ಕ್ರೀಡೆ

ಹಾಕಿ ಟೆಸ್ಟ್ ಸರಣಿ: ಆಸೀಸ್‌ಗೆ ಆಘಾತ; ಕನ್ನಡಿಗ ಸುನಿಲ್ ಏಕೈಕ ಗೋಲು

Pinterest LinkedIn Tumblr

india-australia-hockey-test-series

ಪರ್ತ್, ನ.8: ‘ಕೊಡಗಿನ ಕುವರ’ ಎಸ್.ವಿ. ಸುನಿಲ್ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಇಂದು ಇಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯ ವಿರುದ್ಧದ ಹಾಕಿ ಟೆಸ್ಟ್ ಸರಣಿಯ ಮೂರನೆ ಪಂದ್ಯದಲ್ಲಿ ಭಾರತ ತಂಡ 1-0 ಅಂತರದಿಂದ ಗೆಲುವು ಸಾಧಿಸಿದೆ.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ನಾಲ್ಕು ಪಂದ್ಯಗಳ ಹಾಕಿ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

100ನೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ರೂಪಿಂದರ್ ಪಾಲ್ ಸಿಂಗ್ ಖಾಯಂ ನಾಯಕ ಸರ್ದಾರ್ ಸಿಂಗ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಮೊದಲಾರ್ಧದಲ್ಲಿ ಭಾರತದ ಆಟಗಾರರು ಆಸೀಸ್‌ನ ಡಿಫೆಂಡರ್‌ಗಳಿಗೆ ಸಮಸ್ಯೆಯೊಡ್ಡಿದ್ದರೂ ಗೋಲು ಬಾರಿಸಲು ವಿಫಲವಾದರು.

ದ್ವಿತೀಯಾರ್ಧದಲ್ಲೂ ಉಭಯ ತಂಡಗಳಿಂದ ಗೋಲು ಬರಲಿಲ್ಲ. 34ನೆ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ ನೀಡಿದ ಪಾಸನ್ನು ಸದುಪಯೋಗಪಡಿಸಿಕೊಂಡ ಎಸ್.ವಿ. ಸುನಿಲ್ ಚೆಂಡನ್ನು ಸೊಗಸಾಗಿ ಗೋಲು ಪೆಟ್ಟಿಗೆಯೊಳಗೆ ತಲುಪಿಸಲು ಯಶಸ್ವಿಯಾದರು. ಅಂತಿಮ ಅವಧಿಯಲ್ಲಿ ಆಸ್ಟ್ರೇಲಿಯ ತಂಡ ಭಾರತದ ರಕ್ಷಣಾಕೋಟೆಯನ್ನು ಬೇಧಿಸಲು ವಿಫಲ ಯತ್ನ ನಡೆಸಿತು. ಟೆಸ್ಟ್ ಸರಣಿಯ ನಾಲ್ಕನೆ ಹಾಗೂ ಕೊನೆಯ ಪಂದ್ಯ ರವಿವಾರ ಇಲ್ಲಿ ನಡೆಯುವುದು.

-ಕೃಪೆ: http://vbnewsonline.com

Write A Comment