ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಎರಡು ದಶಕಗಳಿಂದ ಕಾರ್ಯೋನ್ಮುಕರಾಗಿದ್ದ ಹವ್ಯಾಸಿ ಮತ್ತು ವೃತ್ತಿನಿರತ ಕರ್ನಾಟಕ ಪತ್ರಕರ್ತರ ನೂತನ ಬಳಗವನ್ನು, ಮಂಗಳೂರಿಂದ ಆಗಮಿಸಿದ ಉದಯವಾಣಿ ದೈನಿಕ, ಸುದ್ದಿ ವಿಭಾಗದ ಮುಖ್ಯಸ್ಥರಾದ ಶ್ರೀ ಮನೋಹರ್ ಪ್ರಸಾದ್ ರವರು ದುಬಾಯಿ ಫಾರ್ಚೂನ್ ಫ್ಲಾಜಾ ಹೋಟೆಲ್ ಸಭಾಂಗಣದಲ್ಲಿ 2014 ನವೆಂಬರ್ 9ನೇ ತಾರೀಕು ಸಂಜೆ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಸಮಾರಂಭದಲ್ಲಿ ಯು.ಎ.ಇ. ಎಕ್ಸ್ಚೆಂಜ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸುಧೀರ್ ಕುಮಾರ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಅಫ್ ಹೋಟೆಲ್ಸ್ ನ ಚೇರ್ಮನ್ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿಯವರು ಮತ್ತು ಯು.ಎ.ಇ. ಕಾರ್ಯ ನಿರತ ಪತ್ರಿಕಾ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಾರಂಭದದಲ್ಲಿ ನಮ್ಮ ಟಿ.ವಿ. ಯ ದುಬಾಯಿ ಪ್ರತಿನಿಧಿ ಶ್ರೀ ವಿನಯ ನಾಯಕ್ ಸ್ವಾಗತಿಸಿದರು.
ಗಣ್ಯರಿಂದ ನೂತನ ಬಳಗಕ್ಕೆ ಶುಭಹಾರೈಕೆ
ಶ್ರೀ ಸರ್ವೋತ್ತಮ ಶೆಟ್ಟಿಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಪತ್ರಕರ್ತರ ಬಳಗಕ್ಕೆ ಶುಭವನ್ನು ಹಾರೈಸಿದರು. ಶ್ರೀ ಸುಧೀರ್ ಕುಮಾರ್ ಶೆಟ್ಟಿಯವರು ಪತ್ರಕರ್ತರು ಒಟ್ಟಿಗೆ ಸೇರಿ ಕಟ್ಟಿದ ಬಳಗದ ಕಾರ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವಂತೆ ಶುಭವನ್ನು ಹಾರೈಸಿದರು.
ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡಿಗ ವರ್ಲ್ಡ್‌ನ ಮುಖ್ಯ ಸಂಪಾದಕರಾದ ಶ್ರೀ ಹರೀಶ್ ಶೇರಿಗಾರ್, ನಿರೆಲ್ ಸಿನಿಮಾ ನಿರ್ದೇಶಕರಾದ ಶ್ರೀ ಶೋಧನ್ ಪ್ರಸಾದ್, ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರಕಾಶ್ ರಾವ್ ಪಯ್ಯಾರ್, ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ, ರೇಡಿಯೋ ಸ್ಪೈಸ್ ನ ಸಿ. ಇ. ಒ. ಶ್ರೀ ಹರ್ಮನ್ ಲೂವಿಸ್, ಅಬುಧಾಬಿ ಬಿಲ್ಲವ ಬಳಗದ ಅಧ್ಯಕ್ಷರಾದ ಶ್ರೀ ಮನೋಹರ್ ತೋನ್ಸೆ ಇವರುಗಳು ನೂತನ ಬಳಗದ ಕಾರ್ಯರಂಭಕ್ಕೆ ಶ್ಲಾಘನೆಯನ್ನು ಸಲ್ಲಿಸುತ್ತಾ ಹಲವಾರು ಸಲಹೆ ಸೂಚನೆಗಳೊಂದಿಗೆ ಶುಭವನ್ನು ಕೋರಿದರು.
