ಕ್ರೀಡೆ

ಹಾಸ್ಯಗಾರ್ತಿ ಪಾತ್ರದಲ್ಲಿ ಕಾಣಿಸಿಕೊಂಡು ಜನಪ್ರಿಯರಾದವರು ವಿದ್ಯುಲ್ಲೇಖಾ ರಾಮನ್‌

Pinterest LinkedIn Tumblr

vidyaದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಹಾಸ್ಯಗಾರ್ತಿ ಪಾತ್ರದಲ್ಲಿ ಕಾಣಿಸಿಕೊಂಡು ಜನಪ್ರಿಯರಾದವರು ವಿದ್ಯುಲ್ಲೇಖಾ ರಾಮನ್‌. ಚಿತ್ರೋದ್ಯಮಕ್ಕೆ ಕಾಲಿರಿಸಿದ ಎರಡೇ ವರ್ಷಗಳಲ್ಲಿ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಪ್ರತಿಭಾನ್ವಿತೆ ಇವರು. ಪೋಷಕ ಹಾಗೂ ಹಾಸ್ಯ ಪ್ರಧಾನ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದು ತಮಗೆ ದೊರೆತ ಕೆಲವು ಅವಕಾಶಗಳ ಬಗ್ಗೆ ಅವರಿಗೆ ಸಾಕಷ್ಟು ಬೇಸರವಿದೆ. ಅಲ್ಲದೆ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸುವುದು ಮಹಿಳೆಯರಿಗೆ ಸವಾಲೇ ಸರಿ ಎಂದು  ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸವಾಲುಗಳ ಸರಮಾಲೆಯೇ ಈ ಕ್ಷೇತ್ರದಲ್ಲಿ ಎದುರಾಗುತ್ತವೆ ಎಂದಿರುವ ಅವರು, ‘ಸಿನಿಮಾ ಕ್ಷೇತ್ರದಲ್ಲಿ ಹಾಸ್ಯಗಾರ್ತಿಯ ಪಾತ್ರದಲ್ಲಿ ಅಭಿನಯಿಸುವುದು ಹೂವಿನ ಮೇಲೆ ಹೆಜ್ಜೆ ಇಟ್ಟಂತಲ್ಲ ಎಂದಿದ್ದಾರೆ. ನಾಯಕ ನಟಿಯರೂ ಕೆಲವೊಮ್ಮೆ ಒಳ್ಳೆಯ ಪಾತ್ರಕ್ಕಾಗಿ ತಡಕಾಡುವುದಿದೆ. ಅಲ್ಲದೆ ಮಹತ್ವವಲ್ಲದ ಕೆಲವು ಪಾತ್ರಗಳ ಅವಕಾಶ ಬಂದಾಗ ಭಯ ಬೀಳುವ ಸಂದರ್ಭವೂ ಇರುತ್ತದೆ’ ಎಂದಿದ್ದಾರೆ. ಅಸಂಬದ್ಧ ಪಾತ್ರಗಳು ಒಂದರ ಮೇಲೊಂದು ಬಂದದ್ದರಿಂದ ಬೇಸತ್ತು ಸಿನಿಮಾ ಕ್ಷೇತ್ರಕ್ಕೇ ಗುಡ್‌ಬೈ ಹೇಳಲು ಈ ಮೊದಲು ವಿದ್ಯುಲ್ಲೇಖಾ ತೀರ್ಮಾನಿಸಿದ್ದರು. ಈ ಕ್ಷೇತ್ರ ತೊರೆದು ವಿದೇಶದಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ಉನ್ನತ ವ್ಯಾಸಂಗ ಮಾಡಬೇಕೆಂದು ನಿರ್ಧರಿಸಿದ್ದರು.

