ಐಪಿಎಲ್ 9ರ ಅಂಕಪಟ್ಟಿಯಲ್ಲಿ 2 ಸ್ಥಾನಕ್ಕೇರಲು ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪುಣೆ ಸೂಪರ್ ಜೈಂಟ್ಸ್ ತಂಡದ ಸಾರಥ್ಯ ವಹಿಸಿರುವ ಮಹೇಂದ್ರ ಸಿಂಗ್ ಧೋನಿ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಆಡಿದ 3 ಪಂದ್ಯಗಳಲ್ಲೂ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸುರೇಶ್‌ರೈನಾ ನಾಯಕತ್ವದ ಗುಜರಾತ್ ಲಯನ್ಸ್ ಹಾಗೂ ಗಂಭೀರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಅಗ್ರಸ್ಥಾದಲ್ಲಿದ್ದು ಇಂದು ನಡೆಯುವ ಪಂದ್ಯಗಳಲ್ಲಿ ಪುಣೆ ಹಾಗೂ ಆರ್‌ಸಿಬಿ ತಂಡಗಳು ಜಯಸಿದರೆ ಟಾಪ್ 2 ನೆ ಸ್ಥಾನಕ್ಕೇರಬಹುದು.
ಐಪಿಎಲ್ 9ರಲ್ಲಿ ಪುಣೆ ತಂಡ ವನ್ನು ಪ್ರತಿನಿಧಿಸುತ್ತಿರುವ ಧೋನಿ ಬಳಗವು ಆರಂಭಿಕ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿ ನಂತರ ಗುಜರಾತ್ ಲಯನ್ಸ್‌ನ ಘರ್ಜನೆ ಎದುರು ಸೋಲು ಕಂಡರೂ ಇಂದು ಕಿಂಗ್ಸ್ ಇಲೆವೆನ್ ವಿರುದ್ಧ ಗೆಲ್ಲುವ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ 2015ರ ಕಳಪೆ ಪ್ರದರ್ಶನವನ್ನು ಮುಂದು ವರೆಸಿರುವ ಕಿಂಗ್ಸ್ ಪಂಜಾಬ್ ತಂಡವು ತವರಿನಲ್ಲಾದರೂ ಗೆಲ್ಲುವ ಮೂಲಕ ಶುಭಾರಂಭ ಮಾಡಲು ಸಜ್ಜಾಗಿದೆ.
ಧೋನಿ ಸಾರಥ್ಯದ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿರುವ ವಿಶ್ವ ಶ್ರೇಷ್ಠರಾದ ಧೋನಿ, ಕೇವಿನ್ ಪೀಟರ್‌ಸನ್, ಅಜೆಂಕ್ಯಾ ರಹಾನೆ, ಪಾಪ್ ಡ್ಲುಪೆಸೆಸ್, ಸ್ಟೀವನ್‌ಸ್ಮಿತ್‌ರಿಂದ ಸ್ಥಿರ ಪ್ರದರ್ಶನ ಹರಿದು ಬರುತ್ತಿರುವುದು ಮತ್ತು ರವಿಚಂದ್ರನ್ ಅಶ್ವಿನ್, ಇಶಾಂತ್‌ಶರ್ಮಾ, ಆರ್.ಪಿ. ಸಿಂಗ್‌ರ ಉತ್ತಮ ಬೌಲಿಂಗ್ ತಂಡಕ್ಕೆ ಪ್ಲಸ್ ಪಾಯಿಂಟ್‌ನಂತಿದೆ ಆದರೂ, ಗುಜರಾತ್ ಲಯನ್ಸ್ ವಿರುದ್ಧ ಪಂದ್ಯದ ಸೋಲಿನಿಂದ ಹೊರಬಂದು ಪುಣೆ ಆಡ ಬೇಕಾದ ಅನಿವಾರ್ಯತೆ ಇದೆ.
ಪುಣೆಯಂತೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಮ್ಯಾಕ್ಸ್‌ವೆಲ್, ಮನನ್ ವೊಹ್ರಾ, ಡೇವಿಡ್ ಮಿಲ್ಲರ್‌ರಂತಹ ಟ್ವೆಂಟಿ-20 ಸ್ಪೆಷಾಲಿಸ್ಟ್ ಬ್ಯಾಟ್ಸ್ ಮನ್‌ಗಳು, ಮಿಚಲ್ ಜಾನ್ಸನ್, ಮೋಹಿತ್‌ಶರ್ಮ, ಸಂದೀಪ್‌ಶರ್ಮಾರಂತಹ ಚಾಣಾಕ್ಷ ಬೌಲರ್‌ಗಳಿದ್ದರೂ ಕೂಡ ಅವರಿಂದ ಉತ್ತಮ ನಿರ್ವಹಣೆ ಬರದಿರುವುದು ಆ ತಂಡದ ನಾಯಕ ಡೇವಿಡ್ ಮಿಲ್ಲರ್‌ಗೆ ದೊಡ್ಡ ತಲೆನೋವಾಗಿದೆ.
ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ವಿರಾಟ್ ಕೊಹ್ಲಿ ಪಡೆ :
ಬೆಂಗಳೂರು, ಏ.17- ಬ್ಯಾಟಿಂಗ್‌ನಲ್ಲಿ ಸರ್ವ ಶ್ರೇಷ್ಠ ತಂಡವೆಂದು ಬಿಂಬಿಸಿ ಕೊಂಡಿರುವ ಆರ್‌ಸಿಬಿ ತಂಡವು ಇಂದು ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಎದುರಿಸಿ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ವಿರಾಟ್ ಕೊಹ್ಲಿ ಪಡೆ ತೊಡಗಿದೆ. ಬ್ಯಾಟಿಂಗ್ ಪಿಚ್ ಎಂದೇ ಬಿಂಬಿಸಿಕೊಂಡಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ವಿರುದ್ಧ ಎಬಿಡಿವಿಲಿಯರ್ಸ್ (82), ವಿರಾಟ್ ಕೊಹ್ಲಿ (75), ಶರ್ಫಾರಾಜ್‌ಖಾನ್ (35)ರ ರೋಚಕ ಬ್ಯಾಟಿಂಗ್‌ನಿಂದ 227 ರನ್‌ಗಳಿಸುವ ಮೂಲಕ 45 ರನ್‌ಗಳ ವಿರೋಚಿತ ಗೆಲುವು ಸಾಧಿಸಿ ಆಟಗಾರರಲ್ಲಿ ಹುಮ್ಮಸ್ಸು ಮೂಡಿದೆ.
ಆದರೆ ಕ್ರಿಸ್‌ಗೇಲ್‌ರ ಬ್ಯಾಟಿಂಗ್ ವೈಫಲ್ಯ ಹಾಗೂ ಮಿಚಲ್‌ಸ್ಟ್ರಾಕ್, ಬದ್ರಿಯವರ ಅನುಪಸ್ಥಿತಿಯಲ್ಲಿ ತಂಡ ಬೌಲಿಂಗ್ ವಿಭಾಗದಲ್ಲಿ ಎಡವಿದ್ದು ಈ ಪಂದ್ಯದಲ್ಲಿ ಆ ವಿಭಾಗದತ್ತ ವಿರಾಟ್ ಪಡೆ ಹೆಚ್ಚು ಒತ್ತು ನೀಡಲಿದೆ. ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡದ ವಿರುದ್ಧ ಸೋಲು ಕಂಡು ಕಿಂಗ್ಸ್ ಇಲೆವೆನ್ ವಿರುದ್ಧ ಜಯ ಸಾಧಿಸಿರುವ ಡೆಲ್ಲಿ ತಂಡವು ಇಂದು ಆರ್‌ಸಿಬಿಯನ್ನು ಮಣಿಸಲು ಮುಂದಾಗಿದೆ. ಡೆಲ್ಲಿ ತಂಡದಲ್ಲೂ ಕೂಡ ಡೆಂಟನ್ ಡಿ ಕಾಕ್, ಅಗರ್‌ವಾಲ್, ಡುಮಿನಿಯಂತಹ ಬ್ಯಾಟ್ಸ್ ಮನ್‌ಗಳು, ಜಹೀರ್‌ಖಾನ್, ಅಮಿತ್‌ಮಿಶ್ರಾರಂತಹ ಘಟಾನುಘಟಿ ಬೌಲರ್‌ಗಳಿದ್ದು ಪಂದ್ಯ ರೋಚಕತೆ ಮೂಡಿಸಿದೆ.