿನ್ ಅವರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ. ಒಪ್ಪಂದಗಳಿಗೆ ಅಂಕಿತ ಹಾಕಲು ಭಾನುವಾರ ಕೊನೆಯ ದಿನವಾಗಿತ್ತು.
ಆದರೆ, ಬ್ಯಾಟ್ಸಮನ್ ಡರೇನ್ ಬ್ರಾವೋ ಅವರು ಟೆಸ್ಟ್ ಕ್ರಿಕೆಟ್ ಹಾಗೂ 50 ಓವರ್‌ಗಳ ಪಂದ್ಯಗಳತ್ತ ಗಮನ ನೀಡುವುದಾಗಿ ಹೇಳಿಕೊಂಡಿದ್ದಾರೆ. ಬ್ರಾವೊ ತಂಡದಿಂದ ಹೊರಗುಳಿದ ಮೂರನೇ ಆಟಗಾರ. ಸುನಿಲ್ ನರೇನ್ ಹಾಗೂ ಕಿರಣ್ ಪೋಲಾರ್ಡ್ ಅವರೂ ತಂಡದಿಂದ ಹೊರಗೆ ಉಳಿದಿದ್ದಾರೆ. ಈ ಮೂವರು ಒಪ್ಪಂದಕ್ಕೆ ಸಹಿ ಹಾಕದೇ ಇರಲು ಯಾವುದೇ ಕಾರಣಗಳನ್ನು ನೀಡಿಲ್ಲ.
‘ನರೇನ್ ಹಾಗೂ ಪೋಲಾರ್ಡ್ ಅವರ ಬದಲಿಗೆ ಆಶ್ಲೆ ನರ್ಸ್ ಹಾಗೂ ಕಾರ್ಲೋಸ್ ಬ್ರಾಥವೈಟ್ ಅವರಿಗೆ ಆಯ್ಕೆ ಸಮಿತಿಯು ಸ್ಥಾನ ನೀಡಿದೆ’ ಎಂದು ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ, ‘ಶೀಘ್ರವೇ ಬ್ರಾವೊ ಅವರ ಬದಲಿಗೆ ಬೇರೆ ಆಟಗಾರನನ್ನು ಆಯ್ಕೆ ಸಮಿತಿಯು ಹೆಸರಿಸಲಿದೆ’ ಎಂದೂ ಅದರಲ್ಲಿ ಹೇಳಲಾಗಿದೆ.
ಪೋಲಾರ್ಡ್ ಗಾಯದ ಕಾರಣಕ್ಕೆ ತಂಡದಿಂದ ಹೊರಗೆ ಉಳಿದಿದ್ದಾರೆ. ಅಕ್ರಮ ಬೌಲಿಂಗ್ ಶೈಲಿ ಕಾರಣಕ್ಕಾಗಿ ಅನುಭವಿಸಿದ ನಿಷೇಧದಿಂದಾಗಿ ಉತ್ತಮ ರೀತಿಯಲ್ಲಿ ಬೃಹತ್ ಟೂರ್ನಿಗೆ ಸಜ್ಜಾಗಿಲ್ಲ ಎಂದು ನರೇನ್ ಅವರು ಹೇಳಿಕೊಂಡಿದ್ದಾರೆ.