ಮನೋರಂಜನೆ

ಸರ್ಫರಾಜ್ ಪಾಕ್ ಟಿ-20 ತಂಡದ ಹೊಸ ನಾಯಕ

Pinterest LinkedIn Tumblr

Sarfraz Ahmadಕರಾಚಿ (ಪಿಟಿಐ): ಪಾಕಿಸ್ತಾನ ಟ್ವೆಂಟಿ-20 ಕ್ರಿಕೆಟ್ ತಂಡದ ಹೊಸ ನಾಯಕರಾಗಿ ವಿಕೆಟ್ ಕೀಪರ್–ಬ್ಯಾಟ್ಸ್‌ಮನ್‌ ಸರ್ಫರಾಜ್‌ ಅಹಮದ್ ಅವರು ಮಂಗಳವಾರ ನೇಮಕಗೊಂಡಿದ್ದಾರೆ.
ಇತ್ತೀಚೆಗೆ ಭಾರತದಲ್ಲಿ ನಡೆದ ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಪಾಕ್‌ ತಂಡ ಕಳಪೆ ಪ್ರದರ್ಶನ ನೀಡಿತ್ತು. ಈ ಬೆನ್ನಲ್ಲೆ ಕಳೆದ ಭಾನುವಾರವಷ್ಟೇ ಶಾಹೀದ್ ಅಫ್ರಿದಿ ಅವರು ನಾಯಕತ್ವ ತೊರೆದಿದ್ದರು. ಇದೀಗ 28 ವರ್ಷದ ಸರ್ಫರಾಜ್‌ ಅವರು ಅಫ್ರಿದಿ ಅವರ ಸ್ಥಾನ ತುಂಬಿದ್ದಾರೆ.
ಪಾಕಿಸ್ತಾನದಲ್ಲಿ ಮೂರೂ ಮಾದರಿಯ ಕ್ರಿಕೆಟ್‌ ತಂಡಗಳಿಗೆ ಭಿನ್ನ ನಾಯಕರಿದ್ದಾರೆ. ಸರ್ಫರಾಜ್‌ 20–20 ತಂಡ ಮುನ್ನಡೆಸಲಿದ್ದರೆ, ಟೆಸ್ಟ್‌ ತಂಡದ ನಾಯಕತ್ವ ಮಿಸ್ಬಾ ಉಲ್ ಹಕ್ ಅವರಿಗಿದೆ. ಏಕದಿನ ಮಾದರಿಗೆ ಅಜರ್ ಅಲಿ ಅವರು ಪಾಕ್ ತಂಡದ ನಾಯಕರಾಗಿದ್ದಾರೆ.
‘ಪಾಕಿಸ್ತಾನ ತಂಡದ ನಾಯಕತ್ವ ವಹಿಸಿಕೊಳ್ಳುವುದು ದೊಡ್ಡ ಗೌರವ. ತಂಡವು ಅಗ್ರ ಕ್ರಮಾಂಕಕ್ಕೆ ಮರಳುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಇರಲಿದೆ’ ಎಂದು ಅಹಮದ್ ಅವರು ತಿಳಿಸಿದ್ದಾರೆ.
ಸರ್ಫರಾಜ್ ಅವರ ಆಯ್ಕೆ ಸಹಜವಾಗಿತ್ತು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಹರ್ಯಾರ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಕ್ವೆಟ್ಟಾ ಗ್ಲೇಡಿಯೇಟರ್ಸ್ ಫ್ರಾಂಚೈಸ್ ನಾಯಕತ್ವ ವಹಿಸಿದ್ದ ಸರ್ಫರಾಜ್, ತಂಡವನ್ನು ಫೈನಲ್ ವರೆಗೂ ತಂದಿದ್ದರು. ಪ್ರಶಸ್ತಿ ಸುತ್ತಿನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡದ ವಿರುದ್ಧ ಸೋಲು ಕಂಡಿದ್ದರು.
21 ಟೆಸ್ಟ್ ಪಂದ್ಯಗಳನ್ನಾಡಿರುವ ಸರ್ಫರಾಜ್, 46.28ರ ಸರಾಸರಿಯಲ್ಲಿ 1296 ರನ್ ಗಳಿಸಿದ್ದಾರೆ. 58 ಏಕದಿನ ಪಂದ್ಯಗಳಿಂದ 29.91 ಸರಾಸರಿಯಲ್ಲಿ 1077 ರನ್ ಕಲೆ ಹಾಕಿದ್ದಾರೆ. ಟಿ–20ಯಲ್ಲಿ 21 ಪಂದ್ಯಗಳಾಡಿದ್ದು, 29.10 ಸರಾಸರಿಯಲ್ಲಿ 291 ರನ್ ಪೇರಿಸಿದ್ದಾರೆ.

Write A Comment