ಕ್ರೀಡೆ

‘ಕರ್ನಾಟಕ ನನ್ನ ಮನೆ; ಆಂಧ್ರ ಅತ್ತೆ ಮನೆ’: ಯಂಡಮೂರಿ ವೀರೇಂದ್ರನಾಥ

Pinterest LinkedIn Tumblr

ಯ಻ನದ಻ಮುರಿ‘ಕರ್ನಾಟಕ ನನ್ನ ಮನೆ; ಆಂಧ್ರ ಅತ್ತೆ ಮನೆ’ ಎಂದು ಹೇಳುತ್ತ ನಕ್ಕರು ಯಂಡಮೂರಿ ವೀರೇಂದ್ರನಾಥ.

ತಮ್ಮ ಮಾತಿನ ಬಗ್ಗೆ ಕುತೂಹಲ ವ್ಯಕ್ತಪಡಿಸಿದವರಿಗೆ ಆ ಕುರಿತ ವಿವರ ನೀಡಿದರು: ‘ನನ್ನ ತಾಯಿ ಸರಸ್ವತಿ ದೇವತೆ. ಆಕೆ ನೆಲೆಸಿರುವುದು ಕರ್ನಾಟಕದಲ್ಲಿ. ಅತ್ತೆ ಮನೆ ಆಂಧ್ರದಲ್ಲಿ… ಅಂದರೆ ಲಕ್ಷ್ಮೀ’.

ಸಾಹಿತ್ಯ ಮಾತ್ರವಲ್ಲ; 75ಕ್ಕೂ ಹೆಚ್ಚು ತೆಲುಗು ಸಿನಿಮಾಗಳಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿರುವ ಯಂಡಮೂರಿ ಅವರಿಗೆ ಕರ್ನಾಟಕದ ಬಗ್ಗೆ ಹೆಚ್ಚು ಅಭಿಮಾನವಿದೆ. ಜೀವನೋಪಾಯಕ್ಕಾಗಿ ಹಣ ಗಳಿಸಲು ತಾವು ತೆಲುಗು ಭಾಷೆಯಲ್ಲಿ ಬರೆಯುವುದಾಗಿ ಹೇಳುವ ಯಂಡಮೂರಿ, ಸರಸ್ವತಿ ತಾಣವೆನಿಸಿದ ಕರ್ನಾಟಕಕ್ಕೆ ಬರುವುದು ಖುಷಿ ಕೊಡುತ್ತದೆ ಎನ್ನುತ್ತಾರೆ.

ಯಶವಂತ ಸರದೇಶಪಾಂಡೆ ನಿರ್ದೇಶನದ ‘ಯಾರಿಗೆ ಇಡ್ಲಿ’ ಚಿತ್ರದ ಹಾಡುಗಳ ಸಿ.ಡಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಈಚೆಗೆ ಬೆಂಗಳೂರಿಗೆ ಬಂದಿದ್ದ ಯಂಡಮೂರಿ, ಕನ್ನಡ ಹಾಗೂ ತೆಲುಗು ಚಿತ್ರರಂಗದ ಬಗ್ಗೆ ಮತ್ತೆ ಮತ್ತೆ ಪ್ರಸ್ತಾಪ ಮಾಡಿದರು. ಜತೆಗೆ, ನಿರ್ಮಾಪಕ ಹರೀಶ್ ಅವರಿಗೆ ತೆಲುಗಿನಲ್ಲಿ ಚಿತ್ರ ನಿರ್ಮಿಸಿ ಒಂದು ರಾಷ್ಟ್ರಪ್ರಶಸ್ತಿ ಪಡೆಯುವಂತೆಯೂ ಕೋರಿದರು. ‘ಯಾಕೆಂದರೆ ಈವರೆಗೆ ಯಾವುದೇ ಒಂದು ತೆಲುಗು ಚಿತ್ರ ಕೂಡ ರಾಷ್ಟ್ರ ಪ್ರಶಸ್ತಿ ಪಡೆದಿಲ್ಲ. ಹರೀಶ್ ಆ ಕೊರತೆಯನ್ನು ಸರಿದೂಗಿಸಲಿ’ ಎಂದು ಆಶಿಸಿದರು.