‘ನನ್ನ ಮನಸ್ಸಿನ ನೋವನ್ನು ಪ್ರಖ್ಯಾತ ನಾಯಕಿಯೊಬ್ಬರ ಬಳಿ ಹಂಚಿಕೊಂಡೆ. ಆಗ ಅವರು ಹೇಳಿದ ಮಾತು ನನ್ನನ್ನು ಇನ್ನಷ್ಟು ಚಿಂತೆಗೀಡು ಮಾಡಿತ್ತು. ‘ಚಿಕ್ಕ ಪಾತ್ರಗಳ ಮೂಲಕವೇ ಆದರೂ ಗುರುತಿಸಿಕೊಳ್ಳುವುದು ಕಷ್ಟವೂ ಅಲ್ಲ, ಜನಪ್ರಿಯತೆಯೂ ಬೇಗನೆ ಸಿಗುತ್ತದೆ. ಹೀಗಾಗಿ ನೀನು ಖುಷಿ ಪಡಬೇಕು. ಅದೂ ಅಲ್ಲದೆ ಪೋಷಕ ಪಾತ್ರಗಳಲ್ಲಿ ಅಭಿನಯಿಸುವವರಿಗೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ದೊರೆಯುತ್ತದೆ’ ಎಂದಿದ್ದರು ಅವರು. ಹೀಗಾಗಿಯೇ ಸಿನಿಮಾ ಕ್ಷೇತ್ರದಲ್ಲಿಯೇ ಉಳಿದು ಗುರುತಿಸಿಕೊಳ್ಳಬೇಕು ಎಂದು ಮನಸ್ಸು ಮಾಡಿದೆ’ ಎನ್ನುತ್ತಾರೆ ಅವರು.

ಗೌತಮ್‌ ವಾಸುದೇವ್‌ ಮೆನನ್‌ ಅವರ ‘ನೀತಾನೆ ಎನ್‌ ಪೊನ್‌ವಸಂತಮ್‌’ ಸಿನಿಮಾಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿದ ವಿದ್ಯುಲ್ಲೇಖಾ, ‘ಜಿಲ್ಲಾ’, ‘ವೀರಂ’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕೆಲವೇ ಕೆಲವು ನಿರ್ದೇಶಕರು ಮಹಿಳಾ ಹಾಸ್ಯ ಕಲಾವಿದರಿಗೂ ಉತ್ತಮ ಅವಕಾಶ ನೀಡುವ ಮೂಲಕ ಬದಲಾವಣೆಯ ಹೆಜ್ಜೆ ಇಟ್ಟಿದ್ದಾರೆ. ಈ ಬಗ್ಗೆ ಖುಷಿ ಇದೆ ಎನ್ನುವ ಅವರು, ‘ಮಹಿಳೆಯರಿಗೆ ಪೋಷಕ ಹಾಗೂ ಹಾಸ್ಯ ಪಾತ್ರಗಳನ್ನು ನೀಡುತ್ತಿರುವ ರಾಜೇಶ್‌ ಹೊಸ ಟ್ರೆಂಡ್‌ ಹುಟ್ಟುಹಾಕಿದ್ದಾರೆ. ನಾಯಕ ಹಾಗೂ ನಾಯಕಿಯರೊಂದಿಗೆ ಸಿನಿಮಾ ಪೂರ್ತಿ ಕಾಣಿಸಿಕೊಳ್ಳುವ ಅವಕಾಶವನ್ನು ಹಾಸ್ಯನಟರಿಗೂ ನೀಡುವ ಟ್ರೆಂಡ್‌ ಉತ್ತಮ ಬೆಳವಣಿಗೆ. ತಮಿಳು ಚಿತ್ರ ‘ವಾಸುವಮ್‌ ಸರವಣನುಮ್‌ ಒನ್ನ ಪಡಿಚವಂಗ’ ಸಿನಿಮಾದಲ್ಲಿ ನಾಯಕಿ ತಮನ್ನಾಗೆ ಇರುವಷ್ಟೇ ಮುಖ್ಯ ಪಾತ್ರ ನನಗೂ ಲಭಿಸಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಪುರುಷ ಹಾಸ್ಯ ಕಲಾವಿದರಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ ಎನ್ನುವುದನ್ನು ಒಪ್ಪಿಕೊಳ್ಳುವ ಅವರು, ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಮರೆಯದೆ ಅವಕಾಶ ನೀಡುತ್ತಿದ್ದಾರೆ ಎನ್ನುವ ಕುರಿತು ಸಮಾಧಾನವನ್ನೂ ಪಟ್ಟುಕೊಳ್ಳುತ್ತಾರೆ. ಸೆಪ್ಟೆಂಬರ್‌ನಲ್ಲಿ ಬೆಳ್ಳಿತೆರೆಗೆ ಬರಲಿರುವ ‘ಪುಲಿ’ ಚಿತ್ರದಲ್ಲಿ ನಟಿಸಿರುವ ವಿದ್ಯುಲ್ಲೇಖಾ, ಆ ಚಿತ್ರದ ಬಗ್ಗೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಇದುವರೆಗೆ ದಕ್ಕಿದ ಅವಕಾಶಗಳಿಗಿಂತ ತೀರಾ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Write A Comment