ಮನೋಹರ್ ಪ್ರಸಾದ್ ರವರಿಗೆ ಹೃದಯಸ್ಪರ್ಶಿ ಸನ್ಮಾನ
ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ಬಹು ದೊಡ್ಡ ಸಾಧನೆ ಮಾಡಿರುವ ಶ್ರೀ ಮನೋಹರ್ ಪ್ರಸಾದ್ ಇತಿಹಾಸ ಸಂಶೋಧಕರಾಗಿ, ಕತೆಗಾರರಾಗಿ, ಕವಿಯಾಗಿ, ಚಲನಚಿತ್ರ ನಟರಾಗಿ, ದೃಶ್ಯಮಾಧ್ಯಮದ ವಾರ್ತಾ ವಾಚಕರಾಗಿ, ಹಲವಾರು ಬೃಹತ್ ಕಾರ್ಯಕ್ರಮಗಳ ನಿರೂಪಕರಾಗಿ ಬಹುಮುಖ ಪ್ರತಿಭಾನ್ವಿತರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಹಿತ ಐನೂರಕಿಂತಲೂ ಹೆಚ್ಚು ಪ್ರಶಸ್ತಿ ಸನ್ಮಾನಗಳನ್ನು ಪಡೆದು ಜನಪ್ರಿಯತೆಯನ್ನು ಪಡೆದಿರುವ ಹಿರಿಯ ಅನುಭವಿ ಪತ್ರಿಕೊಧ್ಯಮದ ಹಾದಿಯಲ್ಲಿ ಯಶಸ್ಸು ಕಂಡಿರುವ ಶ್ರೀ ಮನೋಹರ್ ಪ್ರಸಾದ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿದ ಗಣ್ಯರು ಸನ್ಮಾನ ಪ್ರಕ್ರೀಯೆ ನಡೆಸಿಕೊಟ್ಟರು.
ಸಮಾರಂಭಕ್ಕೆ ಶೋಭೆ ನೀಡಿದ ಅರ್ಥಪೂರ್ಣವಾದ ಸಂವಾದ ಕಾರ್ಯಕ್ರಮ
ಹವ್ಯಾಸಿ ಮತ್ತು ವೃತ್ತಿನಿರತ ಕರ್ನಾಟಕ ಪತ್ರಕರ್ತರ ಬಳಗ ನೀಡಿದ ಸನ್ಮಾನವನ್ನು ಸ್ವೀಕರಿಸಿ, ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ, ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಕಾರ್ಯದಕ್ಷತೆ, ಆಡಳಿತ ವ್ಯವಸ್ಥೆ ಮತ್ತು ಪ್ರಜೆಗಳ ನಡುವೆ ಮಾಧ್ಯಮ ಸೇತುವೆಯಾಗಿ ಕಾರ್ಯನಿರ್ವಹಿಸುವ ಜವಬ್ಧಾರಿಯನ್ನು ಉದಾಹರಣೆ ಸಹಿತ ತಮ್ಮ ಅನುಭವದ ಮಾತುಗಳೊಂದಿಗೆ ಹಂಚಿಕೊಂಡರು. ನಂತರ ಮಾಧ್ಯಮ ಪ್ರತಿನಿದಿಗಳೊಂದಿಗೆ ಹಲವಾರು ವಿಚಾರ ಧಾರೆಯೆನ್ನು ಪ್ರಶ್ನೋತ್ತರದೊಂದಿಗೆ ಸಂವಾದ ನಡೆಸಿಕೊಟ್ಟರು.
ಶ್ರೀ ವಿವೇಕ್ ವಂದನಾರ್ಪಣೆ ಸಲ್ಲಿಸಿದರು. ಕೊನೆಯಲ್ಲಿ ಫಾರ್ಚೂನ್ ಪ್ಲಾಜಾ ಹೋಟೆಲ್ ಆಯೋಜಿಸಿದ್ದ ಭೋಜನಕೂಟದಲ್ಲಿ ಸರ್ವರು ಭಾಗಿಯಾಗಿದ್ದರು.
ಗಣೇಶ್ ರೈ – ಯು.ಎ.ಇ.