ಪ್ರತಿಭಾವಂತ ವಾಸುದೇವರಾವ್
ಕನ್ನಡ ಸಿನಿಮಾಗಳ ಬಗ್ಗೆ ಯಂಡಮೂರಿ ಅವರಿಗೆ ಹೆಚ್ಚು ಅಭಿಮಾನ ಇದೆಯಂತೆ. ಇಲ್ಲಿನ ಹಲವು ಹಿರಿಯ ಕಲಾವಿದರು ಅವರಿಗೆ ಚಿರಪರಿಚಿತರು. ಆ ಪೈಕಿ ಯಂಡಮೂರಿ ನೆನಪಿಸಿಕೊಂಡಿದ್ದು ವಾಸುದೇವರಾವ್ ಅವರನ್ನು.

‘ನಾನು ಚೋಮನದುಡಿ ಸಿನಿಮಾ ನೋಡಿದ್ದೆ. ಅದರ ಹೀರೊ ವಾಸುದೇವರಾವ್ ಅವರ ಅಭಿನಯ ನನ್ನನ್ನು ಮಂತ್ರಮುಗ್ಧಗೊಳಿಸಿತ್ತು. ಆ ಬಳಿಕ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂತು. ನಾನು ಆಗ ರಾಕ್ಷಸುಡು ಚಿತ್ರದ ಕಥೆ, ಸಂಭಾಷಣೆ ಬರೆಯುತ್ತಿದ್ದೆ. ವಾಸುದೇವರಾವ್ ಅಭಿನಯ ಪ್ರತಿಭೆ ನೋಡಿ, ತಕ್ಷಣವೇ ಅವರನ್ನು ಸಿನಿಮಾಕ್ಕೆ ಬುಕ್ ಮಾಡಲು ಸೂಚಿಸಿದೆ. ಆ ಬಳಿಕವೂ ನಾನು ಚಿರಂಜೀವಿ ಅವರನ್ನು ನಾಯಕನನ್ನಾಗಿಸಿಕೊಂಡು ಒಂದು ಸಿನಿಮಾ ನಿರ್ದೇಶಿಸಿದೆ. ಅದರಲ್ಲಿನ ಒಂದು ಪಾತ್ರವನ್ನು ಮಾಡಲು ವಾಸುದೇವರಾವ್ ಅವರಂಥ ಪ್ರತಿಭಾವಂತ ಕಲಾವಿದ ಆಂಧ್ರದಲ್ಲಿ ಇರಲಿಲ್ಲ. ಹೀಗಾಗಿ ಅವರನ್ನೇ ಕರೆಸಿದೆ. ಚಿರಂಜೀವಿ ತಂದೆ ಪಾತ್ರವನ್ನು ಅವರಿಗೆ ಕೊಟ್ಟಿದ್ದೆ.

ವಾಸುದೇವರಾವ್ ಬಗ್ಗೆ ನನ್ನಲ್ಲಿ ಸಾಕಷ್ಟು ಗೌರವ ಇದೆ’ ಎನ್ನುವ ಯಂಡಮೂರಿ, ಪ್ರತಿಭೆ ಎಲ್ಲಿಯೇ ಇದ್ದರೂ ಅದನ್ನು ಗುರುತಿಸಬೇಕು ಎಂದು ಹೇಳಲಿಕ್ಕಾಗಿಯೇ ಇದನ್ನು ಹಂಚಿಕೊಂಡಿದ್ದಾಗಿ ನುಡಿದರು.

ಸಿನಿಮಾದ ಪ್ರತಿಯೊಬ್ಬ ಕಲಾವಿದ ಅಥವಾ ತಂತ್ರಜ್ಞನಿಗೆ ತನ್ನ ವೃತ್ತಿಯ ಬಗ್ಗೆ ಪ್ರೀತಿ ಇದ್ದರೆ ಯಶಸ್ಸು ಗಳಿಸಲು ಸಾಧ್ಯ ಎನ್ನುವುದು ಯಂಡಮೂರಿ ಪ್ರತಿಪಾದನೆ. ಈ ಕುರಿತು ಅವರು ಚಿರಂಜೀವಿ ಅವರನ್ನು ಮತ್ತೆ ಮತ್ತೆ ಉದಾಹರಿಸುತ್ತಾರೆ. ಬೆಂಗಳೂರಿನಲ್ಲಿ ಚಿರಂಜೀವಿ ಅವರಿಗೆ ಸೇರಿದ ಫಾರ್ಮ್‌ಹೌಸ್‌ ಇದೆ. ‘ಮೃಗರಾಜು’ ಚಿತ್ರದ ಕಥೆ ಚರ್ಚಿಸಲು ಯಂಡಮೂರಿ ಹಾಗೂ ಚಿರಂಜೀವಿ ಇಲ್ಲಿಗೆ ಬಂದಿದ್ದರಂತೆ.

ಚಿತ್ರಕಥೆ ಹೇಗಿರಬೇಕೆಂದು ರಾತ್ರಿ ಎರಡು ಗಂಟೆಯವರೆಗೆ ಚರ್ಚೆ ನಡೆಯಿತು. ಎರಡೂವರೆಗೆ ಎಲ್ಲರೂ ತಮ್ಮ ಕೊಠಡಿಗೆ ಹೋದರು. ‘ಬೆಳಿಗ್ಗೆ ನಾಲ್ಕೂವರೆಗೆ ನನಗೆ ಯಾಕೋ ಎಚ್ಚರವಾಯಿತು. ಆಗ ಹೊರಗೆ ನೋಡಿದೆ. ನನ್ನ ರೂಮಿನ ಕಿಟಕಿಗೆ ಹಾಕಿದ್ದ ಪರದೆ ಮೇಲೆ ಬೀಳುತ್ತಿದ್ದ ವ್ಯಕ್ತಿಯೊಬ್ಬನ ನೆರಳು–ಬೆಳಕು ಕುತೂಹಲ ಮೂಡಿಸಿತು. ಹೊರಗೆ ಬಂದು ನೋಡಿದಾಗ ಚಿರಂಜೀವಿ ಎಕ್ಸೆರ್‌ಸೈಜ್ ಮಾಡುತ್ತಿದ್ದರು.

ಅಂದರೆ ಅವರು ನಿದ್ರೆ ಮಾಡಿದ್ದು ಬರೀ ಎರಡು ಗಂಟೆ. ರಾತ್ರಿ ಎಷ್ಟು ಹೊತ್ತಿಗೆ ಮಲಗಿದರೂ ಬೆಳಿಗ್ಗೆ ನಾಲ್ಕೂವರೆಗೆ ಎದ್ದು ಅವರು ಕಟ್ಟುನಿಟ್ಟಾದ ಜಿಮ್‌ ಮಾಡುತ್ತಿದ್ದರು. ಚಿತ್ರವೊಂದರ ಭಾಗವಾಗುವುದೆಂದರೆ ಹೀಗೆ ಅಲ್ಲವೇ?’ ಎಂದು ಯಂಡಮೂರಿ ಪ್ರಶ್ನಿಸುತ್ತಾರೆ.

ರಂಗಕರ್ಮಿ
ರಂಗಭೂಮಿ ಹಿನ್ನೆಲೆಯಿಂದ ಚಿತ್ರೋದ್ಯಮಕ್ಕೆ ಬಂದಿರುವವರು ಸಂವೇದನೆಯ ಸಿನಿಮಾಗಳನ್ನು ಕೊಡುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಯಂಡಮೂರಿ ಅವರಲ್ಲಿ, ತಮ್ಮ ಸಿನಿಮಾಕ್ಕೆ ಯಶವಂತ ಸರದೇಶಪಾಂಡೆ ಆಯ್ದುಕೊಂಡ ಕಥೆಯ ಬಗ್ಗೆ ಭರವಸೆಯಿದೆ. ‘ಯಾರಿಗೆ ಇಡ್ಲಿ ಎಂಬ ಸಿನಿಮಾ ಮೇಲ್ನೋಟಕ್ಕೆ ಕಾಮಿಡಿಯಂತೆ ಕಾಣುತ್ತದೆ.

ನಾನು ಅದರ ಕತೆಯನ್ನು ಕೇಳಿದ್ದೇನೆ. ಅದು ಕಾಮಿಡಿ ಅಲ್ಲ; ಬದಲಾಗಿ ಕ್ಲಾಸಿಕಲ್ ಸಿನಿಮಾದ ಮಾದರಿಯಲ್ಲಿದೆ’ ಎನ್ನುತ್ತಾರೆ. ಯಾವುದೇ ಸಿನಿಮಾದ ಯಶಸ್ಸು ಎರಡು ಸಂಗತಿಗಳ ಮೇಲೆ ಅವಲಂಬಿತವಾಗಿದೆ ಎನ್ನುವ ಅವರು, ‘ಶೃಂಗಾರ, ಕಾಮಿಡಿ, ಭೀಭತ್ಸ್ಯ ಇತ್ಯಾದಿ ರಸಾಸ್ವಾದನ ಅಳವಡಿಸುವುದು ಒಂದಾದರೆ, ತಾವೂ ಸಿನಿಮಾದ ಒಂದು ಭಾಗವೆಂಬಂತೆ ಪ್ರೇಕ್ಷಕರಿಗೆ ಅನಿಸಬೇಕು. ನಿರೂಪಣೆ ಹಾಗಿದ್ದರೆ ಚಿತ್ರ ಹಿಟ್ ಆಗುವುದು ಖಚಿತ’ ಎಂಬ ಕಿವಿಮಾತು ಹೇಳುತ್ತಾರೆ.

ಯಶಸ್ಸು
ರಾತ್ರಿ ಬೆಳಕಾಗುವುದರೊಳಗೆ ಗಳಿಸುವ ದಿಢೀರ್ ಯಶಸ್ಸು ಶಾಶ್ವತವಲ್ಲ ಎನ್ನುವ ಯಂಡಮೂರಿ, ಯಶಸ್ಸಿನ ಕುರಿತ ಬೇರೊಂದು ವ್ಯಾಖ್ಯಾನ ಮುಂದಿಡುತ್ತಾರೆ: ದೊಡ್ಡ ದೊಡ್ಡ ನಿರ್ದೇಶಕ, ಹೀರೊ ಅಥವಾ ನಿರ್ಮಾಪಕರು ತಮ್ಮ ಸಿನಿಮಾವನ್ನು ಮೊದಲು ಪ್ರೀತಿಸಬೇಕು. ತಮ್ಮ ತಮ್ಮ ವೃತ್ತಿಯನ್ನು ಅವರು ಪ್ರೀತಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಇನ್ನೊಬ್ಬ ವ್ಯಕ್ತಿ ಇರುತ್ತಾನೆ; ಆ ಮನುಷ್ಯನ ಹೆಸರು ‘ಯಶಸ್ಸು’. ಸಮಯ ಸಿಕ್ಕಾಗ ಆತನ ಜತೆ ಪ್ರೀತಿಯಿಂದ ಮಾತನಾಡಬೇಕು. ಅದು ಮುಂದಿನ ದಿನಗಳಿಗೆ ದಿಕ್ಸೂಚಿ.

ನಾನು ‘ಅಭಿಲಾಷ’ ಚಿತ್ರಕ್ಕೆ ಕೆಲಸ ಮಡುತ್ತಿದ್ದಾಗ, ನಾಯಕ ಚಿರಂಜೀವಿಗೆ ಮಗ ಹುಟ್ಟಿದ. ಆತನಿಗೆ ರಾಮಚರಣ ತೇಜ ಎಂದು ಹೆಸರಿಟ್ಟರು. ಆ ಸಿನಿಮಾಕ್ಕೆ ಸಂಭಾಷಣೆಗೆ ನೆರವಾದ ಸತ್ಯಮೂರ್ತಿ ಸಹ ತಂದೆಯಾದರು. ಅವರ ಮಗನ ಹೆಸರು ಸರಸ್ವತಿ ಪ್ರಸಾದ್. ಚಿರಂಜೀವಿಗೆ ತಮ್ಮ ಮಗನನ್ನು ಹೀರೊ ಮಾಡುವ ಆಸೆಯಿತ್ತು. ಕರಾಟೆ, ಡಾನ್ಸ್, ಜಿಮ್, ಏನೇನೋ ಮಾಡಿಸಿದರು. ‘ಮಗಧೀರ’ ಹಿಟ್ ಆಗುವುದರೊಂದಿಗೆ ರಾಮ್‌ಚರಣ ತೇಜ ಸೂಪರ್‌ ಹೀರೊ ಆಗಿಬಿಟ್ಟ.

ಇನ್ನು ಸತ್ಯಮೂರ್ತಿ ಮಗನಿಗೆ ಸಂಗೀತದ ಬಗ್ಗೆ ಹುಚ್ಚು. ‘ಜಗದೇಕ ವೀರುಡು ಅತಿಲೋಕ ಸುಂದರಿ’ ಚಿತ್ರ ನಿರ್ಮಾಣವಾಗುತ್ತಿದ್ದಾಗ, ಎಂಟು ವರ್ಷದ ಹುಡುಗನನ್ನು ಮದ್ರಾಸ್‌ಗೆ ಕರೆದೊಯ್ದೆವು. ಹಾಡೊಂದರ ರಾಗವನ್ನು ಕೇಳಿ ‘ಸಾರ್‌ ಇದು ಶಿವರಂಜನಿ ರಾಗ ಅಲ್ವಾ?’ ಎಂದು ಪ್ರಶ್ನಿಸಿದ. ಆ ಮಾತನ್ನು ಕೇಳಿ ಇಳಯರಾಜ ಅವರಿಗೆ ಥ್ರಿಲ್ ಆಯಿತು. ಯಾಕೆಂದರೆ ಆ ರಾಗವನ್ನು ಗುರುತಿಸುವುದು ಬಲು ಕಠಿಣವಾಗಿತ್ತು. ಆತನ ಬೆನ್ನು ತಟ್ಟಿ ‘ನಿನಗೆ ಖಂಡಿತ ಭವಿಷ್ಯವಿದೆ’ ಎಂದು ಹೊಗಳಿದರು.

20 ವರ್ಷಗಳ ಬಳಿಕ ಆ ಹುಡುಗ ತೆಲುಗು, ಹಿಂದಿ, ಮಲಯಾಳಂ, ತಮಿಳು ಸಿನಿಮಾಕ್ಕೆ ಸಂಗೀತ ನೀಡುವ ಮಟ್ಟಕ್ಕೆ ಬೆಳೆದಿದ್ದಾನೆ. ಅಷ್ಟೇ ಅಲ್ಲ; ಹಾಡು ಬರೆಯುತ್ತಾನೆ, ಹಾಡುತ್ತಾನೆ. ಕಮಲ್‌ಹಾಸನ್ ಅವರ ‘ದಶಾವತಾರಂ’ ಆತನಿಗೆ ಖ್ಯಾತಿ ತಂದುಕೊಟ್ಟಿದೆ. ಆತನ ಹೆಸರು ಈಗ– ದೇವಿಶ್ರೀ ಪ್ರಸಾದ್.

Write A Comment